ಹೊಸದಿಗಂತ ಡಿಜಿಟಲ್ ಡೆಸ್ಕ್:
ಗಣ್ಯವ್ಯಕ್ತಿಗಳ ಬಳಿಗೆ ತೆರಳುವಾಗ ‘ಮೆಟಲ್ ಡಿಟೆಕ್ಟರ್’ ನಿಂದ ಪರಿಶೀಲಿಸಿ, ನಂತರವಷ್ಟೇ ಅವರ ಬಳಿಹೋಗಲು ಅವಕಾಶ ನೀಡಲಾಗುತ್ತದೆ. ಹಾಗೆಯೇ ನಮ್ಮ ದೇಹ ಎಂಬ ಗಣ್ಯವ್ಯಕ್ತಿಗೆ ಆಹಾರವನ್ನು ನೀಡುವ ಮೊದಲು ಸಮರ್ಪಕವಾಗಿ ಪರಿಶೀಲಿಸಿ, ಏನನ್ನು ತಿನ್ನುತ್ತಿದ್ದೇವೆ? ಹೇಗೆ ತಿನ್ನುತ್ತಿದ್ದೇವೆ? ಯಾವಾಗ ತಿನ್ನುತ್ತಿದ್ದೇವೆ? ಎಂಬ ಪ್ರಶ್ನೆಗಳನ್ನು ಕೇಳಿಕೊಳ್ಳುವುದೂ ಅಷ್ಟೇ ಮುಖ್ಯ ಎಂದು ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಹೇಳಿದರು.
ಗೋಕರ್ಣದ ಅಶೋಕೆಯಲ್ಲಿರುವ ಶ್ರೀ ರಾಮಚಂದ್ರಾಪುರ ಮೂಲಮಠದಲ್ಲಿ ನಡೆಯುತ್ತಿರುವ ‘ಅನ್ನಬ್ರಹ್ಮ ಚಾತುರ್ಮಾಸ್ಯ’ದ ಅಂಗವಾಗಿ ಗುರುವಾರ ನಡೆದ ಧರ್ಮಸಭೆಯ ’ಅನ್ನಂ ಬ್ರಹ್ಮ’ ಪ್ರವಚನ ಸರಣಿಯಲ್ಲಿ ಅವರು ಆಶೀರ್ವಚನೆ ನೀಡಿದರು.

ಆಯುರ್ವೇದದ ಪ್ರಸಿದ್ಧ ವೈದ್ಯ ವಾಗ್ಭಟ ಮತ್ತು ಆರೋಗ್ಯದ ಅಧಿದೇವತೆ ಧನ್ವಂತರಿ ಕುರಿತ ಪ್ರಸಂಗವನ್ನು ಉಲ್ಲೇಖಿಸಿದ ಶ್ರೀಗಳು, ‘ಯಾರು ರೋಗರಹಿತರು? ಎಂಬ ಪಕ್ಷಿ ರೂಪದ ಧನ್ವಂತರಿಯ ಪ್ರಶ್ನೆಗೆ ವಾಗ್ಭಟರು ‘ಹಿತಭುಕ್, ಮಿತಭುಕ್, ಅಶಾಕಭುಕ್’ ಎಂಬ ಮೂರು ಪದಗಳಲ್ಲೇ ಉತ್ತರ ನೀಡಿರುವುದನ್ನು ವಿವರಿಸಿದರು. ಹಿತಭುಕ್ ಎಂದರೆ ದೇಹಕ್ಕೆ ಹಿತವಾದ ಆಹಾರವನ್ನು ಆಯ್ಕೆ ಮಾಡಿಕೊಂಡು ಸೇವಿಸುವವನು, ಮಿತಭುಕ್ ಎಂದರೆ ಅಗತ್ಯ ಪ್ರಮಾಣದಲ್ಲಿ ಮಾತ್ರ ಆಹಾರ ಸೇವಿಸುವವನು, ಅಶಾಕಭುಕ್ ಎಂದರೆ ಅತಿಯಾಗಿ ಸೊಪ್ಪು – ತರಕಾರಿಗಳನ್ನು ತಿನ್ನದವನು ಎಂದು ತಿಳಿಸಿದರು.
ಇತ್ತೀಚೆಗೆ ಮುಂಜಾನೆ ಪ್ರಯಾಣ ಮಾಡುವಾಗ ಬೆಳಗ್ಗೆ 4 ಗಂಟೆಗೇ ಹೋಟೆಲ್‌ಗಳ ಮುಂದೆ ಜನ ಸೇರಿರುವುದು ಗಮನಕ್ಕೆ ಬಂತು. ಸೂರ್ಯೋದಯಕ್ಕೂ ಮೊದಲೇ ಆಹಾರವನ್ನು ತಿನ್ನುವ ಕ್ರಮ ಮಹಾ ನಗರದ ಯುವ ಸಮೂಹದಲ್ಲಿ ಕಂಡುಬರುತ್ತಿದೆ. ಇದು ಸರಿಯಾದ ಪ್ರವೃತ್ತಿಯಲ್ಲ. ಈ ಸಮಯದಲ್ಲಿ ಅಮೃತವನ್ನೇ ತಿಂದರೂ ಅದು ದೇಹಕ್ಕೆ ವಿಷಮಯವಾಗುತ್ತದೆ. ಇಂದು ಊಟವನ್ನು ಕ್ಯಾಲೋರಿಗಳಲ್ಲಿ ಅಳೆದು ತಿನ್ನುವ ಕ್ರಮ ಜನಪ್ರಿಯವಾಗುತ್ತಿದೆ. ಆದರೆ ಸರಿಯಾದ ಸಮಯ ಹಾಗೂ ಕ್ರಮದಲ್ಲಿ ಆಹಾರವನ್ನು ಸೇವಿಸುವ ಪದ್ಧತಿಯನ್ನು ಬೆಳಸಿಕೊಂಡರೆ, ಹೊಟ್ಟೆಯೇ ನಮಗೆ ಎಷ್ಟು ತಿನ್ನಬೇಕು ಎಂಬ ಸೂಚನೆಯನ್ನು ಕೊಡುತ್ತದೆ. ಆಹಾರವು ಕೇವಲ ಹೊಟ್ಟೆ ತುಂಬಿಸುವ ಸಾಧನವಲ್ಲ, ಅದು ದೇಹ, ಮನಸ್ಸು ಮತ್ತು ಆರೋಗ್ಯವನ್ನು ನಿರ್ಧರಿಸುವ ಪ್ರಮುಖ ಅಂಶವಾಗಿದೆ. ಜೀರ್ಣವಾಗದೇ ದೇಹದಲ್ಲಿ ಉಳಿಯುವ ಆಹಾರಕ್ಕೆ ಆಯುರ್ವೇದದಲ್ಲಿ ’ಆಮ’ ಎಂದು ಹೇಳಲಾಗಿದೆ. ಜೀರ್ಣವಾಗದ ಆಹಾರವೇ ಅನೇಕ ರೋಗಗಳ ಮೂಲ ಎಂದು ಶ್ರೀಗಳು ಎಚ್ಚರಿಸಿದರು.
ಮಿತಿ ಮೀರಿದ ಸೊಪ್ಪು ತರಕಾರಿಗಳು ಕೂಡಾ ಹಲವು ರೋಗಗಳಿಗೆ ಮೂಲ. ಹೆಚ್ಚಿನ ಪ್ರಮಾಣದ ಸೊಪ್ಪು ತರಕಾರಿಗಳ ಸೇವನೆ ಕಣ್ಣು, ಮೂಳೆಗಳ ಸಮಸ್ಯೆ ಹಾಗೂ ಮಂದಬುದ್ಧಿಗೆ ಕಾರಣ ಎಂದು ಆಯುರ್ವೇದ ಹೇಳಿದೆ ಎಂದೂ ಶ್ರೀಗಳು ಕಿವಿಮಾತು ಹೇಳಿದರು.
ರಾಮಚಂದ್ರ ಭಟ್ ದಂಪತಿ ಶ್ರೀಪರಿವಾರದ ಪರವಾಗಿ ಭಿಕ್ಷಾಸೇವೆ ಸಮರ್ಪಿಸಿದರು. ಶ್ರೀಮಠದ ಪ್ರಶಾಸನಾಧಿಕಾರಿ ಸಂತೋಷ್ ಹೆಗಡೆ, ಮಠದ ಶಾಸ್ತ್ರಿಗಳಾದ ವೇ.ಮೂ ಸುಬ್ರಾಯ್ ಭಟ್ ಅಗ್ನಿಹೋತ್ರಿ, ವೇ.ಮೂ ಮಂಜುನಾಥ ಶಾಸ್ತ್ರೀ, ಶ್ರೀಚರಣ ವಿಭಾಗದ ಶ್ರೀಸಂಯೋಜಕ ರಾಘವೇಂದ್ರ ಮಧ್ಯಸ್ಥ, ಶ್ರೀಗಳ ಆಪ್ತ ಕಾರ್ಯದರ್ಶಿಗಳಾದ ಸುರೇಶ್ ಆಡುಗೋಡಿ, ಮಧು ಜಿ.ಕೆ., ದಿನೇಶ್ ಹೆಗಡೆ, ಆಚಾರ ವಿಚಾರ ಗಜಾನನ ಭಟ್, ರಮೇಶ್ ವಿಭೂತಿಮನೆ, ದಿನ ಪ್ರಧಾನರಾದ ಪ್ರಕಾಶ್ ಹೆಗಡೆ ದಂಪತಿ, ಶಿಕ್ಷಣ ತಜ್ಞ ಡಾ.ಜಿ.ಜಿ. ಹೆಗಡೆ, ಉದ್ಯಮಿ ಶಶಾಂಕ್ ಹೆಗಡೆ ಕವಲಕ್ಕಿ ಮುಂತಾದವರು ಉಪಸ್ಥಿತರಿದ್ದರು.



