ಆರೋಗ್ಯಕರ ಹಾಗೂ ಪೋಷಕಾಂಶ ಭರಿತ ಹಸಿ ಬಟಾಣಿಯಿಂದ ವಡೆ ಮಾಡಿದ್ದೀರಾ? ಮಾಡೋದು ತುಂಬಾ ಸರಳ. ಸಂಜೆ ಚಹಾಕ್ಕೆ ತಿಂಡಿಯಾಗಿ ಅಥವಾ ಊಟದ ಜೊತೆಗೂ ಸೈಡ್ ಡಿಶ್ ಆಗಿ ತಿನ್ನಬಹುದು. ಹಸಿ ಬಟಾಣಿ ವಡೆಯನ್ನು ಹೇಗೆ ತಯಾರಿಸುವುದು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.
ಬೇಕಾಗುವ ಪದಾರ್ಥಗಳು
1 ಕಪ್ ಹಸಿರು ಬಟಾಣಿ
ಅರ್ಧ ಟೀ ಚಮಚ ಸಕ್ಕರೆ
4 ಅಥವಾ 5 ಬೆಳ್ಳುಳ್ಳಿ ಎಸಳುಗಳು
1 ಸಣ್ಣ ತುಂಡು ಶುಂಠಿ
2-4 ಹಸಿಮೆಣಸಿನಕಾಯಿ
1 ಚಮಚ ಜೀರಿಗೆ
ಅರ್ಧ ಚಮಚ ಕಾಳುಮೆಣಸು
1 ಚಮಚ ಕೊತ್ತಂಬರಿ ಬೀಜ
1 ಈರುಳ್ಳಿ
ಕಾಲು ಚಮಚ ಕೊತ್ತಂಬರಿ ಪುಡಿ
ಕಾಲು ಚಮಚ ಮೆಣಸಿನ ಪುಡಿ
ಒಂದು ಚಿಟಿಕೆ ಅರಿಶಿನ
2 ಚಮಚ ಕೊತ್ತಂಬರಿ ಸೊಪ್ಪು
ಅರ್ಧ ಟೀ ಚಮಚ ಕಸೂರಿ ಮೇಥಿ
1 ಕಪ್ ಕಡಲೆ ಹಿಟ್ಟು
2 ಚಮಚ ಅಕ್ಕಿ ಹಿಟ್ಟು
ರುಚಿಗೆ ತಕ್ಕಷ್ಟು ಉಪ್ಪು
ಒಂದು ಚಿಟಿಕೆ ಅಡಿಗೆ ಸೋಡಾ
ಡೀಪ್ ಫ್ರೈಗೆ ಬೇಕಾಗುಷ್ಟು ಎಣ್ಣೆ
ಮಾಡುವ ವಿಧಾನ
ಮೊದಲಿಗೆ ಒಂದು ಪಾತ್ರೆಗೆ ನೀರು ಹಾಕಿ ಅದಕ್ಕೆ ಸಕ್ಕರೆ, ಹಸಿರು ಬಟಾಣಿಗಳನ್ನು ಹಾಕಿ ನಾಲ್ಕರಿಂದ ಐದು ನಿಮಿಷಗಳ ಕಾಲ ಬೇಯಲು ಬಿಡಿ.
ಬಟಾಣಿಗಳನ್ನು ಬೇಯಿಸಿದ ನಂತರ, ನೀರನ್ನು ಸೋಸಿ, ಬಟಾಣಿಗಳನ್ನು ಮ್ಯಾಶ್ ಮಾಡಿ. ಈಗ ಒಂದು ಮಿಕ್ಸಿ ನಲ್ಲಿ ಬೆಳ್ಳುಳ್ಳಿ ಲವಂಗ, ಸಣ್ಣ ತುಂಡು ಶುಂಠಿ, ಹಸಿ ಮೆಣಸಿನಕಾಯಿ ಬೆರೆಸಿ ರುಬ್ಬಿಕೊಳ್ಳಿ. ನಂತರ ಕಾಳುಮೆಣಸು, ಕೊತ್ತಂಬರಿ ಮತ್ತು ಜೀರಿಗೆಯನ್ನು ಹಾಕಿ ಒರಟಾಗಿ ರುಬ್ಬಿ.
ಈಗ ಒಂದು ಮಿಕ್ಸಿಂಗ್ ಬೌಲ್ ತೆಗೆದುಕೊಂಡು ಮೊದಲೇ ಬೇಯಿಸಿದ ಬಟಾಣಿ ಮತ್ತು ರುಬ್ಬಿದ ಮಸಾಲೆ ಪೇಸ್ಟ್ ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಸಣ್ಣಗೆ ಹೆಚ್ಚಿದ ಈರುಳ್ಳಿ, ಕೊತ್ತಂಬರಿ ಸೊಪ್ಪು, ಕೊತ್ತಂಬರಿ ಪುಡಿ, ಮೆಣಸಿನ ಪುಡಿ, ಅರಿಶಿನ ಪುಡಿ, ಕಡಲೆ ಹಿಟ್ಟು, ಅಕ್ಕಿ ಹಿಟ್ಟು, ಕಸೂರಿಮೇಥಿ ಪುಡಿ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ.
ಈಗ ಕೈಗೆ ಸ್ವಲ್ಪ ಎಣ್ಣೆಯನ್ನು ಹಚ್ಚಿ ಬಟಾಣಿ ಮಿಶ್ರಣವನ್ನು ಸಣ್ಣ ಉಂಡೆಗಳಾಗಿ ತೆಗೆದುಕೊಂಡು ವಡೆಗಳಾಗಿ ಮಾಡಿ ಎಣ್ಣೆಯಲ್ಲಿ ಕರಿದರೆ ಹಸಿ ಬಟಾಣಿ ವಡೆ ರೆಡಿ.