ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಪ್ರದ್ಮಶ್ರೀ ಪ್ರಶಸ್ತಿ ಪುರಸ್ಕೃತ ಜನಪದ ಹಾಡುಗಾರ್ತಿ, ಹೋರಾಟಗಾರ್ತಿ ಸುಕ್ರಿ ಬೊಮ್ಮಗೌಡ ವಿಧಿವಶರಾದರು. ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಮಂಗಳೂರು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಸುಕ್ರಜ್ಜಿ ಎಂದು ಸುಕ್ರಿ ಬೊಮ್ಮಗೌಡ ಪ್ರಸಿದ್ಧಿಯನ್ನು ಪಡೆದಿದ್ದರು. ಹಾಲಕ್ಕಿ ಜನಪದ ಹಾಡುಗಳನ್ನು ಹಾಡುವ ಅವರು ಜನಪದ ಹಾಡುಗಾರ್ತಿಯಾಗಿದ್ದರು. ಬಡಗೇರಿ ಗ್ರಾಮದಲ್ಲಿ ಮದ್ಯ ಮಾರಾಟ ಹಾವಳಿ ಹೆಚ್ಚಾದಾಗ ಅದನ್ನು ತಡೆಯಲು ಜನಾಂದೋಲನ ನಡೆಸಿ, ಹೋರಾಟಗಾರ್ತಿಯಾಗಿಯೂ ಸುಕ್ರಿ ಬೊಮ್ಮಗೌಡ ಗುರುತಿಸಿಕೊಂಡಿದ್ದರು.
ಸಾರಾಯಿ ಇಂದ ಸುಕ್ರಿ ಬೊಮ್ಮಗೌಡ ಪತಿಯನ್ನು ಕಳೆದುಕೊಂಡರು. ಆಗ ಅವರ ಪುತ್ರ ಸಹ ಚಿಕ್ಕವನು. ಮಗನೂ ತೀರಿ ಹೋದಾಗ ಸಾರಾಯಿ ನಿರ್ಮೂಲನೆ ಮಾಡಬೇಕು ಎಂದು ಪಣತೊಟ್ಟು ಅವರು ಹೋರಾಟವನ್ನು ಆರಂಭಿಸಿದರು.
ಸಾರಾಯಿ ವಿರುದ್ಧದ ಹೋರಾಟದಲ್ಲಿ ಸುಕ್ರಿ ಬೊಮ್ಮಗೌಡ ದೆಹಲಿಯ ತನಕ ಹೋಗಿ ಬಂದಿದ್ದಾರೆ. ಸುಕ್ರಿ ಬೊಮ್ಮಗೌಡ 1999ರಲ್ಲಿ ಜನಪದಶ್ರೀ ಪ್ರಶಸ್ತಿ, 2006ರಲ್ಲಿ ನಾಡೋಜ ಪ್ರಶಸ್ತಿ, 2017ರಲ್ಲಿ ಪ್ರದ್ಮಶ್ರೀ ಪ್ರಶಸ್ತಿಯನ್ನು ಪಡೆದಿದ್ದರು.
2023ರ ವಿಧಾನಸಭೆ ಚುನಾವಣೆ ಪ್ರಚಾರದ ಸಮಯದಲ್ಲಿ ಉತ್ತರ ಕನ್ನಡ ಜಿಲ್ಲೆಗೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ ಸುಕ್ರಿ ಬೊಮ್ಮಗೌಡ ಭೇಟಿ ಮಾಡಿದ್ದರು. ಸುಕ್ರಿ ಬೊಮ್ಮಗೌಡ ಕರ್ನಾಟಕ ವಿಶ್ವವಿದ್ಯಾಲಯದ ಜನಪದ ವಿಭಾಗದಲ್ಲಿ 5 ವರ್ಷಗಳ ಕಾಲ ಹಾಲಕ್ಕಿ ಸಮುದಾಯದ ಉಡುಪು, ಹಾಡು, ಆಹಾರ, ಸಾಂಸ್ಕೃತಿಕ ವಿಚಾರಗಳ ಕುರಿತು ಅತಿಥಿ ಉಪನ್ಯಾಸಕಿಯಾಗಿ ಪಾಠ ಮಾಡಿದ್ದರು. ಧಾರವಾಡ ಆಕಾಶವಾಣಿ ಕೇಂದ್ರದಲ್ಲಿ ಇವರ ಜನಪದ ಹಾಡುಗಳ ಧ್ವನಿ ಮುದ್ರಿಕೆಗಳಿವೆ.
ಸುಕ್ರಿ ಬೊಮ್ಮಗೌಡ ಹಾಲಕ್ಕಿ ಸಮುದಾಯದ ಸಾಂಸ್ಕೃತಿಕ ರಾಯಭಾರಿಯಾಗಿದ್ದರು. ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ಮತ್ತು ಕಾರವಾರ ತಾಲೂಕಿನಲ್ಲಿ ಹಾಲಕ್ಕಿ ಸಮಯದಾಯದ ಒಕ್ಕಲ ಪೂರ್ವಜರ ನೆಲೆಗಳನ್ನು ಕಾಣಬಹುದಾಗಿದೆ. ಈ ಒಕ್ಕಲ ಈ ನೆಲೆಗಳ ಬಗ್ಗೆ ಹೆಚ್ಚಿನ ಮಾಹಿತಿ ಹೊಂದಿದ್ದವರು ಸುಕ್ರಿ ಬೊಮ್ಮ ಗೌಡ. ಅಂಕೋಲಾ ತಾಲೂಕು ಬಡಗೇರಿಯ ಹಾಲಕ್ಕಿ ಒಕ್ಕಲ ಮಹಿಳೆಯಾದ ಸುಕ್ರಿ ಬೊಮ್ಮಗೌಡ ಹೆಸರಿನ ಕುರಿತು ಹಲವು ಪುಸ್ತಕಗಳಲ್ಲಿ ಉಲ್ಲೇಖಿಸಲಾಗಿದೆ. ಹೆಸರಿನ ಮೊದಲ ಅಕ್ಷರ ‘ಸು’ ಹಾಲಕ್ಕಿ ಒಕ್ಕಲ ಸಮಾಜದ ಜನರ ಬಾಯಲ್ಲಿ ‘ಸು’, ‘ಶು’ ಎಂದು ಉಚ್ಚಾರಗೊಳ್ಳುತ್ತದೆ. ಆದ್ದರಿಂದ ಹೆಸರು ಚುಕ್ರಿ, ಸುಕ್ರಿ, ಶುಕ್ರಿ ಎಂದು ಕರೆಯಲಾಗುತ್ತದೆ. ಹಾಲಕ್ಕಿ ಒಕ್ಕಲ ಭಾಷೆಯೂ ದ್ರಾವಿಡ ಭಾಷೆಗೆ ಸೇರಿದ ಒಂದು ಸಾಮಾಜಿಕ ಉಪಭಾಷೆ ಎಂಬ ಉಲ್ಲೇಖಗಳಿವೆ.