ತಮಿಳುನಾಡು ನದಿಜೋಡಣೆ ಯೋಜನೆಗಳಿಗೆ ಆಕ್ಷೇಪ ಸಲ್ಲಿಕೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಹೊಸದಿಗಂತ ಡಿಜಿಟಲ್ ಡೆಸ್ಕ್

ಹೊಸದಿಲ್ಲಿ: ತಮಿಳುನಾಡು ಸರಕಾರ ಕೈಗೊಂಡಿರುವ ಹೊಗೆನಕಲ್ ಜಲವಿದ್ಯುತ್ ಯೋಜನೆ ಮತ್ತು ಕಾವೇರಿ, ಗುಂಡಾರ್ ಹಾಗೂ ವೈಗೈ ನದಿಜೋಡಣೆ ಯೋಜನೆಗಳನ್ನು ನ್ಯಾಯಾಲಯದ ಮೂಲಕ ವಿರೋಧಿಸುವ ತೀರ್ಮಾನ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು ಅಂತರರಾಜ್ಯ ಜಲವಿವಾದಗಳಿಗೆ ಸಂಬಂಧಿಸಿದಂತೆ ಕಾನೂನು ತಜ್ಞರೊಂದಿಗೆ ನಡೆದ ಸಭೆಯ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.

ಅಂತರರಾಜ್ಯ ಜಲವಿವಾದಗಳ ಬಗ್ಗೆ ಸಚಿವರು, ಹಿರಿಯ ವಕೀಲರು, ಅಡ್ವೊಕೇಟ್ ಜನರಲ್ ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು.

ಕರ್ನಾಟಕ ರಾಜ್ಯ ನೆಲ ಜಲದ ವಿಚಾರದಲ್ಲಿ ಎಂದಿಗೂ ಒಂದಾಗಿದೆ. ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ಎನ್.ಜಿ.ಟಿ. ಹಾಗೂ ಮತ್ತೊಂದು ಪ್ರಕರಣ ಒಟ್ಟಿಗೆ ವಿಚಾರಣೆಗೆ ಬರಲಿದ್ದು, ನಮ್ಮ ಆಕ್ಷೇಪಗಳನ್ನು ಸಲ್ಲಿಸಿ ರಾಜ್ಯದ ನಿಲುವನ್ನು ಸ್ಪಷ್ಟಪಡಿಸಲಿದ್ದೇವೆ ಎಂದರು.

ನ್ಯಾಯಮೂರ್ತಿಗಳ ನೇಮಕ:
ಕೃಷ್ಣಾ ನದಿಯ 2ನೇ ಟ್ರಿಬ್ಯುನಲ್ ಗಳ ಅಧಿಸೂಚನೆಗೆ ಸಂಬಂಧಿಸಿದಂತೆ ಕಳೆದ ಬಾರಿ ನ್ಯಾಯಮೂರ್ತಿಗಳು ಹಿಂದೆ ಸರಿದಿದ್ದು, ಈ ಬಾರಿ ಹೊಸ ನ್ಯಾಯಮೂರ್ತಿಗಳ ನೇಮಕ್ಕಕ್ಕೆ ರಿಜಿಸ್ಟ್ರಾರ್ ಜನರಲ್ ಅವರ ಬಳಿ ಮುಂದಿನ ವಿಚಾರಣೆಯಷ್ಟರಲ್ಲಿ ನೇಮಕವಾಗಬೇಕೆಂದು ಅರ್ಜಿ ಸಲ್ಲಿಸಲಾಗಿದೆ. ಮುಖ್ಯ ನ್ಯಾಯಮೂರ್ತಿಗಳು ಈ ಬಗ್ಗೆ ಕ್ರಮಕೈಗೊಳ್ಳಲಿದ್ದಾರೆ. ತಪ್ಪಿದಲ್ಲಿ ನ್ಯಾಯಾಲಯದಲ್ಲಿ ಈ ಬಗ್ಗೆ ಪ್ರಸ್ತಾಪ ಮಾಡಬೇಕೆಂದು ತೀರ್ಮಾನಿಸಲಾಗಿದೆ ಎಂದರು.

ಕೇಂದ್ರ ಜಲ ಆಯೋಗದಲ್ಲಿ ಹಾಗೂ ಕಾವೇರಿ ನದಿ ಪ್ರಾಧಿಕಾರದ ಮುಂದೆಯೂ ನಮ್ಮ ನಿಲುವನ್ನು ಸ್ಪಷ್ಟಪಡಿಸಲು ತೀರ್ಮಾನಿಸಲಾಗಿದೆ. ಜಲಶಕ್ತಿ ಸಚಿವರನ್ನು ಭೇಟಿಯಾಗಿದ್ದು, ಪರಿಸರ ಅನುಮತಿ ದೊರೆಯಬೇಕಿದೆ ಎಂದರು.

ಮಹದಾಯಿ ವಿವಾದ:
ಮಹದಾಯಿ ನದಿಯ ಬಗ್ಗೆಯೂ ಚರ್ಚೆಯಾಗಿದೆ. ವಿಚಾರಣೆಯನ್ನು ಶೀಘ್ರವಾಗಿ ಕೈಗೆತ್ತಿಕೊಳ್ಳಬೇಕೆಂದು ಕೋರಲಾಗಿದೆ. ಅದೂ ಅಂತಿಮ ಘಟ್ಟದಲ್ಲಿದೆ. ಟ್ರಿಬ್ಯುನಲ್ ಬಗ್ಗೆ ಎಲ್ಲಾ ರಾಜ್ಯಗಳೂ ಆಕ್ಷೇಪ ವ್ಯಕ್ತಪಡಿಸಿರುವ ಪ್ರಕರಣವಾಗಿದ್ದು, ಅಲ್ಲಿಯೂ ಕೂಡ ನಾವು ಪರಿಹಾರ ಕಂಡುಕೊಳ್ಳಬೇಕಿದೆ. ನದಿ ತಿರುವಿನ ಬಗ್ಗೆ ಈಗಾಗಲೇ ಚರ್ಚೆಯಾಗಿ ನಿರ್ಧಾರವಾಗಿದೆ. ಡಿ.ಪಿ.ಆರ್. ಒಪ್ಪಿಗೆಯಾದರೆ, ಕಾಮಗಾರಿಯನ್ನು ಮುಂದುವರೆಸಲಾಗುವುದು ಎಂದರು.

ಮುಂಬರುವ ದಿನಗಳಲ್ಲಿ ಯಾವ ರೀತಿ ನಮ್ಮ ಯೋಜನೆಗಳನ್ನು ಪ್ರಾರಂಭ ಮಾಡಬೇಕು. ನ್ಯಾಯಾಲಯದ ಪ್ರಕರಣಗಳು ಯಾವ ಹಂತದಲ್ಲಿವೆ, ಈಗಾಗಲೇ ಪ್ರಾರಂಭಿಸಿರುವ ಯೋಜನೆಗಳನ್ನು ಹೇಗೆ ಮುಂದುವರೆಸಬೇಕೆಂಬ ಬಗ್ಗೆ ಚರ್ಚೆ ಮಾಡಲಾಗಿದೆ. ಒಟ್ಟಾರೆ ಸಲಹೆಗಳನ್ನು ಸ್ವೀಕರಿಸಲಾಗಿದೆ. ಗೋದಾವರಿ, ಕೃಷ್ಣಾ, ಕಾವೇರಿ, ಪೆನ್ನಾರ್ ನದಿ ಜೋಡಣೆಗೆ ಸಂಬಂಧಿಸಿದಂತೆಯೂ ಚರ್ಚೆಯಾಗಿದ್ದು, ಆಕ್ಷೇಪಗಳನ್ನು ದಾಖಲಿಸಬೇಕಿದೆ. ಇತರೆ ರಾಜ್ಯಗಳೂ ಸೇರಿದಂತೆ ನಮ್ಮ ಪಾಲೂ ನಿರ್ಧರಿಸುವವರೆಗೂ ಡಿ.ಪಿ.ಆರ್.ಗೆ ಒಪ್ಪಿಗೆ ನೀಡಬೇಕೆಂದು ಹೊಸದಾಗಿ ಆಕ್ಷೇಪ ಸಲ್ಲಿಸಬೇಕಿದೆ. ಎಲ್ಲಾ ರಾಜ್ಯಗಳೂ ಈ ಬಗ್ಗೆ ಒಪ್ಪಿಗೆ ನೀಡಬೇಕೆಂದು ಆರ್ಥಿಕ ಸಚಿವರಿಗೂ ತಿಳಿಸಲಾಗಿದೆ ಎಂದು ಮುಖ್ಯಮಂತ್ರಿಗಳು ವಿವರಿಸಿದರು.

ಸಂಪುಟ ವಿಸ್ತರಣೆ: ರಾಷ್ಟ್ರೀಯ ಅಧ್ಯಕ್ಷರನ್ನು ಭೇಟಿಯಾದ ಸಂದರ್ಭದಲ್ಲಿ ಸಂಪುಟ ವಿಸ್ತರಣೆ ಕುರಿತು ಚರ್ಚೆಯಾಗಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!