ದೇವಿ ಬಲಿಗಾಗಿ ತಂದಿದ್ದ ಕೋಳಿ ಹುಂಜ ಮರ ಏರಿ ಕುಳಿತಾಗ!

ಹೊಸ ದಿಗಂತ ವರದಿ, ಮಂಡ್ಯ :

ದೇವಿ ಬಲಿಗಾಗಿ ತಂದಿದ್ದ ಕೋಳಿ ತಪ್ಪಿಸಿಕೊಂಡು ಸಮೀಪದ ಮರ ಏರಿದ್ದನ್ನು ಕಂಡ ಭಕ್ತರು ಅಚ್ಚರಿಯಿಂದ ಆಕಾಶಕ್ಕೆ ಮುಖ ಮಾಡಿದ್ದ ಪ್ರಸಂಗವೊಂದು ನಗರದಲ್ಲಿ ನಡೆಯಿತು.
ನಗರದ ನೂರಡಿ ರಸ್ತೆಯಲ್ಲಿರುವ ಶ್ರೀ ಬಿಸಿಲು ಮಾರಮ್ಮ ದೇವಾಲಯದ ಎದುರಿನ ಮರ ಏರಿದ ನಾಟಿ ಕೋಳಿ ಹುಂಜವನ್ನು ಕೆಳಗಿಳಿಸಲು ನಡೆದ ಪ್ರಯತ್ನಗಳೆಲ್ಲವೂ ವಿಲವಾಗಿದ್ದು ಮತ್ತೂ ವಿಶೇಷವಾಗಿತ್ತು.
ನಡೆದಿದ್ದಿಷ್ಟು :
ಗಾಂಧಿನಗರ ಬಡಾವಣೆಯಲ್ಲಿ ಶ್ರೀಕಾಳಮ್ಮ ದೇವರ ಹಬ್ಬ ಆಚರಿಸಲಾಗುತ್ತಿತ್ತು. ಮಹಿಳೆಯರೆಲ್ಲರೂ ಆರತಿಯೊಂದಿಗೆ ನೂರಡಿ ರಸ್ತೆಯಲ್ಲಿರುವ ಬಿಸಿಲು ಮಾರಮ್ಮನ ದೇವಾಲಯಕ್ಕೆ ಬಂದಿದ್ದರು. ಜೊತೆಗೆ ಕೆಲವರು ಕೋಳಿಗಳನ್ನೂ ಬಲಿ ನೀಡಲು ಕೊಂಡು ತಂದಿದ್ದರು.
ಭಕ್ತರೊಬ್ಬರು ಎರಡು ನಾಟಿ ಕೋಳಿ ಹುಂಜಗಳನ್ನು ಸಹ ತಂದಿದ್ದು, ಇದರಲ್ಲಿ ಒಂದು ಕೋಳಿ ಹುಂಜವನ್ನು ಬಿಸಿಲು ಮಾರಮ್ಮನಿಗೆ ಬಲಿ ನೀಡಿದರು. ಮತ್ತೊಂದು ಕೋಳಿಯನ್ನು ಬಲಿ ನೀಡಲು ಮುಂದಾಗುತ್ತಿದ್ದಂತೆ ತಪ್ಪಿಸಿಕೊಂಡ ಹುಂಜ ದೇವಾಲಯದ ಎದುರಿ ಇರುವ ಮರವನ್ನೇರಿತ್ತು. ಹುಂಜ ಮರ ಏರಿ ಕುಳಿತಿದ್ದನ್ನು ಕಂಡ ಭಕ್ತರು ಮುಗಿಲತ್ತ ಮುಖ ಮಾಡಿ ನಕ್ಕರು.
ಭಕ್ತರ ಕಡೆಯವರ ಮರದಿಂದ ಕೋಳಿ ಹುಂಜ ಇಳಿಸಲು ಕಸರತ್ತು ನಡೆಸಿದರು. ಮತ್ತೆ ಕೆಲವರು ಮರದ ಮೇಲೆ ಏರಿ ಕೋಳಿ ಹುಂಜವನ್ನು ಹಿಡಿಯಲು ಯತ್ನಿಸಿದರು. ಆದರೆ, ಹುಂಜ ಮಾತ್ರ ಕೆಳಗಿಳಿಯದೆ ಒಂದು ರೆಂಬೆಯಿಂದ ಮತ್ತೊಂದು ರೆಂಬೆಗೆ ಹಾರುತ್ತಾ ಮರದ ಮೇಲಕ್ಕೆ ಹೋಗುತ್ತಿತ್ತು. ಈ ನಡುವೆ ಮಳೆ ಬಂದ ಕಾರಣ ಮರ ಏರಿದವರೆಲ್ಲರೂ ಕೆಳಗಿಳಿದು ಮಳೆಯಿಂದ ತಪ್ಪಿಸಿಕೊಳ್ಳುವ ಯತ್ನ ಮಾಡಿದರೆ, ಕೋಳಿ ಹುಂಜ ಮಾತ್ರ ಮರದ ಮೇಲಿನಿಂದ ಎಲ್ಲವನ್ನೂ ನೋಡುತ್ತಾ ಅಲ್ಲೇ ಕುಳಿತಿತ್ತು.
ಈ ಮಧ್ಯೆ ಹಳ್ಳಿಯೊಂದರಲ್ಲಿ ಭಕ್ತರ ಕಡೆಯವರು ಕೋಳಿಹುಂಜವನ್ನು ಸಾಕಿದ್ದವರನ್ನು ಸ್ಥಳಕ್ಕೆ ಕರೆಯಿಸಿ ಹುಂಜವನ್ನು ಕೆಳಗಿಳಿಸಲು ಯತ್ನಿಸಿದರಾದರೂ, ಕೈಗೂಡಲಿಲ್ಲಘಿ. ಕೋಳಿ ಹುಂಜ ಕೆಳಗಿಳಿಯಲಿಲ್ಲ. ಇದರಿಂದ ನಿರಾಶರಾದ ಭಕ್ತರು ಮನೆಯತ್ತ ಹೆಜ್ಜೆ ಹಾಕಿದರು. ಮರವನ್ನೇರಿದ ಹುಂಜ ಕೆಳಿಯುತ್ತೋ ಇಲ್ಲವೋ ಎಂಬುದು ಕುತೂಹಲಕ್ಕೀಡು ಮಾಡಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!