ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಂಚಿ – ಹೈದರಾಬಾದ್ ವಿಮಾನದಲ್ಲಿ ವಿಶೇಷಚೇತನ ಬಾಲಕನಿಗೆ ಪ್ರಯಾಣ ಬೆಳೆಸಲು ಇಂಡಿಯೋ ವಿಮಾನಯಾನ ಸಂಸ್ಥೆ ನಿರಾಕರಣೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿ 5 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ.
ಈ ಕುರಿತು ಪ್ರಕಟಣೆ ಹೊರಡಿಸಿದ ಭಾರತೀಯ ವಿಮಾನಯಾನ ಪ್ರಾಧಿಕಾರ(DGCA) ಸಂಸ್ಥೆ ವಿಶೇಷ ಚೇತನ ಬಾಲಕನ ಪ್ರಕರಣದಲ್ಲಿ ಲೋಪ ಎಸಗಿದೆ ಎಂದು ತಿಳಿಸಿದೆ.
ಕಳೆದ ಮೇ 9ರಂದು ವಿಶೇಷ ಚೇತನ ಬಾಲಕನಿಗೆ ರಾಂಚಿ – ಹೈದರಾಬಾದ್ ವಿಮಾನದಲ್ಲಿ ಪ್ರಯಾಣಿಸಲು ಸಂಸ್ಥೆ ನಿರಾಕರಣೆ ಮಾಡಿತ್ತು. ಬಾಲಕ ವಿಮಾನದಲ್ಲಿ ಪ್ರಯಾಣ ಬೆಳೆಸಲು ಭಯಗೊಂಡಿದ್ದರಿಂದ ನಿರ್ಬಂಧ ವಿಧಿಸಿದ್ದಾಗಿ ಇಂಡಿಗೋ ಸಂಸ್ಥೆ ಹೇಳಿಕೊಂಡಿತ್ತು. ಘಟನೆ ಬಗ್ಗೆ ತನಿಖೆ ನಡೆಸಲು ವಿಮಾನಯಾನ ಪ್ರಾಧಿಕಾರ ಮೂವರು ಸದಸ್ಯರ ತಂಡ ರಚನೆ ಮಾಡಿತ್ತು.
ಇದರ ಬೆನ್ನಲ್ಲೇ ನಾಗರಿಕ ವಿಮಾನಯಾನ ಸಂಸ್ಥೆ 5 ಲಕ್ಷ ರೂಪಾಯಿ ದಂಡ ವಿಧಿಸಿ, ಆದೇಶ ಹೊರಡಿಸಿದ್ದು, ವಿಶೇಷ ಸನ್ನಿವೇಶ ನಿಭಾಯಿಸುವಲ್ಲಿ ಇಂಡಿಗೋ ಏರ್ಲೈನ್ ಸಿಬ್ಬಂದಿ ವಿಫಲರಾಗಿದ್ದಾರೆಂದು ತಿಳಿಸಿದೆ.
ಮೇ 7ರಂದು ವಿಶೇಷ ಚೇತನ ಮಗು ರಾಂಚಿ ವಿಮಾನ ನಿಲ್ದಾಣದಿಂದ ವಿಮಾನ ಹತ್ತಲು ತೆರಳಿದ್ದ ವೇಳೆ ಇಂಡಿಗೋ ವ್ಯವಸ್ಥಾಪಕರು ಬಿಟ್ಟಿರಲಿಲ್ಲ. ಈ ಘಟನೆಯ ದೃಶ್ಯ ಸೆರೆ ಹಿಡಿದಿದ್ದ ಪ್ರತ್ಯಕ್ಷದರ್ಶಿಗಳು ಟ್ವಿಟರ್ನಲ್ಲಿ ಹಂಚಿಕೊಂಡಿದ್ದರು. ಇದಕ್ಕೆ ಕೇಂದ್ರ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಕೂಡ ಆಕ್ರೋಶ ವ್ಯಕ್ತಪಡಿಸಿದ್ದರು.