ವಿದೇಶದಲ್ಲಿ ನೌಕರಿ ಕೊಡಿಸುವುದಾಗಿ ವಂಚನೆ: ದೂರು ದಾಖಲು

ಹೊಸದಿಗಂತ ವರದಿ, ಅಂಕೋಲಾ:

ಮಗನಿಗೆ ವಿದೇಶದಲ್ಲಿ ನೌಕರಿ ಕೊಡಿಸುವುದಾಗಿ ಹೇಳಿದ ವಂಚಕರ ಮಾತಿಗೆ ಮರುಳಾಗಿ ಬಡ ಕುಟುಂಬದ ದಂಪತಿ ಲಕ್ಷಾಂತರ ರೂಪಾಯಿ ಹಣ ನೀಡಿ ಮೋಸ ಹೋದ ಘಟನೆ ತಾಲೂಕಿನ ಹಾರವಾಡದಲ್ಲಿ ನಡೆದಿದ್ದು ಈ ಕುರಿತು ಪೊಲೀಸ್ ದೂರು ಸಹ ದಾಖಲಾಗಿದೆ ಎಂದು ತಿಳಿದು ಬಂದಿದೆ.

ಹಾರವಾಡ ಗಾಬೀತವಾಡದ ಮೀನುಗಾರರ ಕುಟುಂಬದ ದಂಪತಿಯ ಮಗ ಇಂಜಿನಿಯರಿಂಗ್ ಪದವಿ ಮುಗಿಸಿ ಅಲ್ಲಲ್ಲಿ ನೌಕರಿಗಾಗಿ ಪ್ರಯತ್ನ ನಡೆಸುತ್ತಿದ್ದ ಎನ್ನಲಾಗಿದ್ದು ಆತನ ತಂದೆ ತಾಯಿ ಸಹ ಮಗನಿಗೆ ಒಳ್ಳೆಯ ಕೆಲಸ ಸಿಗಲಿ ಎಂಬ ಆಶಾ ಭಾವನೆಯಲ್ಲಿದ್ದರು.
ಇದೇ ಸಂದರ್ಭದಲ್ಲಿ ಅದೇ ಭಾಗದ ಆಟೋ ಚಾಲಕ ಮತ್ತು ಮಹಿಳೆಯೋರ್ವರು ಸೇರಿ ಇವರ ಮಗನಿಗೆ ವಿದೇಶದಲ್ಲಿ ಉತ್ತಮ ನೌಕರಿ ಕೊಡಿಸುವುದಾಗಿ ಹೇಳಿ ಕಾರವಾರದಲ್ಲಿ ಸಂಘಟನೆಯೊಂದರ ಪ್ರಮುಖ ಎನಿಸಿಕೊಂಡ ವ್ಯಕ್ತಿಗೆ ಪರಿಚಯಿಸಿ ವಿದೇಶದಲ್ಲಿ ತಿಂಗಳಿಗೆ 30 ಲಕ್ಷ ರೂಪಾಯಿ ವೇತನ ಇರುವ ನೌಕರಿ ಕೊಡಿಸುವುದಾಗಿ ನಂಬಿಸಿದ್ದಾರೆ.

ನೌಕರಿ ಪಡೆಯಲು ಆರಂಭದಲ್ಲಿ 10 ಲಕ್ಷ ಹಣ ನೀಡಬೇಕೆಂದು ಇವರೆಲ್ಲ ಸೇರಿ ಮುಗ್ದ ದಂಪತಿಗೆ ಹೇಳಿದ್ದು ಮಗನಿಗೆ ದೊಡ್ಡ ನೌಕರಿ ಸಿಗುತ್ತದೆ ಎಂಬ ಆಶೆಯಿಂದ ಬ್ಯಾಂಕಿನಲ್ಲಿ ಬಂಗಾರದ ಒಡವೆ ಅಡವಿಟ್ಟು ಸುಮಾರು 9 ಲಕ್ಷ ರೂಪಾಯಿ ಹಣವನ್ನು ವಂಚಕರಿಗೆ ನೀಡಿರುವುದಾಗಿ ತಿಳಿದು ಬಂದಿದೆ.

ಹಣ ಪಡೆದ ನಂತರ ವಂಚಕರು ಬೇರೆ ಬೇರೆ ಕಾರಣಗಳನ್ನು ಹೇಳುತ್ತ ಕಾಲ ಕಳೆದಿದ್ದು ಈ ನಡುವೆ ಕಾರವಾರದ ವ್ಯಕ್ತಿಯು ಇನ್ನೂ ಹಲವಾರು ಜನರಿಗೆ ನೌಕರಿ ನೀಡುವುದಾಗಿ ವಂಚಿಸಿರುವ ಪ್ರಕರಣಗಳು ಬೆಳಕಿಗೆ ಬರುತ್ತಿದಂತೆ ಆತನಿಗೆ ಹಣ ನೀಡಿದ ದಂಪತಿಗೆ ದಿಕ್ಕೇ ತೊಚದಂತಾಗಿದೆ.

ತಾವು ನೀಡಿರುವ ಹಣವನ್ನು ಮರಳಿ ಕೊಡುವಂತೆ ಕೇಳತೊಡಗಿದಾಗ ತಮ್ಮ ರಾಜಕೀಯ ಪ್ರಭಾವ ಹೇಳಿಕೊಂಡು ಕಾರವಾರದಲ್ಲೇ ಸರ್ಕಾರಿ ನೌಕರಿ ಕೊಡಿಸುವುದಾಗಿ ಹೇಳಿ ವಂಚಕರು ಮತ್ತಷ್ಟು ಕಾಲ ಕಳೆದಿರುವುದಾಗಿ ತಿಳಿದು ಬಂದಿದೆ.

ಕೊನೆಗೆ ವಿದೇಶಿ ನೌಕರಿಯೂ ಇಲ್ಲ, ಸರ್ಕಾರಿ ನೌಕರಿಯೂ ಇಲ್ಲ, ಕೊಟ್ಟ ಹಣವೂ ಇಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗಿ ಮೋಸ ಹೋದವರು ವಂಚಕರ ಕುರಿತು ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವುದಾಗಿ ತಿಳಿದು ಬಂದಿದ್ದು ಈ ಕುರಿತು ಪೊಲೀಸ್ ಮೂಲದಿಂದ ನಿಖರ ಮಾಹಿತಿ ತಿಳಿದು ಬರಬೇಕಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!