ಹುಂಡೈ ಕಂಪನಿಯ ಕಾಶ್ಮೀರ ಟ್ವೀಟ್ ವಿಚಾರದಲ್ಲಿ ಖಡಕ್ಕಾಗಿಯೇ ವ್ಯವಹರಿಸಿದ್ದೇವೆ ಎಂದಿದೆ ವಿದೇಶ ಸಚಿವಾಲಯ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಾಶ್ಮೀರದ ವಿಷಯದಲ್ಲಿ ಪಾಕಿಸ್ತಾನದ ಪರ ಟ್ವೀಟ್ ಮಾಡಿದ್ದ ಹುಂಡೈ ಕಂಪನಿಗೆ ಭಾರತದ ವಿದೇಶ ವ್ಯವಹಾರದ ಅಧಿಕೃತ ವೇದಿಕೆಯಿಂದಲೇ ಬಿಸಿ ಮುಟ್ಟಿದೆ. ಹುಂಡೈ ನಿಲುವಿಗೆ ಭಾರತೀಯರು ಆಕ್ರೋಶಪಡಿಸಿದ್ದು ಒಂದೆಡೆಯಾದರೆ, ಭಾರತ ಸರ್ಕಾರವೇ ಈ ವಿಷಯದಲ್ಲಿ ಖಡಕ್ ನಿಲುವು ತಾಳಿರುವುದು ಮಂಗಳವಾರದ ಪ್ರಮುಖ ವಿದ್ಯಮಾನ.
ದಕ್ಷಿಣ ಕೊರಿಯಾದ ವಿದೇಶ ವ್ಯವಹಾರ ಸಚಿವರೊಂದಿಗಿನ ಮಾತುಕತೆಯಲ್ಲಿ ಹುಂಡೈ ವಿಚಾರ ಸಹ ಪ್ರಸ್ತಾಪವಾಗಿದೆ ಎಂಬ ಮಾಹಿತಿಯನ್ನು ಭಾರತದ ವಿದೇಶ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ತಮ್ಮ ಟ್ವೀಟ್ ಮೂಲಕ ಹಂಚಿಕೊಂಡಿದ್ದಾರೆ.

ಇದಕ್ಕೆ ಮುಂದುವರಿದು ಭಾರತದ ವಿದೇಶ ವ್ಯವಹಾರಗಳ ಸಚಿವಾಲಯವು ಹೆಚ್ಚಿನ ಮಾಹಿತಿಯನ್ನು ಟ್ವಿಟ್ಟರ್ ಮೂಲಕ ಹಂಚಿಕೊಂಡಿದ್ದು, ಅದರಲ್ಲಿ- ತಮ್ಮ ದೇಶದ ಕಂಪನಿಯೊಂದರ ಈ ವರ್ತನೆ ಬಗ್ಗೆ ಕೊರಿಯಾ ಸಚಿವರೂ ವಿಷಾದ ವ್ಯಕ್ತಪಡಿಸಿದ್ದಾರೆ ಎಂಬುದು ತಿಳಿದು ಬಂದಿದೆ.
ಸಚಿವಾಲಯದ ಅಧಿಕೃತ ವಕ್ತಾರ ಅರಿಂದಮ್ ಬಾಗ್ಚಿ ಟ್ವೀಟ್ ಮೂಲಕ ಲಗತ್ತಿಸಿರುವ ಪ್ರತಿಕ್ರಿಯೆ ಹೀಗಿದೆ.
“ನಾವು ಕಾಶ್ಮೀರ ಸಾಲಿಡಾರಿಟಿ ದಿನದಂದು ಹ್ಯುಂಡೈ ಪಾಕಿಸ್ತಾನ ಮಾಡಿದ ಸೋಶಿಯಲ್ ಮೀಡಿಯಾ ಪೋಸ್ಟ್ ಅನ್ನು ನೋಡಿದ್ದೇವೆ. ಈ ಪೋಸ್ಟ್ ಮಾಡಿದ ತಕ್ಷಣ, ಫೆ. 6ರಂದು ಸಿಯೋಲ್‌ನಲ್ಲಿರುವ ನಮ್ಮ ರಾಯಭಾರಿ ಹ್ಯುಂಡೈ ಪ್ರಧಾನ ಕಚೇರಿಯನ್ನು ಸಂಪರ್ಕಿಸಿ ವಿವರಣೆ ಕೇಳಿದ್ದಾರೆ. ಆಕ್ಷೇಪಾರ್ಹ ಪೋಸ್ಟ್ ಸಂಬಂಧಿಸಿ, ಫೆ. 7ರಂದು ವಿದೇಶಾಂಗ ಸಚಿವಾಲಯವು ಕೊರಿಯಾ ಗಣರಾಜ್ಯದ ರಾಯಭಾರಿಯನ್ನು ಕರೆಸಿದೆ. ಪೋಸ್ಟ್ ಕುರಿತು ಭಾರತ ಸರಕಾರದ ತೀವ್ರ ಅಸಮಾಧಾನವನ್ನು ತಿಳಿಸಿದೆ. ಕೊರಿಯಾ ಗಣರಾಜ್ಯದ ವಿದೇಶಾಂಗ ಸಚಿವ ಚುಂಗ್ ಯುಯಿ-ಯಾಂಗ್ ಅವರು ಇಂದು ಬೆಳಗ್ಗೆ ಭಾರತದ ವಿದೇಶಾಂಗ ಸಚಿವರಿಗೆ ಕರೆ ಮಾಡಿದ್ದಾರೆ. ಅವರು ಹಲವಾರು ಸಮಸ್ಯೆಗಳ ಬಗ್ಗೆ ಚರ್ಚಿಸಿದಾಗ, ಹ್ಯುಂಡೈ ಸೋಶಿಯಲ್ ಮೀಡಿಯಾ ಪೋಸ್ಟ್ ಹಾಕಿದ್ದರಿಂದ ಭಾರತೀಯರು ಮತ್ತು ಭಾರತ ಸರಕಾರಕ್ಕೆ ಉಂಟಾದ ನೋವಿಗೆ ವಿಷಾದಿಸುವುದಾಗಿ ಕೊರಿಯಾ ಗಣರಾಜ್ಯದ ವಿದೇಶಾಂಗ ಸಚಿವರು ತಿಳಿಸಿದ್ದಾರೆ.”
“ಹ್ಯುಂಡೈ ಮೋಟಾರ್ಸ್ ಭಾರತದ ಜನರಿಗೆ ತನ್ನ ತೀವ್ರ ವಿಷಾದವನ್ನು ತಿಳಿಸುವ ಹೇಳಿಕೆಯನ್ನು ಸಹ ಬಿಡುಗಡೆ ಮಾಡಿದೆ. ಜೊತೆಗೆ ರಾಜಕೀಯ ಅಥವಾ ಧಾರ್ಮಿಕ ವಿಷಯಗಳ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ”
“ವಿವಿಧ ಕ್ಷೇತ್ರಗಳಲ್ಲಿ ವಿದೇಶಿ ಕಂಪನಿಗಳ ಹೂಡಿಕೆಯನ್ನು ಭಾರತ ಸ್ವಾಗತಿಸುತ್ತದೆ. ಆದರೆ, ಅಂತಹ ಕಂಪನಿಗಳು ಅಥವಾ ಅವುಗಳ ಅಂಗಸಂಸ್ಥೆಗಳು ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯ ವಿಷಯಗಳಲ್ಲಿ ಜನರನ್ನು ಸುಳ್ಳು ಮತ್ತು ತಪ್ಪುದಾರಿಗೆಳೆಯುವ ಹೇಳಿಕೆಗಳಿಂದ ದೂರವಿರುತ್ತವೆ ಎಂದು ನಿರೀಕ್ಷಿಸಲಾಗಿದೆ”

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!