ಹೊಸದಿಗಂತ ವರದಿ, ಮಡಿಕೇರಿ
ಕಾರ್ಮಿಕನ ಜೀವ ಬಲಿ ಪಡೆದ ಅಪಾಯಕಾರಿ ಹುಲಿಗೆ ಗುಂಡಿಕ್ಕಲು ಸರ್ಕಾರದಿಂದ ಶೀಘ್ರದಲ್ಲಿಯೇ ಅನುಮತಿ ಸಿಗುವ ಸಾಧ್ಯತೆಯಿದೆ, ಅದಕ್ಕೂ ಮೊದಲು ಕಾರ್ಯಾಚರಣೆ ನಡೆಸಿ ಅಪಾಯಕಾರಿ ಹುಲಿಯನ್ನು ಸೆರೆ ಹಿಡಿಯಲು ಪ್ರಯತ್ನಿಸಲಾಗುವುದು ಎಂದು ವೀರಾಜಪೇಟೆ ವಲಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಚಕ್ರಪಾಣಿ ಅವರು ಹೇಳಿದ್ದಾರೆ.
ಸೋಮವಾರ ಸಂಜೆ ಹುಲಿ ದಾಳಿಗೆ ಬಲಿಯಾದ ಕಾರ್ಮಿಕ ಗಣೇಶ್ ಮೃತದೇಹವಿಟ್ಟು ಗ್ರಾಮಸ್ಥರು ಹಾಗೂ ರೈತ ಸಂಘದ ಪದಾಧಿಕಾರಿಗಳು ಅಹೋರಾತ್ರಿ ಪ್ರತಿಭಟನೆ ನಡೆಸಿದ ಸಂದರ್ಭ ಪ್ರತಿಭಟನಾಕಾರರನ್ನುದ್ದೇಶಿಸಿ ಅವರು ಮಾತನಾಡಿದರು. ಬಿಟ್ಟಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ 1ನೇ ರುದ್ರಗುಪ್ಪೆ ಗ್ರಾಮದ ಕಾಫಿ ತೋಟದಲ್ಲಿ ಕಾಳು ಮೆಣಸು ಕೊಯ್ಲು ವೇಳೆ ಗಣೇಶ್ ಹುಲಿ ದಾಳಿಯಿಂದ ಮೃತಪಟ್ಟಿದ್ದರು.
ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಬರುವವರೆಗೂ ಮೃತದೇಹವನ್ನು ಕೊಂಡೊಯ್ಯಲು ಅವಕಾಶ ನೀಡುವುದಿಲ್ಲ ಎಂದು ಪಟ್ಟುಹಿಡಿದ ಗ್ರಾಮಸ್ಥರು ರಾತ್ರಿಯಿಡೀ ಸ್ಥಳದಲ್ಲೇ ಧರಣಿ ನಡೆಸಿದ್ದರು.
‘ಕಾರ್ಮಿಕನ ಸಾವಿಗೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ. ಗ್ರಾಮಸ್ಥರು ಭೀತಿಗೆ ಒಳಗಾಗಿದ್ದಾರೆ. ದುರಂತಕ್ಕೆ ಹೊಣೆಯಾಗಿರುವ ಅರಣ್ಯ ಇಲಾಖೆ ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲಿಸಬೇಕು’ ಎಂದು ಆಗ್ರಹಿಸಿ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಮನು ಸೋಮಯ್ಯ ಡಿವೈಎಸ್ಪಿ ಜಯಕುಮಾರ್ ಅವರಿಗೆ ದೂರು ನೀಡಿದರು. ಡಿವೈಎಸ್ಪಿ ಕ್ರಮದ ಭರವಸೆ ನೀಡಿದರು.
ಸ್ಥಳಕ್ಕೆ ಬಂದ ಉಪ ಅರಣ್ಯ ಸಂರಕ್ಷಣಾಧಿಕಾರಿ ಚಕ್ರಪಾಣಿ ಅವರನ್ನು ಸುತ್ತುವರಿದ ಗ್ರಾಮಸ್ಥರು, ಅವರ ವಿರುದ್ಧ ಘೋಷಣೆಗಳನ್ನು ಕೂಗಿದರಲ್ಲದೆ, ‘ಇಂತಹ ಅಧಿಕಾರಿಗಳು ಜಿಲ್ಲೆಗೆ ಬೇಕಾಗಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿ ತರಾಟೆಗೆ ತೆಗೆದುಕೊಂಡರು.
ಅಧಿಕಾರಿ ನೀಡಿದ ಭರವಸೆಯ ಬಳಿಕ ಮೃತದೇಹವನ್ನು ವೀರಾಜಪೇಟೆಯ ಸಾರ್ವಜನಿಕ ಆಸ್ಪತ್ರೆಗೆ ಕೊಂಡೊಯ್ದು ಮರಣೋತ್ತರ ಪರೀಕ್ಷೆ ನಡೆಸಿ, ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಯಿತು. ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೊಬಸ್ತ್ ಕಲ್ಪಿಸಲಾಗಿತ್ತು.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ