ಹೊಸದಿಗಂತ ವರದಿ, ಅಂಕೋಲಾ:
ಮೀಸಲು ಅರಣ್ಯ ಪ್ರದೇಶದಲ್ಲಿ ಗಿಡಗಳನ್ನು ಕುಡಿಯುವುದನ್ನು ಪ್ರಶ್ನಿಸಿದ ಉಪ ವಲಯ ಅರಣ್ಯಾಧಿಕಾರಿ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿರುವ ಘಟನೆ ತಾಲೂಕಿನ ಮೊರಳ್ಳಿ ಗುಂಡಬಾಳದಲ್ಲಿ ನಡೆದಿದೆ.
ಮೊರಳ್ಳಿ ನಿವಾಸಿ ರಾಮಾ ಜಟ್ಟಿ ಮಡಿವಾಳ ಎಂಬಾತ ಅರಣ್ಯ ಅಧಿಕಾರಿ ಮೇಲೆ ಹಲ್ಲೆ ನಡೆಸಿದ ಆರೋಪಿಯಾಗಿದ್ದು, ಈತ ಗುಂಡಬಾಳದ ಮೀಸಲು ಅರಣ್ಯ ಪ್ರದೇಶದಲ್ಲಿ ಈ ಹಿಂದೆ ಸಹ ಗಿಡಗಳನ್ನು ಕಡಿಯುವ ಕೃತ್ಯ ನಡೆಸುತ್ತಿದ್ದಾಗ ಅರಣ್ಯ ಇಲಾಖೆ ಆತನಿಗೆ ಎಚ್ಚರಿಕೆ ನೀಡಲಾಗಿತ್ತು. ಈಗ ಮತ್ತೆ ಗಿಡ ಕತ್ತರಿಸುತ್ತಿದ್ದ ಸಂದರ್ಭದಲ್ಲಿ ಅಲ್ಲಿಗೆ ಆಗಮಿಸಿದ ಗುಂಡಬಾಳ ಶಾಖೆಯ ಉಪ ವಲಯ ಅರಣ್ಯಾಧಿಕಾರಿ ಸತೀಶ ಸೂರ್ಯಕಾಂತ ಕಾಂಬಳೆ ಎನ್ನುವವರು ಅರಣ್ಯ ಪ್ರದೇಶದಲ್ಲಿ ಗಿಡಗಳನ್ನು ಕತ್ತರಿಸಬಾರದು ಎಂದು ಕತ್ತಿಯನ್ನು ಕಿತ್ತುಕೊಂಡಿದ್ದಾರೆ. ಈ ಸಂದರ್ಭದಲ್ಲಿ ಆರೋಪಿ ಕರ್ತವ್ಯ ನಿರತ ಅರಣ್ಯ ಇಲಾಖೆ ಅಧಿಕಾರಿಯ ವಿಸಲ್ ಗಾರ್ಡ್ ಎಳೆದಾಡಿ ಅಧಿಕಾರಿಯನ್ನು ನೆಲದ ಮೇಲೆ ಕೆಡವಿ ಹಲ್ಲೆ ನಡೆಸಿದ್ದಾನೆ ಎಂದು ತಿಳಿದು ಬಂದಿದೆ.
ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಆರೋಪಿತನು ಇನ್ನೂ ಮುಂದೆ ತನ್ನ ತಂಟೆಗೆ ಬಂದರೆ ಒಂದು ಗತಿ ತೋರಿಸುವುದಾಗಿ ಉಪ ವಲಯ ಅರಣ್ಯಾಧಿಕಾರಿಗೆ ಬೆದರಿಕೆ ಹಾಕಿದ್ದು, ಈ ಕುರಿತಂತೆ ಉಪ ವಲಯ ಅರಣ್ಯಾಧಿಕಾರಿ ಸತೀಶ ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ