ಹೊಸದಿಗಂತ ವರದಿ, ಸುಂಟಿಕೊಪ್ಪ:
ವಿದ್ಯುತ್ ಸ್ಪರ್ಶಗೊಂಡು ಗಂಡಾನೆಯೊಂದು ಸಾವಿಗೀಡಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಸುಂಟಿಕೊಪ್ಪ ಹೋಬಳಿಯ ಕಂಬಿಬಾಣೆ ಗ್ರಾಮದ ಪರ್ಚಿಕೆರೆ ಎಂಬಲ್ಲಿ ಉದಯಕುಮಾರ್ ಎಂಬವರಿಗೆ ಸೇರಿದ ತೋಟದಲ್ಲಿ ಸುಮಾರು 20 ವರ್ಷ ಪ್ರಾಯದ ಆನೆ ಸತ್ತು ಬಿದ್ದಿರುವುದು ಭಾನುವಾರ ಬೆಳಗ್ಗೆ ಕಂಡುಬಂದಿದೆ.
ಆದರೆ ಕುತ್ತಿಗೆಯಲ್ಲಿ ಬೇಲಿ ಹಾಕಲು ಬಳಸುವ ಮುಳ್ಳು ತಂತಿಯು ಉರುಳಿನಂತೆ ಸುತ್ತಿಕೊಂಡಿರುವುದು ಕಂಡು ಬಂದಿದ್ದು, ಮೇಲ್ನೋಟಕ್ಕೆ ಇದು ವಿದ್ಯುತ್ ಸ್ಪರ್ಶದಿಂದ ಸಾವನ್ನಪ್ಪಿರುವುದಾಗಿ ಅರಣ್ಯಾಧಿಕಾರಿಗಳು ಶಂಕಿಸಿದ್ದಾರೆ.
ಈ ಘಟನೆ ಶುಕ್ರವಾರ ರಾತ್ರಿ ಸಂಭವಿಸಿರುವುದಾಗಿ ಹೇಳಲಾಗಿದ್ದು, ಆನೆಯ ಮೃತದೇಹ ಸೆಟೆದುಕೊಂಡಿರುವುದು ಇದಕ್ಕೆ ಪುಷ್ಠಿ ನೀಡುವಂತಿದೆ. ಅರಣ್ಯ ಇಲಾಖೆಯ ಮೂಲಗಳ ಪ್ರಕಾರ ಇಬ್ಬರು ಆರೋಪಿಗಳ ಸುಳಿವು ಲಭ್ಯವಾಗಿದ್ದು, ಪತ್ತೆಗೆ ಬಲೆ ಬೀಸಿರುವುದಾಗಿ ತಿಳಿದು ಬಂದಿದೆ.
ಸ್ಥಳಕ್ಕೆ ಕುಶಾಲನಗರ ವಲಯ ಅರಣ್ಯಾಧಿಕಾರಿ ಕೆ.ವಿ.ಶಿವರಾಂ, ಡಿಸಿಎಫ್ ಪೂವಯ್ಯ, ಪೊಲೀಸ್ ಶ್ವಾನದಳ, ಸುಂಟಿಕೊಪ್ಪ ಪೊಲೀಸ್ ಠಾಣಾಧಿಕಾರಿ ಮತ್ತು ಸಿಬ್ಬಂದಿ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು. ಮೃತ ಆನೆಯ ಮರಣೋತ್ತರ ಪರೀಕ್ಷೆಯನ್ನು ಡಾ.ಚಿಟ್ಟಿಯಪ್ಪ ನಡೆಸಿದ ಬಳಿಕ ಅಂತ್ಯಸಂಸ್ಕಾರ ನೆರವೇರಿಸಲಾಯಿತು. ಅರಣ್ಯ ಇಲಾಖೆ ಮೊಕದ್ದಮೆ ದಾಖಲಿಸಿಕೊಂಡು ಮುಂದಿನ ಕ್ರಮ ಜರುಗಿಸಿದೆ.