January16, 2026
Friday, January 16, 2026
spot_img

ಡಕ್ ಔಟ್ ಮೂಲಕ ರೋಹಿತ್ ಹಿಂದಿಕ್ಕಿ ಮುಜುಗರದ ದಾಖಲೆ ಬರೆದ ಮಾಜಿ ನಾಯಕ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಾಕಿಸ್ತಾನದ ಮಾಜಿ ನಾಯಕ ಬಾಬರ್ ಆಝಂ ಅವರ ಕಳಪೆ ಫಾರ್ಮ್ ಮುಂದುವರೆದಿದ್ದು, ಇತ್ತೀಚೆಗೆ ಶತಕದ ಬರವನ್ನು ನೀಗಿಸಿದ್ದರೂ ಬ್ಯಾಟಿಂಗ್ ಲಯಕ್ಕೆ ಮರಳಲು ವಿಫಲರಾಗಿದ್ದಾರೆ. ನಡೆಯುತ್ತಿರುವ ತ್ರಿಕೋನ ಸರಣಿಯಲ್ಲಿ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಶೂನ್ಯ ಸಂಪಾದಿಸುವ ಮೂಲಕ ಬಾಬರ್ ಆಝಂ ಒಂದು ಮುಜುಗರದ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.

ಈ ಮೂಲಕ ಅವರು ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಪಾಕಿಸ್ತಾನ ಪರ ಅತಿ ಹೆಚ್ಚು ಬಾರಿ ಶೂನ್ಯಕ್ಕೆ ಔಟಾದ ಬೇಡದ ದಾಖಲೆಯನ್ನು ಸೈಮ್ ಅಯೂಬ್ ಮತ್ತು ಉಮರ್ ಗುಲ್ ಅವರೊಂದಿಗೆ ಜಂಟಿಯಾಗಿ ಹಂಚಿಕೊಂಡಿದ್ದಾರೆ. ಇವರು ಮೂವರು ತಲಾ 10 ಬಾರಿ ಡಕ್ ಆಗಿದ್ದಾರೆ.

ಶ್ರೀಲಂಕಾ ನೀಡಿದ 185 ರನ್‌ಗಳ ಗುರಿ ಬೆನ್ನತ್ತಿದ ಪಾಕಿಸ್ತಾನಕ್ಕೆ ಬಾಬರ್ ಆಝಂ ನಾಲ್ಕನೇ ಓವರ್‌ನಲ್ಲಿ ಕ್ರೀಸ್‌ಗೆ ಬಂದರು. ಆದರೆ, ದುಷ್ಮಂತ ಚಮೀರ ಅವರ ವೇಗದ ದಾಳಿಗೆ ಕೇವಲ ಎರಡು ಎಸೆತಗಳನ್ನು ಎದುರಿಸಿ ಖಾತೆ ತೆರೆಯುವ ಮೊದಲೇ ವಿಕೆಟ್ ಒಪ್ಪಿಸಿದರು. ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಮತ್ತು ಅರ್ಧಶತಕಗಳನ್ನು ಬಾರಿಸಿದ ದಾಖಲೆಗಳನ್ನು ಹೊಂದಿರುವ ಆಟಗಾರನಿಗೆ ಇದು ನಿಜಕ್ಕೂ ಆಘಾತಕಾರಿ ಪ್ರದರ್ಶನ.

ಕಳೆದ ಕೆಲ ದಿನಗಳಿಂದ ಬಾಬರ್ ಬ್ಯಾಟ್ ಸದ್ದು ಮಾಡುತ್ತಿಲ್ಲ. ಈ ಸರಣಿಯಲ್ಲಿ ಬಾಬರ್ ಶೂನ್ಯಕ್ಕೆ ಔಟಾಗಿರುವುದು ಇದು ಎರಡನೇ ಬಾರಿ. ಇದರ ಜೊತೆಗೆ, ಕಳೆದ 30 ದಿನಗಳಲ್ಲಿ ಇದು ಮೂರನೇ ಡಕ್ ಔಟ್ ಮತ್ತು ಕಳೆದ 10 ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಇದು ನಾಲ್ಕನೇ ಬಾರಿ ಶೂನ್ಯಕ್ಕೆ ಔಟಾಗಿರುವುದು ಅವರ ಕಳಪೆ ಲಯಕ್ಕೆ ಸಾಕ್ಷಿಯಾಗಿದೆ.

ರೋಹಿತ್ ಶರ್ಮಾ ದಾಖಲೆ ಬ್ರೇಕ್!

ಬಾಬರ್ ಆಝಂ ತಮ್ಮ ತವರು ನೆಲದಲ್ಲಿ ಅತಿ ಹೆಚ್ಚು ಡಕ್ ಔಟ್ ಆದ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಭಾರತದ ಮಾಜಿ ನಾಯಕ ರೋಹಿತ್ ಶರ್ಮಾ ಅವರ ದಾಖಲೆಯನ್ನು ಮುರಿದಿದ್ದಾರೆ. ರೋಹಿತ್ ಶರ್ಮಾ ತವರಿನಲ್ಲಿ 5 ಬಾರಿ ಶೂನ್ಯಕ್ಕೆ ಔಟಾಗಿದ್ದರೆ, ಬಾಬರ್ ಇದೀಗ ತಮ್ಮ ತವರಿನಲ್ಲಿ 6ನೇ ಬಾರಿಗೆ ಡಕ್ ಔಟ್ ಆಗಿದ್ದಾರೆ. ಸದ್ಯ ಈ ಪಟ್ಟಿಯಲ್ಲಿ ಶ್ರೀಲಂಕಾದ ದಾಸುನ್ ಶನಕ (7 ಡಕ್‌ಗಳು) ಅಗ್ರಸ್ಥಾನದಲ್ಲಿದ್ದು, ಬಾಬರ್ ಆಝಂ ಶೀಘ್ರದಲ್ಲೇ ಆ ದಾಖಲೆಯನ್ನೂ ಸರಿಗಟ್ಟುವ ಸಾಧ್ಯತೆ ಇದೆ.

ಈ ಕಳಪೆ ಪ್ರದರ್ಶನವು ಬಾಬರ್ ಫಾರ್ಮ್ ಬಗ್ಗೆ ಮತ್ತಷ್ಟು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಅವರ ಅಭಿಮಾನಿಗಳು ಬಾಬರ್ ಶೀಘ್ರದಲ್ಲೇ ತಮ್ಮ ಲಯವನ್ನು ಕಂಡುಕೊಳ್ಳಲಿ ಎಂದು ಹಾರೈಸುತ್ತಿದ್ದಾರೆ.

Must Read

error: Content is protected !!