ʻದೇವರು, ತಂದೆ-ತಾಯಿಯ ಅಶೀರ್ವಾದದಿಂದ ಆರೋಗ್ಯವಾಗಿದ್ದೇನೆ: ಪಾರ್ಶ್ವವಾಯು ಬಗ್ಗೆ ಎಚ್ಚರ ಇರಲಿʼ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಅನಾರೋಗ್ಯದಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆಗಿದ್ದಾರೆ. ಜಯನಗರದ ಅಪೊಲೋ ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆದ ಬಳಿಕ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ದೇವರು, ತಂದೆ-ತಾಯಿಯ ಆಶೀರ್ವಾದ ಹಾಗೂ ನಿಮ್ಮ ಪ್ರೀತಿ ಹಾರೈಕೆಯಿಂದ ಇಂದು ಸಂಪೂರ್ಣ ಗುಣಮುಖನಾಗಿ ಹೊರಬಂದಿದ್ದೇನೆ. ಯಾವುದೇ ಕಾರಣಕ್ಕೂ ಆರೋಗ್ಯ ವಿಚಾರದಲ್ಲಿ ನಿರ್ಲಕ್ಷ್ಯ ಭಾವನೆ ಒಳ್ಳೆಯದಲ್ಲ ಎಂದರು.

ಪಾರ್ಶ್ವವಾಯು ಬಗ್ಗೆ ನಿರ್ಲಕ್ಷ್ಯ ಬೇಡ ಎಂದ ಅವರು, ನಿಮ್ಮ ಮನೆಯಲ್ಲೂ ಯಾರಿಗಾದರೂ ಕಾಯಿಲೆಯ ಸೂಕ್ಷ್ಮ ಅರ್ಥವಾಗುತ್ತಿದ್ದಂತೆ ಆಸ್ಪತ್ರೆಗೆ ದಾಖಲಾಗುವಂತೆ ಸಲಹೆ ಕೊಟ್ಟರು. ನಾನು ಎರಡನೇ ಸಲ ಈ ಕಾಯಿಲೆಗೆ ತುತ್ತಾಗಿದ್ದು, ಹೆಚ್ಚಿನ ಹಾನಿಯಾಗಿದೆ. ಕೂಡಲೇ ನಮ್ಮ ಫ್ಯಾಮಿಲಿ ವೈದ್ಯರು ಡಾ.ಮಂಜುನಾಥ್‌ ಸಲಹೆ ಮೇರೆಗೆ ಅಪೊಲೋ ಆಸ್ಪತ್ರೆಗೆ ದಾಖಲಾದೆ. ಅಲ್ಲಿನ ವೈದ್ಯಕೀಯ ಸಿಬ್ಬಂದಿ ಬಹಳ ಮುತುವರ್ಜಿ ವಹಿಸಿ ನನ್ನನ್ನು ನೋಡಿಕೊಂಡಿದ್ದಾರೆ. ಆಸ್ಪತ್ರೆ ಎಲ್ಲಾ ವೈದ್ಯಕೀಯ ಸಿಬ್ಬಂದಿಗೆ ಧನ್ಯವಾದಗಳನ್ನು ತಿಳಿಸಿದರು.

ಹಣದ ಬಗ್ಗೆ ಯೋಚಿಸಿ ದುಡುಕಿ ಯಾವುದೇ ನಿರ್ಧಾರ ತೆಗೆದುಕೊಳ್ಳಬೇಡಿ, ಮೊದಲು ಆಸ್ಪತ್ರೆಗೆ ದಾಖಲಾಗಿ ಉತ್ತಮ ಚಿಕಿತ್ಸೆಗೆ ಒಳಗಾಗುವಂತೆ ಮನವಿ ಮಾಡಿದರು. ನಿರ್ಲಕ್ಷ್ಯ ಮಾಡಿದರೆ ಹಾಸಿಗೆ ಹಿಡಿಯೋದರಲ್ಲಿ ಅನುಮಾನವೇ ಇಲ್ಲ, ಭಗವಂತನ ದಯೆಯಿಂದ ಇಂದು ನಾನು ಗುಣಮುಖನಾಗಿದ್ದೇನೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!