ಜಮ್ಮು ಕಾಶ್ಮೀರ ಪರಿಷತ್‌ನ ಮಾಜಿ ಸದಸ್ಯೆ ಶಹನಾಜ್ ಗನೈ ಬಿಜೆಪಿ ಸೇರ್ಪಡೆ

ಹೊಸದಿಗಂತ ಡಿಜಿಟಲ್ ಡೆಸ್ಕ್:
 
ಜಮ್ಮು ಮತ್ತು ಕಾಶ್ಮೀರದ ನ್ಯಾಷನಲ್ ಕಾನ್ಫರೆನ್ಸ್‌ ನಾಯಕಿ, ವಿಧಾನ ಪರಿಷತ್‌ನ ಮಾಜಿ ಸದಸ್ಯೆ ಡಾ.ಶಹನಾಜ್ ಗನೈ ಇಂದು ಬಿಜೆಪಿ ಸೇರ್ಪಡೆಯಾಗಿದ್ದಾರೆ .

ಕೇಂದ್ರ ಸಚಿವ ಜಿತೇಂದ್ರ ಸಿಂಗ್, ಉಧಂಪುರದ ಲೋಕಸಭಾ ಸಂಸದ ಮತ್ತು ಪಕ್ಷದ ಪ್ರಧಾನ ಕಾರ್ಯದರ್ಶಿ ತರುಣ್ ಚುಗ್ ಸಮ್ಮುಖದಲ್ಲಿ ಅವರು ಪಕ್ಷ ಸೇರ್ಪಡೆಯಾದರು.

ಬಳಿಕ ಮಾತನಾಡಿದ ಗನೈ, ಇಂದು ನನಗೆ ಬಿಜೆಪಿ ಸೇರಲು ಅವಕಾಶ ಸಿಕ್ಕಿದೆ. ಹೈಕಮಾಂಡ್‌ಗೆ ಕೃತಜ್ಞನಾಗಿದ್ದೇನೆ ಎಂದರು.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಬಿಜೆಪಿ ಸರ್ಕಾರವು ಕಣಿವೆ ಜನರಿಗಾಗಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದೆ. ಅವರು ಜಾರಿಗೆ ತಂದ ‘ಸಬ್ಕಾ ಸಾಥ್ ಸಬ್ಕಾ ವಿಕಾಸ್’ ತತ್ವದಿಂದ ಪ್ರಭಾವಿತರಾದವರಲ್ಲಿ ನಾನೂ ಕೂಡ ಒಬ್ಬಳು. ಈ ಸರ್ಕಾರವು ‘ಪರಿವರ್ತನೆ’ಗೆ ಒಳಗಾಗುತ್ತಿರುವ ಜಮ್ಮು ಮತ್ತು ಕಾಶ್ಮೀರ ಸೇರಿದಂತೆ ಸಮಾಜದ ಪ್ರತಿಯೊಂದು ವರ್ಗವನ್ನೂ ಸಶಕ್ತಗೊಳಿಸಿದೆ. ಜನರು ಕೂಡ ಮೋದಿ ಮತ್ತು ಬಿಜೆಪಿಯನ್ನು ಬಲಪಡಿಸಲು ಬಯಸುತ್ತಾರೆ ಎಂದು ಹೇಳಿದರು.

ಕಣಿವೆ ನಾಡು ಶಾಂತಿಯುತವಾಗಿದೆ. ಎಲ್ಲರೂ ಶಾಂತಿಯುತ ಜೀವನ ನಡೆಸುತ್ತಿದ್ದಾರೆ. ಅದಕ್ಕೆ ಕಾರಣ ಕೇಂದ್ರ ಸರ್ಕಾರ ತೆಗೆದುಕೊಂಡ ದಿಟ್ಟ ನಿರ್ಧಾರಗಳು. ಅವರ ದಿಟ್ಟ ನಿರ್ಧಾರದಿಂದ ಗಡಿಯಲ್ಲಿ ಎಲ್ಲವೂ ಶಾಂತವಾಗಿದೆ. ​ಗಡಿಯೊಳಗೆ ಪ್ರವೇಶಿಸಲು ಪಾಕಿಸ್ತಾನದ ಉಗ್ರರು ಧೈರ್ಯ ತೋರುತ್ತಿಲ್ಲ. ಇದು ಅವರ ಆಡಳಿತ ವೈಖರಿಗೆ ದಿಟ್ಟ ಉದಾಹರಣೆ. ಈ ಪ್ರದೇಶವು ಹಿಂದೆ ಭಯೋತ್ಪಾದಕ ಕೃತ್ಯಗಳಿಗೆ ರಾಷ್ಟ್ರವ್ಯಾಪಿ ಸುದ್ದಿ ಮಾಡುತ್ತಿತ್ತು. ಇದೀಗ ಇದೇ ಪ್ರದೇಶಕ್ಕೆ ಎರಡು ಕೋಟಿ ರೂ.ಗೂ ಹೆಚ್ಚು ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ. ದಾಖಲೆಗಳು ಮುರಿಯುತ್ತಿವೆ. ಇದು ಶಾಂತಿ ಮತ್ತು ಸಮೃದ್ಧಿಯ ಸಂಕೇತ ಎಂದು ಶಹನಾಜ್ ಕೇಂದ್ರ ಸರ್ಕಾರವನ್ನು ಶ್ಲಾಘಿಸಿದರು.

ಶಹನಾಜ್ ಅವರ ತಂದೆ ಗುಲಾಮ್ ಅಹ್ಮದ್ ಗನೈ ಅವರು ಜಮ್ಮು ಮತ್ತು ಕಾಶ್ಮೀರದಲ್ಲಿ ಈ ಹಿಂದೆ ಸಚಿವರಾಗಿ ಕೆಲಸ ಮಾಡಿದ್ದರು. ಪ್ರಾದೇಶಿಕ ರಾಜಕೀಯ ಪಕ್ಷ ನ್ಯಾಷನಲ್ ಕಾನ್ಫರೆನ್ಸ್‌ನೊಂದಿಗೆ ದೀರ್ಘಕಾಲ ಸಂಬಂಧ ಹೊಂದಿದ್ದ ಶಹನಾಜ್, 2013ರಲ್ಲಿ ಎಂಎಲ್‌ಸಿ ಆಗಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!