August 20, 2026
Thursday, August 20, 2026
spot_img

ಸ್ವಕ್ಷೇತ್ರ ತಿಪಟೂರಿನಲ್ಲಿ ಮಾಜಿ ಸಚಿವ ಬಿ.ಸಿ. ನಾಗೇಶ್‌ ಅಂತ್ಯಕ್ರಿಯೆ: ರಾಜಕೀಯ ಗಣ್ಯರು ಭಾಗಿ

ಹೊಸದಿಗಂತ ವರದಿ ತುಮಕೂರು:

ಹಲವು ದಿನಗಳಿಂದ ಅನಾರೋಗ್ಯ ಸಮಸ್ಯೆಗಳಿಂದ ಬಾಧಿತರಾಗಿದ್ದ ಮಾಜಿ ಸಚಿವ ಬಿ.ಸಿ. ನಾಗೇಶ್‌ ಬೆಂಗಳೂರಿನಲ್ಲಿರುವ ಪುತ್ರಿಯ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ಒಂದು ವರ್ಷದಿಂದ ಬ್ರೈನ್‌ ಟ್ಯೂಮರ್‌ನಿಂದ ಬಳಲುತ್ತಿದ್ದ ನಾಗೇಶ್‌ ಅವರಿಗೆ ಎರಡು ಬಾರಿ ಶಸ್ತ್ರಚಿಕಿತ್ಸೆಯಾಗಿತ್ತು. ಇಂದು ಸ್ವಕ್ಷೇತ್ರ ತಿಪಟೂರಿನಲ್ಲಿ ಅಂತ್ಯಕ್ರಿಯೆ ನಡೆಯುತ್ತಿದ್ದು, ಸಾವಿರಾರು ಅಭಿಮಾನಿಗಳು, ರಾಜಕೀಯ ಗಣ್ಯರು ಭಾಗಿಯಾಗಿದ್ದಾರೆ.

ನಾಗೇಶ್‌ ಅವರ ಅಂತ್ಯಕ್ರಿಯೆಯಲ್ಲಿ ಶಾಸಕ ಬಸವರಾಜ ಯತ್ನಾಳ್‌, ಮಾಜಿ ಡಿಸಿಎಂ ಕೆ.ಎಸ್‌. ಈಶ್ವರಪ್ಪ, ಕೇಂದ್ರ ಸಚಿವ ವಿ. ಸೋಮಣ್ಣ ಭಾಗಿಯಾಗಿದ್ದಾರೆ.

ಯಾರ ಸುದ್ದಿಗೂ ಬಾರದೇ ಕೆಲಸವೇ ದೇವರೆನ್ನುತ್ತಿದ್ದ ವ್ಯಕ್ತಿ: ಯತ್ನಾಳ್‌

ಅಂತ್ಯಕ್ರಿಯೆಯಲ್ಲಿ ಭಾಗಿಯಾದ ಶಾಸಕ ಬಸವರಾಜ ಯತ್ನಾಳ್‌ ನಾಗೇಶ್‌ ಅವರ ಬಗ್ಗೆ ಭಾವುಕವಾಗಿ ಮಾತನಾಡಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲಿ ಶಿಸ್ತು ತಂದಿದ್ದು ನಾಗೇಶ್‌. ಯಾರ ಸುದ್ದಿಗೂ ಹೋಗದೇ ಕೊಟ್ಟಿರುವ ಕೆಲಸವನ್ನು ಸಂಪೂರ್ಣ ಶ್ರದ್ಧೆಯಿಂದ ಮಾಡಿ ಮುಗಿಸುತ್ತಿದ್ದರು, ಯಾವುದೇ ರಾಜಕೀಯ ಹಿನ್ನೆಲೆ ಇಲ್ಲದೆ ಎರಡು ಬಾರಿ ಗೆದ್ದು ಶಾಸಕರಾಗಿ, ಸಚಿವರಾಗಿ ನಾಡಿನ ಸೇವೆ ಮಾಡಿದ್ದಾರೆ. ಇಂತಹ ರಾಜಕಾರಣಿಗಳ ಕೊರತೆಯನ್ನು ಅನುಭವಿಸುತ್ತಿದ್ದೇವೆ ಎಂದಿದ್ದಾರೆ.

ನಾಗೇಶ್‌ ಕುಟುಂಬಕ್ಕೆ ಸಾಂತ್ವನ ಹೇಳಿದ ಈಶ್ವರಪ್ಪ

ನಾವು ಅತ್ಯಂತ ಪ್ರಾಮಾಣಿಕ ವ್ಯಕ್ತಿಯನ್ನು ಕಳೆದುಕೊಂಡಿದ್ದೇವೆ. ಪ್ರತೀ ಕಾರ್ಯಕರ್ತರ ಮನೆಗೂ ಭೇಟಿ ನೀಡಿ ವಿಚಾರಿಸುತ್ತಿದ್ದರು. ಕಾರ್ಯಕರ್ತರಿಗೆ ನಾಗೇಶ್‌ ಎಂದರೆ ಅಚ್ಚುಮೆಚ್ಚು. ಇಂತಹ ನಾಯಕ ಮತ್ತೊಬ್ಬರಿಲ್ಲ. ಶಿವಮೊಗ್ಗದಿಂದ ಬೆಂಗಳೂರಿಗೆ ಪ್ರತೀ ಬಾರಿ ಹೋಗುತ್ತಿದ್ದಾಗ ನಾಗೇಶ್‌ ಮನೆಗೆ ಹೋಗಿಯೇ ಹೋಗುತ್ತಿದ್ದೆವು. ಅಲ್ಲಿ ಅವರು ಅವರ ಪತ್ನಿಯವರು ನಮ್ಮನ್ನು ಕೂರಿಸಿ ಆತಿಥ್ಯ ಮಾಡುತ್ತಿದ್ದರು. ನಾಗೇಶ್‌ ಇಲ್ಲ ಆದರೆ ಅವರ ಸಿದ್ಧಾಂತ ನಮ್ಮೊಂದಿಗೆ ಜೀವಂತವಾಗಿದೆ ಎಂದಿದ್ದಾರೆ.

ಹುಟ್ಟು ಸಾವು ಸಹಜ ಅಂತಾ ಇದ್ರು: ವಿ. ಸೋಮಣ್ಣ

ನಾಗೇಶ್‌ ಅವರ ಅಂತ್ಯಕ್ರಿಯೆಯಲ್ಲಿ ಭಾಗಿಯಾದ ಸಚಿವ ವಿ. ಸೋಮಣ್ಣ ಭಾವುಕರಾಗಿ ಮಾತನಾಡಿದ್ದಾರೆ. ನಾಗೇಶ್‌ ಅಂತವರು ಸಮಾಜಕ್ಕೆ ಬೇಕಿತ್ತು. ಜನಸಾಮಾನ್ಯರ ಜೊತೆ ಇದ್ದು ಅವರ ಸಮಸ್ಯೆಗಳನ್ನು ಕೇಳಿ ಅಲ್ಲಿಯೇ ಪರಿಹಾರ ಕೊಡುತ್ತಿದ್ದರು. ಒಮ್ಮೆ ನಾನು ಹಾಗೂ ಮಾಧುಸ್ವಾಮಿ ನಡುವೆ ಮನಸ್ತಾಪವಾದಾಗ ಅದನ್ನು ಸರಿ ಮಾಡಿದ್ದು ನಾಗೇಶ್‌ ಅವರೇ. ಅವರ ಅಗಲಿಕೆ ಮನಸ್ಸಿಗೆ ತುಂಬಾ ನೋವುಂಟು ಮಾಡಿದೆ ಎಂದಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !