May 29, 2026
Friday, May 29, 2026
spot_img

ರಾಹುಲ್ ಗಾಂಧಿಯಿಂದ ಒಬಿಸಿ ಸಮುದಾಯಕ್ಕೆ ಅಪಮಾನ: ಮಾಜಿ ಸಚಿವ ಬಿ.ಶ್ರೀರಾಮುಲು ಟೀಕೆ

ಹೊಸ ದಿಗಂತ ವರದಿ, ಬಳ್ಳಾರಿ:

ಒಬಿಸಿ ನಾಯಕರ ಬಗ್ಗೆ ಮಾತನಾಡುತ್ತಿದ್ದ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ, ಇಂದು ಒಬಿಸಿ ಪ್ರಬಲ ನಾಯಕ ಸಿಎಂ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿ, ಒಬಿಸಿ ಸಮುದಾಯಕ್ಕೆ ಅಪಮಾನ ಮಾಡಿದ್ದಾರೆ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಅವರು ವಾಗ್ದಾಳಿ ನಡೆಸಿದರು.

ರಾಹುಲ್ ಗಾಂಧಿ ಈಗ ಮಾಡಿದ್ದೇನು?

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನ ಮಂತ್ರಿ ಮೋದಿ ಅವರ ಸಂಪುಟದಲ್ಲಿ ಎಷ್ಟು ಜನರು ಒಬಿಸಿ ಅವರಿದ್ದಾರೆ ಎಂದು ಪ್ರಶ್ನಿಸುತ್ತಿದ್ದ ರಾಹುಲ್ ಗಾಂಧಿ ಈಗ ಮಾಡಿದ್ದೇನು? ಕುರುಬ ಸಮಾಜದ, ಒಬಿಸಿ ವರ್ಗದ ಪ್ರಭಾವಿ ನಾಯಕ ಸಿದ್ದರಾಮಯ್ಯ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿ ಅವರನ್ನು ಅಪಮಾನ ಮಾಡಿದ್ದಾರೆ. ಇದು ರಾಜ್ಯದ ಒಬಿಸಿ ಎಲ್ಲ ನಾಯಕರ ಕಣ್ಣನ್ನು ಕೆಂಪಾಗಿಸಿದೆ. ಕುರುಬ ಸಮುಯದವರು ಹೋರಾಟದ ಹಾದಿ ತುಳಿದಿದ್ದಾರೆ ಎಂದು ಹೇಳಿದರು.

ಒತ್ತಾಯದಿಂದ ರಾಜೀನಾಮೆ ಕೊಡಿಸಿದ್ದಾರೆ

ಸಿದ್ದರಾಮಯ್ಯ ಅವರ ಮುಖದಲ್ಲಿ ತೀವ್ರ ದುಃಖ ಕಾಣಿಸುತ್ತಿದೆ. ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿಯನ್ನಾಗಿ ಮುಂದುವರೆಯಲು ಕೈ ನಾಯಕರು ಬಿಟ್ಟಿರಲಿಲ್ಲ. ಕ್ಲೈಮ್ಯಾಕ್ಸ್ ಹಂತಕ್ಕೆ ತಂದು ಒತ್ತಾಯದಿಂದ ಅವರನ್ನು ರಾಹುಲ್ ಗಾಂಧಿ ರಾಜೀನಾಮೆ ಕೊಡಿಸಿದ್ದಾರೆ ಎಂದು ಟೀಕಿಸಿದರು.

ಕುರ್ಚಿ ಕಾಲನ್ನು ಎಳೆಯುತ್ತಿದ್ದರು

ಕಾಂಗ್ರೆಸ್ ನ ಈ ಬೆಳವಣಿಗೆ ಇಡೀ ಒಬಿಸಿ ಸಮುದಾಯವರನ್ನು ಕೆರಳಿಸಿದೆ. ಇದೊಂದು ಸಿದ್ದರಾಮಯ್ಯ ಅವರಿಗೆ ಅಪಮಾನ ಮಾಡಿದ ಕೆಲಸವಾಗಿದೆ. 3 ವರ್ಷಗಳ ಕಾಲ ಸಿದ್ದರಾಮಯ್ಯ ಅವರನ್ನು ನೆಮ್ಮದಿಯಿಂದ ಆಡಳಿತ ನಡೆಸಲು ಬಿಡಲಿಲ್ಲ. ಅವರ ಕುರ್ಚಿ ಕಾಲನ್ನು ಡಿಕೆಶಿ, ಖರ್ಗೆ ಅವರು ಎಳೆಯುತ್ತಿದ್ದರು. ಬಹುತೇಕ ಆಕಾoಕ್ಷಿಗಳು ಸಿಎಂ ಕುರ್ಚಿಯನ್ನು ಎಳೆದಾಡಿ, ಎಳೆದಾಡಿ ಕುರ್ಚಿ ಸಡಿಲವಾಗಿತ್ತು. ಬ್ಯಾಲೆನ್ಸ್ ತಪ್ಪಿರುವ ಕುರ್ಚಿಯನ್ನು ಡಿ.ಕೆ.ಶಿವಕುಮಾರ್ ಅವರಿಗೆ ಕೊಟ್ಟಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

2028ರಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ

ರಾಜ್ಯದಿಂದ ಕಾಂಗ್ರೆಸ್ ತೊಲಗಬೇಕು ಎಂದು ಜನರು ಸಂಕಲ್ಪ ಮಾಡಿದ್ದಾರೆ. 2028ರಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಪಡೆದು ಅಧಿಕಾರಕ್ಕೆ ಬರಲಿದೆ, ಇದರಲ್ಲಿ ಅನುಮಾನವೇ ಬೇಡ. ಅಹಿಂದ ನಾಯಕ ಸಿದ್ದರಾಮಯ್ಯ ಅವರನ್ನು ಕೆಳಗಿಳಿಸಿ ಕಾಂಗ್ರೆಸ್ ದೊಡ್ಡ ತಪ್ಪು ಮಾಡಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಸಿದ್ದರಾಮಯ್ಯ ಅವರಿಂದಲೇ ಹೆಚ್ಚು ಶಾಸಕರು ಗೆಲುವು ಸಾಧಿಸಿದ್ದು, ಕಾಂಗ್ರೆಸ್ ನಿಂದ ಸಿದ್ದರಾಮಯ್ಯ ಅಲ್ಲ, ಸಿದ್ದರಾಮಯ್ಯ ಅವರಿಂದಲೇ ಕಾಂಗ್ರೆಸ್ ಇದೆ ಎಂಬುವುದನ್ನು ವರಿಷ್ಠರು ಮರೆತಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಎಲ್ಲ ಸಮುದಾಯದವರು ಸೇರಿ ಕಾಂಗ್ರೆಸ್ ಮುಗಿಸುವ ಕೆಲಸ ಮಾಡಲಿದ್ದಾರೆ ಎಂದರು.

ಕಂಪ್ಲಿ ಮಾಜಿ ಶಾಸಕ ಟಿ. ಎಚ್.ಸುರೇಶ್ ಬಾಬು ಅವರು ಮಾತನಾಡಿ, ಸಿ.ಎಂ. ಸಿದ್ದರಾಮಯ್ಯ ಅವರನ್ನು ರಾಹುಲ್ ಗಾಂಧಿ ಅವರು ಕೆಳಗಿಸಿ ಅಪಮಾನ ಮಾಡಿದ್ದಾರೆ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಬೇಕು ಎನ್ನುವ ಜನರ ತೀರ್ಮಾನ ಮಾಡಿದ ಹಿನ್ನೆಲೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ಹೆಚ್ಚು ಸ್ಥಾನಗಳು ಬಂದಿವೆ. ನಮ್ಮ ಜಿಲ್ಲೆಯಲ್ಲಿ ಸಿದ್ದರಾಮಯ್ಯ ಅವರ ಫೋಟೋ ಹಿಡಿದುಕೊಂಡು ಬಹುತೇಕ ಶಾಸಕರು ಗೆದ್ದಿದ್ದಾರೆ. ಆದರೆ, ಅವರು ರಾಜಿನಾಮೆ ನೀಡಿದ ಕೂಡಲೇ, ಡಿ.ಕೆ.ಶಿವಕುಮಾರ್ ಅವರ ಮನೆಗೆ ಹೂಗುಚ್ಛ ಹಿಡಿದು ತೆರಳಿ ಶುಭಾಶಯಗಳನ್ನು ತಿಳಿಸಿದ್ದಾರೆ. ಇಂತಹವರಿಗೆ ನಾಚಿಕೆಯಾಗಬೇಕು. ಅವರಿಗೆ ಕನಿಷ್ಠ ಸ್ವಲ್ಪನೂ ನೋವಾಗಿಲ್ಲ, ಎಲ್ಲವನ್ನೂ ಜನರು ಗಮನಿಸುತ್ತಿದ್ದು, ಎಲ್ಲರಿಗೂ ಜನರೇ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !