ರೇಣುಕಾಸ್ವಾಮಿ ಕುಟುಂಬಕ್ಕೆ ಸಾಂತ್ವನ ಹೇಳಿದ ಮಾಜಿ ಸಚಿವ ಬಿ.ಸಿ.ಪಾಟೀಲ್

ಹೊಸದಿಗಂತ ವರದಿ, ಚಿತ್ರದುರ್ಗ :
ರೇಣುಕಾಸ್ವಾಮಿ ಅಶ್ಲೀಲ ಸಂದೇಶದ ಬಗ್ಗೆ ದೂರು ನೀಡಬಹುದಿತ್ತು. ಪೊಲೀಸ್ ಅಧಿಕಾರಿಗಳಿಗೆ ಹೇಳಿದ್ದರೆ ಎಚ್ಚರಿಕೆ ನೀಡುತ್ತಿದ್ದರು. ದೊಡ್ಡ ಶಿಕ್ಷೆ ಕೊಡುವ ಅಪರಾಧ ಆಗಿರಲಿಲ್ಲ ಎಂದು ಮಾಜಿ ಕೃಷಿ ಸಚಿವ ಹಾಗೂ ಬಿಜೆಪಿ ಮುಖಂಡ ಬಿ.ಸಿ.ಪಾಟೀಲ್ ತಿಳಿಸಿದರು.

ನಟ ದರ್ಶನ್ ಮತ್ತು ಗ್ಯಾಂಗ್‌ನಿಂದ ಹತ್ಯೆಗೀಡಾದ ರೇಣುಕಾಸ್ವಾಮಿ ಅವರ ಮನೆಗೆ ಭೇಟಿ ನೀಡಿ, ರೇಣುಕಾಸ್ವಾಮಿ ಕುಟುಂಬದವರಿಗೆ ಸಾಂತ್ವಾನ ಹೇಳಿದ ಅವರು, ಸಣ್ಣ ವಿಚಾರಕ್ಕೆ ಕೊಲೆಯಂಥ ಕೃತ್ಯ ನಡೆಯಬಾರದಿತ್ತು. ಈ ವಯಸ್ಸಿನಲ್ಲಿ ನಿಮಗೆ ಈ ಸ್ಥಿತಿ ನಿರ್ಮಾಣ ಆಗಬಾರದಿತ್ತು. ಸೆಷನ್‌ನಲ್ಲಿ ಬಿಜೆಪಿಯಿಂದ ಈ ವಿಚಾರದ ಬಗ್ಗೆ ಧ್ವನಿ ಎತ್ತುವ ಭರವಸೆ ನೀಡಿದರು. ಇದೇ ಸಂದರ್ಭದಲ್ಲಿ ಕುಟುಂಬಕ್ಕೆ ೫೦ ಸಾವಿರ ರೂ. ನೆರವು ನೀಡಿದರು.

ತದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೇಣುಕಾಸ್ವಾಮಿ ಹತ್ಯೆ ಪ್ರಕರಣ ನಿಸ್ಪಕ್ಷಪಾತ ತನಿಖೆ ಆಗಲಿ. ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಆರೋಪಿಗಳಿಗೆ ಶಿಕ್ಷೆ ಆಗಲಿ. ಇದೊಂದು ಆಕಸ್ಮಿಕ ಘಟನೆ. ಮೃತನ ಪತ್ನಿಗೆ ಸರ್ಕಾರ ಉದ್ಯೋಗ ಕೊಡಬೇಕು. ಪ್ರಕರಣದಲ್ಲಿ ಯಾರೇ ಭಾಗಿಯಾಗಿದ್ದರೂ ತಪ್ಪಿತಸ್ಥರೇ.

ನಟ ದರ್ಶನ್ ಒಬ್ಬ ಒಳ್ಳೆ ವ್ಯಕ್ತಿ ಒಳ್ಳೆಯ ನಟ. ರೇಣುಕಾಸ್ವಾಮಿ ಹತ್ಯೆ ಬಗ್ಗೆ ದರ್ಶನ್ ಮೇಲೆ ಆಪಾದನೆ ಇದೆ. ಪ್ರಕರಣದ ತನಿಖೆ ಬಳಿಕ ಸತ್ಯಾಸತ್ಯತೆ ಗೊತ್ತಾಗಲಿದೆ. ನಟ ದರ್ಶನ್‌ಗೆ ಬ್ಯಾನ್ ವಿಚಾರ ಫಿಲ್ಮ್ ಚೆಂಬರ್‌ಗೆ ಬಿಟ್ಟ ವಿಚಾರ ಎಂದು ಬಿ.ಸಿ ಪಾಟೀಲ್ ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!