ಹೊಸದಿಗಂತ ವರದಿ ಮೈಸೂರು :
ಕಳೆದ 28 ದಿನಗಳ ಹಿಂದೆ ತೀವ್ರ ಹೃದಯಾಘಾತದಿಂದ ನಿಧನರಾದ ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿದ್ದ ದಿವಂಗತ ಆರ್.ಧ್ರುವನಾರಾಯಣ್ ಪತ್ನಿ ವೀಣಾ.ಆರ್.ಧ್ರುವನಾರಾಯಣ್(54) ವಿಧಿವಶರಾಗಿದ್ದಾರೆ.
ಕಳೆದ ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ವೀಣಾ.ಆರ್.ನಾರಾಯಣ್ ಚಿಕಿತ್ಸೆ ಫಲಕಾರಿಯಾಗದೆ ಇಂದು ನಿಧನರಾಗಿದ್ದಾರೆ.
ಮಾರ್ಚ್ 11 ರಂದು ಆರ್.ಧ್ರುವನಾರಾಯಣ್ ಮೃತಪಟ್ಟಿದ್ದರು. ಒಂದು ತಿಂಗಳ ಅವಧಿಯಲ್ಲೇ ಪತ್ನಿ ಸಹ ಪತಿಯ ಹಾದಿ ಹಿಡಿದಿದ್ದಾರೆ. ಮೈಸೂರಿನ ವಿಜಯನಗರದಲ್ಲಿರುವ ರೇಡಿಯೆಂಟ್ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ತಂದೆ- ತಾಯಿ ಕಳೆದಕೊಂಡು ಕುಟುಂಬ ಕಂಗಲಾಗಿದೆ.
ಶನಿವಾರ ಅಂತ್ಯಕ್ರಿಯೆ:
ಇಂದು ನಿಧನರಾಗಿರುವ ದಿವಂಗತ ಆರ್ ಧ್ರುವನಾರಾಯಣ್ ರವರ ಪತ್ನಿ ವೀಣಾ ಧ್ರುವನಾರಾಯಣ್ರ ಪಾರ್ಥಿವ ಶರೀರವನ್ನು ಮೈಸೂರು ವಿಜಯನಗರದ ಸ್ವಗೃಹದಲ್ಲಿ ಇಂದು ಮಧ್ಯಾಹ್ನ 3ರ ತನಕ ಸಾರ್ವಜನಿಕರ ದರ್ಶನಕ್ಕೆ ಇಡಲಾಗಿದ್ದು, ನಂತರ ಮೃತರ ಸ್ವಗ್ರಾಮ ಚಾಮರಾಜನಗರ ತಾಲೂಕು ಹೆಗ್ಗವಾಡಿಗೆ ತರಲಾಗುವುದು.
ಶನಿವಾರ ಬೆಳಿಗ್ಗೆ 11.30ಕ್ಕೆ ಅಂತ್ಯಕ್ರಿಯೆಯನ್ನು, ಅವರ ತೋಟದಲ್ಲಿ ಆರ್ ಧ್ರುವ ನಾರಾಯಣ್ ರ ಸಮಾಧಿ ಪಕ್ಕದಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.