ಮತ್ತೆ ಕಾಂಗ್ರೆಸ್ ಸೇರ್ಪಡೆಯಾದ ಮಾಜಿ ಸಂಸದ ಮುದ್ದಹನುಮೇ ಗೌಡ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಮಾಜಿ ಸಂಸದ ಮುದ್ದಹನುಮೇಗೌಡ ಅವರು ಬಿಜೆಪಿ ತೊರೆದು ಮತ್ತೆ ವಾಪಸ್​ ಕಾಂಗ್ರೆಸ್‌ಗೆ ಸೇರ್ಪಡೆಯಾದರು. ಬೆಂಗಳೂರಿನಲ್ಲಿ ಗುರುವಾರ ಕೆಪಿಸಿಸಿ ಕಚೇರಿಯ ಭಾರತ್ ಜೋಡೋ ಭವನದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ , ಕಾರ್ಯಾಧ್ಯಕ್ಷರಾದ ಸಲೀಂ ಅಹಮ್ಮದ್, ಬಿ.ಎನ್.ಚಂದ್ರಪ್ಪ ಹಾಗೂ ತುಮಕೂರು ಜಿಲ್ಲೆಯ ನಾಯಕರು, ಸಚಿವರಾದ ಡಾ.ಜಿ.ಪರಮೇಶ್ವರ್‌, ಕೆ.ಎನ್‌.ರಾಜಣ್ಣ ಸಮ್ಮುಖದಲ್ಲಿ ಸೇರ್ಪಡೆಗೊಂಡರು.

ಶಾಸಕರಾದ ಗುಬ್ಬಿ ಶ್ರೀನಿವಾಸ್‌, ಡಾ.ರಂಗನಾಥ್‌, ಕೆ.ವೈ.ನಂಜೇಗೌಡ ಸಹ ಉಪಸ್ಥಿತರಿದ್ದರು. ಶಾಸಕರಾದ ಟಿ.ಬಿ.ಜಯಚಂದ್ರ, ಕೆ.ಷಡಕ್ಷರಿ ಹಾಗೂ ಮಾಜಿ ಶಾಸಕ ಡಿ.ಸಿ.ಗೌರಿಶಂಕರ್ ಅವರು ಕಾರ್ಯಕ್ರಮದಿಂದ ದೂರ ಉಳಿದು ಪರೋಕ್ಷವಾಗಿ ಮುದ್ದಹನುಮೇ ಗೌಡರ ಸೇರ್ಪಡೆಗೆ ಅಸಮಾಧಾನ ಹೊರಹಾಕಿದ್ದಾರೆ.

ಮುದ್ದಹನುಮೇಗೌಡ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡ ಬಳಿಕ ಮಾತನಾಡಿದ ಸಚಿವ ಕೆ.ಎನ್.​​ ರಾಜಣ್ಣ, ಮುದ್ದಹನುಮೇ ಗೌಡರ ಬಗ್ಗೆ ನನಗೆ ವೈಯಕ್ತಿಕವಾಗಿ ಕೋಪ ಇದೆ. ಆ ಪಕ್ಷ ಸರಿಯಿಲ್ಲ ಎಂದು ನಾನು, ಪರಮೇಶ್ವರ್ ಗಿಣಿಗೆ ಹೇಳಿದಂತೆ ಹೇಳಿದ್ದೆವು. ಕಾಂಗ್ರೆಸ್‌ ಪಕ್ಷದಿಂದ ಜೆಡಿಎಸ್‌ಗೆ, ಜೆಡಿಎಸ್‌ ಪಕ್ಷದಿಂದ ಕಾಂಗ್ರೆಸ್‌ಗೆ. ಮತ್ತೆ ಬಿಜೆಪಿಗೆ ಹೋಗಿ ತಪ್ಪಿನ‌ ಅರಿವಾಗಿ ಪಕ್ಷಕ್ಕೆ ವಾಪಸ್ ಬಂದಿದ್ದಾರೆ. ಮತ್ತೆ ಯಾವ ಪಕ್ಷಕ್ಕೂ ಹೋಗಬಾರದು ಎಂದು ಷರತ್ತು ಹಾಕಿದ್ದೇವೆ ಎಂದರು.

ತಪ್ಪಿನ ಅರಿವು ಆಗಿದೆ ಎಂದ ಮುದ್ದಹನುಮೇಗೌಡ
ಕಾಂಗ್ರೆಸ್ ಸೇರ್ಪಡೆಯಾದ ಬಳಿಕ ಮಾತನಾಡಿದ ಮುದ್ದಹನುಮೇಗೌಡ, ನಾನು ಪಕ್ಷಾಂತರ ಮಾಡಿದ್ದಕ್ಕೆ ನನಗೆ ಮುಜುಗರ ಆಗಿದೆ. ಚುನಾವಣೆಗೆ ಸ್ಪರ್ಧೆ ಮಾಡಲು ಪಕ್ಷಾಂತರ ಮಾಡಿದ್ದೆ. ತಪ್ಪಿನ ಅರಿವು ಆಗಿ, ಯಾವ ಪಕ್ಷ ರಾಜಕೀಯ ಜೀವ ಕೊಟ್ಟಿದೆ ಆ ಪಕ್ಷದಲ್ಲಿ ಸೇವೆ ಸಲ್ಲಿಸಬೇಕು ಎಂದು ಕಾಂಗ್ರೆಸ್ ಗೆ ಬಂದಿದ್ದೇನೆ. ಸಾರ್ವಜನಿಕ ಬದುಕಿನಲ್ಲಿ ಸ್ವಲ್ಪ ಹೆಸರು ಮಾಡಿ ಉಳಿಸಿಕೊಳ್ಳಬೇಕು. ನಾನು ಕಾಂಗ್ರೆಸ್ ಪಕ್ಷ ಅಭಾರಿಯಾಗಿದ್ದೇನೆ. ಕಾಂಗ್ರೆಸ್ ಪಕ್ಷದಲ್ಲಿ ನನ್ನ ಮುಂದಿನ ಸಾರ್ವಜನಿಕ ಬದುಕು ನಡೆಸುತ್ತೇನೆ ಎಂದು ಹೇಳಿದರು.

ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಕಾಂಗ್ರೆಸ್​ನತ್ತ ಮುಖಮಾಡಿದ್ದಾರೆ
2019ರ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್, ಕಾಂಗ್ರೆಸ್ ಮೈತ್ರಿಯಾಗಿದ್ದರಿಂದ ತುಮಕೂರು ಕ್ಷೇತ್ರ ಜೆಡಿಎಸ್​ ಪಾಲಾಗಿತ್ತು. ಮಾಜಿ ಪ್ರಧಾನಿ ಜೆಡಿಎಸ್​ ವರಿಷ್ಠ ಎಚ್​ಡಿ ದೇವೇಗೌಡ ಅವರು ಕಣಕ್ಕಿಳಿದಿದ್ದರು. ಇದರಿಂದ ಹಾಲಿ ಸಂಸದರಾಗಿದ್ದ ಮುದ್ದಹನುಮೇಗೌಡ ಅಸಮಾಧಾನಗೊಂಡು ಬಿಜೆಪಿ ಸೇರ್ಪಡೆಯಾಗಿದ್ದರು. ಆದ್ರೆ, 2023ರ ವಿಧಾನಸಭಾ ಚುನಾವಣೆ ವೇಳೆ ಬಿಜೆಪಿಯಲ್ಲೂ ಟಿಕೆಟ್ ವಂಚಿತರಾಗಿದ್ದರು. ಹೀಗಾಗಿ ಈ ಬಾರಿ ತುಮಕೂರು ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಕಾಂಗ್ರೆಸ್​ನತ್ತ ಮುಖಮಾಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!