ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ ನಟಿ ಐಶ್ವರ್ಯ ರೈ ಬಚ್ಚನ್ ಅವರ ಬಗ್ಗೆ ನಾಲಿಗೆ ಹರಿಬಿಟ್ಟಿದ್ದ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಅಬ್ದುಲ್ ರಜಾಕ್ ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದಾರೆ.
ರಜಾಕ್ ಹೇಳಿಕೆ ಬಗ್ಗೆ ಕ್ರಿಕೆಟಿಗರು ಸೇರಿದಂತೆ ಎಲ್ಲೆಡೆ ವ್ಯಾಪಕ ಟೀಕೆ ವ್ಯಕ್ತವಾದ ನಂತರ ಮಂಗಳವಾರದ ತಡರಾತ್ರಿ ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, 27 ಸೆಕೆಂಡುಗಳ ವೀಡಿಯೊದಲ್ಲಿ, ರಜಾಕ್ ಕ್ರಿಕೆಟ್ ತರಬೇತಿಯ ಬಗ್ಗೆ ನಡೆದ ಸುದ್ದಿಗೋಷ್ಠಿಯಲ್ಲಿ ‘ಉದ್ದೇಶಪೂರ್ವಕವಲ್ಲದ’ ಬಾಯ್ತಪ್ಪಿ ಹೇಳಿಕೆ ನೀಡಿದ್ದೇನೆ. ಇದಕ್ಕೆ ಐಶ್ವರ್ಯ ರೈ ಅವರ ಬಳಿ ವೈಯಕ್ತಿಕವಾಗಿ ಕ್ಷಮೆ ಕೇಳುತ್ತಿರುವುದಾಗಿ ತಿಳಿಸಿದ್ದಾರೆ.
ಬಾಯ್ತಪ್ಪಿ, ಐಶ್ವರ್ಯಾ ರೈ ಹೆಸರನ್ನು ತೆಗೆದುಕೊಂಡೆ. ನಾನು ಕ್ಷಮೆಯಾಚಿಸುತ್ತೇನೆ. ಯಾರನ್ನೂ ನೋಯಿಸುವ ಉದ್ದೇಶ ನನಗಿರಲಿಲ್ಲ. ನಾನು ಬೇರೆ ಉದಾಹರಣೆಯನ್ನು ನೀಡಬೇಕಾಗಿತ್ತು, ಆದರೆ ತಪ್ಪಾಗಿ ಅವರ ಹೆಸರನ್ನು ಬಳಸಿದ್ದೇನೆ,’ ಎಂದು ರಜಾಕ್ ಅವರು ಯೂಟ್ಯೂಬ್‌ನ ಕ್ಯಾಪಿಟಲ್ ಟಿವಿ ಪೋಸ್ಟ್ ಮಾಡಿದ ವೀಡಿಯೊದಲ್ಲಿ ಹೇಳಿದ್ದಾರೆ.
ವಿಶ್ವಕಪ್ ಫೈನಲ್ ನಲ್ಲಿ ಭಾರತಕ್ಕೆ ಎದುರಾಳಿ ಯಾರಾಗಬೇಕು? ಪಾಕಿಸ್ತಾನ ಕ್ರಿಕೆಟ್ ತಂಡದ ಪ್ರದರ್ಶನದ ಹೇಗಿದೆ ಎಂದು ಮಾತನಾಡುವ ಸಂದರ್ಭದಲ್ಲಿ, ‘ನಾನು ಐಶ್ವರ್ಯ ರೈ ಅವರನ್ನು ಮದುವೆಯಾಗಿ, ನಮಗೆ ಸುಂದರವಾದ ಮಕ್ಕಳಾಗುತ್ತವೆ ಎಂದು ನೀವು ಭಾವಿಸಿದರೆ, ಅದು ಸಾಧ್ಯವಾಗದ ಮಾತು. ಹೀಗಾಗಿ ಸರಿಯಾದ ಉದ್ದೇಶ ಇಟ್ಟುಕೊಳ್ಳಬೇಕು. ಮೊದಲು ನಿಮ್ಮ ಉದ್ದೇಶಗಳನ್ನು ಸರಿಪಡಿಸಿಕೊಳ್ಳಬೇಕು’ ಎಂದು ರಜಾಕ್ ಹೇಳಿದ್ದರು.
ರಜಾಕ್ ಹೇಳಿಕೆಗೆ ಪಾಕಿಸ್ತಾನದ ಮಾಜಿ ಆಟಗಾರ ಶೋಯೆಬ್ ಅಖ್ತರ್ ಆಕ್ರೋಶ ವ್ಯಕ್ತಪಡಿಸಿದ್ದರು. ‘ರಝಾಕ್ ಮಾಡಿದ ಅನುಚಿತ ಜೋಕ್ ಹೋಲಿಕೆಯನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. ಯಾವ ಹೆಣ್ಣಿಗೂ ಈ ರೀತಿ ಅಗೌರವ ತೋರಬಾರದು. ಅವರ ಪಕ್ಕದಲ್ಲಿ ಕುಳಿತಿರುವ ಜನರು ಚಪ್ಪಾಳೆ ತಟ್ಟುವ ಬದಲು ತಕ್ಷಣವೇ ಧ್ವನಿ ಎತ್ತಬೇಕಿತ್ತು’ ಎಂದು ಅಖ್ತರ್ ಎಕ್ಸ್‌ನಲ್ಲಿ ಹೇಳಿದ್ದರು.