ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂದು ವಾಂಖೇಡೆ ಮೈದಾನದಲ್ಲಿ ಅಕ್ಷರಶ ರನ್ ನ ಮಳೆಯೇ ಸುರಿದಿದೆ. ವಿರಾಟ್ ಕೊಹ್ಲಿ ಹಾಗೂ ಶ್ರೇಯಸ್ ಅಯ್ಯರ್ ಸ್ಪೋಟಕ ಶತಕ ಹಾಗೂ ಶುಭ್‌ಮನ್ ಗಿಲ್ ಆಕರ್ಷಕ ಅರ್ಧಶತಕದ ನೆರವಿನಿಂದ ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ 397 ರನ್ ಬಾರಿಸಿದ್ದು, ನ್ಯೂಜಿಲೆಂಡ್ ತಂಡಕ್ಕೆ ಕಠಿಣ ಗುರಿ ನೀಡಿದೆ.
ಆರಂಭದಿಂದಲೇ ರೋಹಿತ್ ಶರ್ಮಾ ಹಾಗೂ ಶುಭ್‌ಮನ್ ಗಿಲ್, ಕಿವೀಸ್ ಬೌಲರ್‌ಗಳ ಮೇಲೆ ಸವಾರಿ ಮಾಡಿದರು. ರೋಹಿತ್ ಶರ್ಮಾ ಕೇವಲ 29 ಎಸೆತಗಳನ್ನು ಎದುರಿಸಿ 4 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ 47 ರನ್ ಸಿಡಿಸಿ ಟಿಮ್ ಸೌಥಿಗೆ ವಿಕೆಟ್ ಒಪ್ಪಿಸಿದರು.
ರೋಹಿತ್ ವಿಕೆಟ್ ಪತನದ ಬಳಿಕ ಗಿಲ್ ಜತೆಯಾದ ವಿರಾಟ್ ಕೊಹ್ಲಿ ರನ್ ವೇಗಕ್ಕೆ ಚುರುಕು ಮುಟ್ಟಿಸಿದರು. ಅದರಲ್ಲೂ ಒಂದು ತುದಿಯಲ್ಲಿ ಶುಭ್‌ಮನ್ ಗಿಲ್ ಸ್ಪೋಟಕ ಆಟವಾಡಿದರೆ, ಮತ್ತೊಂದು ತುದಿಯಲ್ಲಿ ಕೊಹ್ಲಿ ಉತ್ತಮ ಸಾಥ್ ನೀಡಿದರು. ಎರಡನೇ ವಿಕೆಟ್‌ಗೆ ಈ ಜೋಡಿ 86 ಎಸೆತಗಳನ್ನು ಎದುರಿಸಿ 93 ರನ್‌ಗಳ ಜತೆಯಾಟವಾಡಿತು. ಕೇವಲ 65 ಎಸೆತಗಳನ್ನು ಎದುರಿಸಿ 8 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 79 ರನ್ ಬಾರಿಸಿ ಶತಕದತ್ತ ಮುನ್ನುಗ್ಗುತ್ತಿದ್ದ ಗಿಲ್ ಸ್ನಾಯು ಸೆಳೆತಕ್ಕೆ ಒಳಗಾಗಿ ರಿಟೈರ್ಡ್ ಹರ್ಟ್ ಪಡೆದು ಮೈದಾನ ತೊರೆದರು.
ವಿಶ್ವಕಪ್ ಟೂರ್ನಿಯಲ್ಲಿ ಭರ್ಜರಿ ಫಾರ್ಮ್‌ನಲ್ಲಿರುವ ವಿರಾಟ್ ಕೊಹ್ಲಿ, ಮತ್ತೊಂದು ಆಕರ್ಷಕ ಶತಕ ಸಿಡಿಸುವ ಮೂಲಕ ಸೆಮಿಫೈನಲ್ ಪಂದ್ಯವನ್ನು ಸ್ಮರಣೀಯವಾಗಿಸಿಕೊಂಡರು. ಈ ಮೂಲಕ ಏಕದಿನ ಕ್ರಿಕೆಟ್‌ನಲ್ಲಿ 50 ಶತಕ ಸಿಡಿಸಿದ ಜಗತ್ತಿನ ಮೊದಲ ಕ್ರಿಕೆಟಿಗ ಎನ್ನುವ ಹಿರಿಮೆಗೂ ಪಾತ್ರರಾದರು. ಈ ಮೊದಲು ಕ್ರಿಕೆಟ್ ದಂತಕಥೆ ಸಚಿನ್ ತೆಂಡುಲ್ಕರ್ ಏಕದಿನ ಕ್ರಿಕೆಟ್‌ನಲ್ಲಿ 49 ಏಕದಿನ ಶತಕ ಸಿಡಿಸಿದ್ದರು. ಅಂತಿಮವಾಗಿ ವಿರಾಟ್ ಕೊಹ್ಲಿ 113 ಎಸೆತಗಳನ್ನು ಎದುರಿಸಿ 9 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 117 ರನ್ ಬಾರಿಸಿ ಟಿಮ್ ಸೌಥಿಗೆ ವಿಕೆಟ್ ಒಪ್ಪಿಸಿದರು.
ಇನ್ನು ವಿರಾಟ್ ಕೊಹ್ಲಿ ಜತೆ ಮೂರನೇ ವಿಕೆಟ್‌ಗೆ ಶತಕದ ಜತೆಯಾಟ ನಿಭಾಯಿಸಿದ ಲೋಕಲ್ ಹೀರೋ ಶ್ರೇಯಸ್ ಅಯ್ಯರ್, ಕಿವೀಸ್ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದರು.ಮತ್ತೊಂದು ಸ್ಪೋಟಕ ಶತಕ ಸಿಡಿಸಿ ಮಿಂಚಿದರು. ಶ್ರೇಯಸ್ ಅಯ್ಯರ್ ಕೇವಲ 70 ಎಸೆತಗಳನ್ನು ಎದುರಿಸಿ 4 ಬೌಂಡರಿ ಹಾಗೂ 8 ಸಿಕ್ಸರ್ ಸಹಿತ 105 ರನ್ ಬಾರಿಸಿ ಟ್ರೆಂಟ್ ಬೌಲ್ಟ್‌ಗೆ ಬಲಿಯಾದರು
ಬಳಿಕ ರಾಹುಲ್ ಕೊನೆಯ ಕ್ಷಣದಲ್ಲಿ ಅದ್ಭುತ ಬ್ಯಾಟಿಂಗ್ ನಡೆಸಿ ಟೀಮ್ ಇಂಡಿಯಾ ರನ್ ಅನ್ನು ಮತ್ತಷ್ಟು ಹೆಚ್ಚಿಸಿದರು. ಅಂತಿಮವಾಗಿ ಇಂಡಿಯಾ 50 ಓವರ್ ಗೆ 4 ವಿಕೆಟ್ ನಷ್ಟಕ್ಕೆ 397 ಬಾರಿಸಿ ಕಿವೀಸ್ ಗೆಲುವಿಗೆ ಕಠಿಣ ಗುರಿ ನೀಡಿದೆ.