ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಧರ್ಮಪತ್ನಿ ಚೆನ್ನಮ್ಮ ಅವರ ಉತ್ತರ ಕ್ರಿಯಾದಿ ಕಾರ್ಯ ನೆರವೇರಲಿದೆ.
ಈ ಕಾರ್ಯಕ್ಕೆ ಒಂದು ಲಕ್ಷಕ್ಕೂ ಅಧಿಕ ಜನರಿಗೆ ಅನ್ನಸಂತರ್ಪಣೆ ವ್ಯವಸ್ಥೆ ಮಾಡಲಾಗಿದೆ. ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಮಾವಿನಕೆರೆ ಬೆಟ್ಟದ ತಪ್ಪಲಿನಲ್ಲಿ ತಿಥಿ ಕಾರ್ಯ ನಡೆಯಲಿದೆ. ಕುಟುಂಬಸ್ಥರು 11ನೇ ದಿನದ ಕಾರ್ಯಕ್ಕೆ ತಯಾರಿ ಮಾಡಿಕೊಂಡಿದ್ದಾರೆ.
ಒಕ್ಕಲಿಗ ಸಂಪ್ರದಾಯದ ಮುಳ್ಳುಗೌಡ ಪರಂಪರೆಯಂತೆ ಉತ್ತರ ಕ್ರಿಯಾದಿ ಕಾರ್ಯ ನಡೆಯಲಿದ್ದು, ಇಂದು ಬೆಳಿಗ್ಗೆ 10-30ಕ್ಕೆ ಕುಟುಂಬ ಸದಸ್ಯರಿಂದ ಪೂಜೆ ನೆರವೇರಲಿದೆ. ಬಳಿಕ ಬರುವ ಅಭಿಮಾನಿಗಳು, ಬಂಧುಗಳಿಗೆ ಊಟದ ವ್ಯವಸ್ಥೆ ಇರಲಿದೆ. ಸಂಪೂರ್ಣ ಸಸ್ಯಹಾರಿ ಊಟದ ವ್ಯವಸ್ಥೆ ಮಾಡಿ, ಕಾರ್ಯಕ್ಕೆ ಸಿದ್ದತೆ ಮಾಡಲಾಗಿದೆ. ಹೋಳಿಗೆ, ಲಡ್ಡು, ಮೈಸೂರು ಪಾಕ್ ಸೇರಿ ಆರು ಬಗೆಯ ಸಿಹಿ ತಿಂಡಿ ಇರಲಿದೆ. ಸುಮಾರು 2 ಸಾವಿರ ಬಾಣಸಿಗರಿಂದ ಭೋಜನ ಸಿದ್ಧತೆ ಮಾಡಿಕೊಂಡಿದ್ದಾರೆ.
ಕಾರ್ಯದ ವೇಳೆ ಒಂದು ಲಕ್ಷಕ್ಕೂ ಅಧಿಕ ಜನರಿಗೆ ಅನ್ನಸಂತರ್ಪಣೆ ವ್ಯವಸ್ಥೆ ಮಾಡಿಕೊಳ್ಳಲಾಗಿದ್ದು, ಏಕಕಾಲಕ್ಕೆ 22 ಸಾವಿರ ಜನರು ಕುಳಿತು ಊಟ ಮಾಡಲು ವ್ಯವಸ್ಥೆ ಮಾಡಲಾಗಿದೆ. ತಲಾ 1,800 ಜನರು ಏಕ ಕಾಲದಲ್ಲಿ ಊಟ ಮಾಡಲು 16 ಕೌಂಟರ್ ನಿರ್ಮಾಣ ಮಾಡಲಾಗಿದೆ. ಮಹಿಳೆಯರಿಗೆ 3 ವಿಐಪಿ, ವಿವಿಐಪಿಗಳಿಗೆ 2 ಸೇರಿ 16 ಕೌಂಟರ್ ನಿರ್ಮಾಣ ಮಾಡಿದ್ದಾರೆ.



