ಹೊಸದಿಗಂತ ಡಿಜಿಟಲ್ ಡೆಸ್ಕ್:
ಸದಾ ಮುಗುಳುನಗುತ್ತಾ, ಅಭಿಮಾನಿಗಳೊಂದಿಗೆ ಪ್ರೀತಿಯಿಂದ ನಡೆದುಕೊಳ್ಳುವ ನಟಿ ರಶ್ಮಿಕಾ ಮಂದಣ್ಣ, ತಮ್ಮ ನಡವಳಿಕೆಯನ್ನು ‘ಓವರ್ ಆಕ್ಟಿಂಗ್’ ಹಾಗೂ ‘ಕ್ರಿಂಜ್’ ಎಂದು ಕರೆಯುವ ಟ್ರೋಲಿಗರಿಗೆ ಖಡಕ್ ಉತ್ತರ ನೀಡಿದ್ದಾರೆ. “ಜನರು ಏನೇ ಅಂದುಕೊಂಡರೂ ನಾನು ನನ್ನ ಪ್ರೀತಿಯ ಸ್ವಭಾವವನ್ನು ಬದಲಾಯಿಸಿಕೊಳ್ಳುವುದಿಲ್ಲ” ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ತಮ್ಮ ಮುಂಬರುವ ‘ರಣಬಾಲಿ’ ಚಿತ್ರದ ಪ್ರಚಾರದ ವೇಳೆ, ಯೂಟ್ಯೂಬರ್ ಕೀರ್ತಿಕಾ ಗೋವಿಂದಸಾಮಿ ಅವರೊಂದಿಗಿನ ಸಂವಾದದಲ್ಲಿ ಮಾತನಾಡಿದ ರಶ್ಮಿಕಾ, ಸೋಷಿಯಲ್ ಮೀಡಿಯಾ ನಕಾರಾತ್ಮಕತೆಯ ಬಗ್ಗೆ ಮನಬಿಚ್ಚಿ ಮಾತನಾಡಿದರು.
ಪ್ರೀತಿ ನನ್ನ ದೌರ್ಬಲ್ಯವಲ್ಲ
ತಮ್ಮ ಮೇಲಿನ ಟ್ರೋಲ್ಗಳ ಬಗ್ಗೆ ಮಾತನಾಡಿದ ರಶ್ಮಿಕಾ, “ನನ್ನ ಪ್ರಕಾರ ದಯೆ ಮತ್ತು ಪ್ರೀತಿ ತೋರುವುದು ಎಂದಿಗೂ ದೌರ್ಬಲ್ಯವಲ್ಲ. ಇಂದು ಸಮಾಜದಲ್ಲಿ ನಕಾರಾತ್ಮಕ ಭಾವನೆಗಳು ಹೆಚ್ಚಾಗಿವೆ, ಇಂತಹ ಸಮಯದಲ್ಲಿ ಸಕಾರಾತ್ಮಕತೆ ಹರಡುವುದು ನನ್ನ ಆದ್ಯತೆ. ನನ್ನ ಈ ಪ್ರೀತಿಯ ನಡವಳಿಕೆಯನ್ನು ಕೆಲವರು ‘ಓವರ್ ಆಕ್ಟಿಂಗ್’ ಎಂದರೆ ನನಗೇನೂ ಬೇಸರವಿಲ್ಲ. ಎಲ್ಲರಿಗೂ ಪ್ರತಿಯೊಬ್ಬರೂ ಇಷ್ಟವಾಗಬೇಕಿಲ್ಲ. ನಾನು ಫೇಕ್ ಆಗಿ ಇರಲು ಸಾಧ್ಯವಿಲ್ಲ. ನನ್ನ ಈ ನೈಜ ಸ್ವಭಾವವೇ ನನ್ನನ್ನು, ನನ್ನ ಕುಟುಂಬವನ್ನು ಹಾಗೂ ನನ್ನ ಹಿತೈಷಿಗಳನ್ನು ಸಂತೋಷವಾಗಿಟ್ಟಿದೆ” ಎಂದಿದ್ದಾರೆ.

ಟ್ರೋಲ್ಸ್ಗಳೆಲ್ಲವೂ ಪ್ಲಾನ್ಡ್ ಗಿಮಿಕ್
ರಶ್ಮಿಕಾ ಅವರ ಮಾತಿಗೆ ಸಾಥ್ ನೀಡಿದ ಅವರ ಪತಿ ಹಾಗೂ ನಟ ವಿಜಯ್ ದೇವರಕೊಂಡ, ಸೋಷಿಯಲ್ ಮೀಡಿಯಾ ಟ್ರೋಲಿಗರ ಮುಖವಾಡವನ್ನು ಬಿಚ್ಚಿಟ್ಟಿದ್ದಾರೆ. “ರಾಜಕಾರಣಿಗಳು ಮತ್ತು ನಟರ ವಿರುದ್ಧ ನಡೆಯುವ ಶೇಕಡಾ 80ರಷ್ಟು ಟ್ರೋಲ್ಗಳು ಯೋಜಿತವಾಗಿ ಸೃಷ್ಟಿಸಲ್ಪಟ್ಟವು. ಒಬ್ಬ ವ್ಯಕ್ತಿಯನ್ನು ನೇರವಾಗಿ ಭೇಟಿಯಾಗದೇ ಅವರ ಬಗ್ಗೆ ತೀವ್ರ ದ್ವೇಷ ಕಾರುವುದು ಸಾಧ್ಯವಿಲ್ಲ. ಸೋಷಿಯಲ್ ಮೀಡಿಯಾದಲ್ಲಿ ಒಬ್ಬನೇ ವ್ಯಕ್ತಿ 15 ನಕಲಿ ಖಾತೆಗಳನ್ನು ತೆರೆದು ಸುಳ್ಳು ಅಭಿಪ್ರಾಯ ರೂಪಿಸುವ ಕೆಲಸ ಮಾಡುತ್ತಿದೆ. ಇಂತಹ ನಕಲಿ ಮಾತುಗಳಿಗೆ ಹೆದರಿ ಯಾರೂ ತಮ್ಮ ನಿಜವಾದ ವ್ಯಕ್ತಿತ್ವವನ್ನು ಬದಲಾಯಿಸಿಕೊಳ್ಳಬಾರದು” ಎಂದು ಖಡಕ್ಕಾಗಿ ಹೇಳಿದ್ದಾರೆ.
ಜನರ ಪ್ರೀತಿಯೇ ನಮ್ಮ ಶಕ್ತಿ
ಸಾಮಾಜಿಕ ಜಾಲತಾಣಗಳಲ್ಲಿ ರಶ್ಮಿಕಾ ಅವರ ಹಾವಭಾವಗಳನ್ನೂ ಟ್ರೋಲ್ ಮಾಡುವುದು ಹೊಸದೇನಲ್ಲ. ಆದರೆ, ಟ್ರೋಲ್ಗಳಿಗಿಂತ ತಮ್ಮ ಮೇಲಿರುವ ಕೋಟ್ಯಂತರ ಅಭಿಮಾನಿಗಳ ಪ್ರೀತಿಯೇ ತಮಗೆ ಮುಖ್ಯ ಎಂದು ಈ ಜೋಡಿ ನಿರೂಪಿಸಿದೆ. ರಶ್ಮಿಕಾ ಅವರ ಈ ದಿಟ್ಟ ನಿಲುವು ಮತ್ತು ಪಾಸಿಟಿವ್ ಆಲೋಚನೆಗೆ ಅವರ ಅಭಿಮಾನಿಗಳಿಂದ ಈಗ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.



