ಫೋರ್ಟಿಸ್‌ ಆಸ್ಪತ್ರೆಯಲ್ಲಿ ಚೇತರಿಸಿಕೊಂಡ 5 ರೂಪಾಯಿ ಡಾಕ್ಟರ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹೃದಯಾಘಾತಕ್ಕೆ‌ ಒಳಗಾಗಿ ಫೋರ್ಟಿಸ್ ಆಸ್ಪತ್ರೆಗೆ ದಾಖಲಾಗಿದ್ದ ಮಂಡ್ಯದ 5 ರೂ. ವೈದ್ಯರೆಂದು ಖ್ಯಾತಿ ಹೊಂದಿರುವ ಡಾ. ಶಂಕರೇಗೌಡ ಅವರು ಸಂಪೂರ್ಣ ಚೇತರಿಸಿಕೊಂಡಿದ್ದಾರೆ.
ಈ ಬಗ್ಗೆ ಶುಕ್ರವಾರ ಫೋರ್ಟಿಸ್‌ ಆಸ್ಪತ್ರೆಯಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಾ. ಶಂಕರೇಗೌಡ, ಒಂದು ತಿಂಗಳ ಹಿಂದೆ ಹೃದಯದಲ್ಲಿ ರಕ್ತದ ನಾಳಗಳು ಬ್ಲಾಕ್‌ ಆಗಿದ್ದ ಕಾರಣ ಹೃದಯಾಘತ ಸಂಭವಿಸಿತ್ತು. ಕೂಡಲೇ ಮೈಸೂರಿನಲ್ಲಿರುವ ಆಸ್ಪತ್ರೆಗೆ ದಾಖಲಾದೆ. ಆದರೆ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಫೋರ್ಟಿಸ್‌ ಆಸ್ಪತ್ರೆಗೆ ವರ್ಗಾವಣೆ ಮಾಡಿದರು. ಇಲ್ಲಿನ ಚಿಕಿತ್ಸಾ ವಿಧಾನದಿಂದ ನನ್ನ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ. ಡಾ. ವಿವೇಕ್ ಜವಳಿ ಅವರ ತಂಡ ವಿಶೇಷ ಕಾಳಜಿ ವಹಿಸಿ ನನಗೆ ಚಿಕಿತ್ಸೆ‌ ನೀಡಿದ್ದಾರೆ ಎಂದು ಹೇಳಿದರು.

ನನ್ನ ಆರೋಗ್ಯದ ಬಗ್ಗೆ ಕಾಳಜಿ ವಹಿಸಿದ ಇಲ್ಲಿನ ವೈದ್ಯರಿಗೆ ಧನ್ಯವಾದಗಳು. ಪ್ರತಿಯೊಬ್ಬರು ಹೆಚ್ಚಿನ ಕಾಳಜಿಯಿಂದ ಚಿಕಿತ್ಸೆ ನೀಡಿದ್ದಾರೆ. ಜೊತೆಗೆ ನನ್ನ ಆರೋಗ್ಯದ ಸುಧಾರಣೆಗೆ ಕಾಳಜಿ ವಹಿಸಿದ ಪ್ರತಿಯೊಬ್ಬರಿಗೂ ನಾನು ಋಣಿ. ಸದ್ಯ ನಾನು ಸಂಪೂರ್ಣವಾಗಿ ಗುಣವಾಗಿದ್ದು , ವೈದ್ಯರ ಸಲಹೆ ಮೇರೆಗೆ 6 ವಾರಗಳು ವಿಶ್ರಾಂತಿ ಪಡೆದು ಬಳಿಕ, ಹಿಂದಿನಂತೆ 5 ರೂಪಾಯಿ ಚಿಕಿತ್ಸೆ ಮುಂದುವರೆಸುವೆ ಎಂದು ತಿಳಿಸಿದ್ದಾರೆ.

ಹೃದಯ ತಜ್ಞ ಡಾ. ವಿವೇಕ್‌ ಜವಳಿ ಮಾತನಾಡಿ, 67 ವರ್ಷ ವಯಸ್ಸಿನ ಡಾ. ಶಂಕರೇಗೌಡ ಅವರು ಮಂಡ್ಯದಲ್ಲಿ ತೀವ್ರ ಹೃದಯಾಘಾತಕ್ಕೆ ಒಳಗಾಗಿದ್ದರು, ಇದರಿಂದ ಅವರ ಹೃದಯವು ಹೆಚ್ಚಿನ ಹಾನಿಗೆ ಒಳಗಾಗಿತ್ತು. ಅದೃಷ್ಟವಶಾತ್‌ ಅವರಿಗೆ ಸೂಕ್ತ ಸಮಯದಲ್ಲಿ ಸೂಕ್ತ ಚಿಕಿತ್ಸೆ ನೀಡುವ ಮೂಲಕ ಅವರನ್ನು ಪ್ರಾಣಾಪಾಯದಿಂದ ರಕ್ಷಿಸಲಾಗಿದೆ. ಶಂಕರೇಗೌಡ ಅವರು ಇದೀಗ ಚೇತರಿಸಿಕೊಂಡಿದ್ದಾರೆ. 6 ವಾರಗಳ ವಿಶ್ರಾಂತಿ ಅವಶ್ಯಕತೆ ಇದೆ ಎಂದು ವಿವರಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!