ಆಂಧ್ರಪ್ರದೇಶ ರಚನೆಗಾಗಿ ಪ್ರಾಣ ತ್ಯಜಿಸಿದ ಇವರ ಬಗ್ಗೆ ಗಾಂಧಿ ಹೇಳಿದ್ದು ಕೇಳಿದರೆ ಅಚ್ಚರಿ ಪಡುತ್ತೀರಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ (ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ವಿಶೇಷ)
ʼಆತನಂತಹ ಇನ್ನು ಕೆಲವು ಧೀಮಂತ ವ್ಯಕ್ತಿಗಳು ನನಗೆ ಜೊತೆಯಾಗಿದ್ದರೆ ಭಾರತ ಬಹಳ ಹಿಂದೆಯೇ ಸ್ವಾತಂತ್ರ್ಯ ಗಳಿಸಿರುತ್ತಿತ್ತು”, ಇದು ಆಂಧ್ರಪ್ರದೇಶದ ರಚನೆಗಾಗಿ ತನ್ನ ಪ್ರಾಣವನ್ನು ತ್ಯಾಗ ಮಾಡಿದ ಸ್ವಾತಂತ್ರ್ಯ ಹೋರಾಟಗಾರ ಪೊಟ್ಟಿ ಶ್ರೀರಾಮುಲು ಅವರ ಬಗ್ಗೆ ಗಾಂಧೀಜಿ ಆಡಿದ್ದ ಮಾತುಗಳು.
ಗುರವಯ್ಯ ಮತ್ತು ಮಹಾಲಕ್ಷ್ಮಮ್ಮ ದಂಪತಿಗಳ ಪುತ್ರ ಪೊಟ್ಟಿ ಶ್ರೀರಾಮುಲು 1901 ಪಾದಮಟಪಲ್ಲಿಯಲ್ಲಿ ಜನಿಸಿದರು. ಇದು ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯೊಳಗಿನ ಒಂದು ಪ್ರದೇಶವಾಗಿತ್ತು. ಶ್ರೀರಾಮುಲು ಕುಟುಂಬಕ್ಕೆ ಒಳ್ಳೆಯ ಉದ್ಯೋಗವಿತ್ತು. ತಕ್ಕಮಟ್ಟಿಗೆ ಶ್ರೀಮಂತಿಕೆಯಿತ್ತು. ಆದರೆ ಶ್ರೀರಾಮುಲು ತುಳಿದಿದ್ದು ಮಾತ್ರ ಹೋರಾಟದ ಹಾದಿ. ಅವರು ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಆಳವಾಗಿ ತೊಡಗಿಸಿಕೊಂಡಿದ್ದರು. 1928 ಮತ್ತು 1930 ರ ನಡುವಿನ ಇಸವಿಯಲ್ಲಿ ಶ್ರೀರಾಮುಲು ವೈಯಕ್ತಿಕ ಬದುಕಿನಲ್ಲಿ ದುರಂತಗಳ ಬಿರುಗಾಳಿಯೇ ಎದ್ದಿತು. ಅವರು ಹೆಂಡತಿ, ಮಗು ಮತ್ತು ತಾಯಿಯನ್ನು ಒಟ್ಟೊಟ್ಟಿಗೆ ಕಳೆದುಕೊಂಡರು. ಈ ಘಟನೆಗಳು ಶ್ರೀರಾಮುರನ್ನು ದುಖಃದ ಮಡುವಿಗೆ ತಳ್ಳಿತು. ಅವರು ತಮ್ಮ ಕೆಲಸವನ್ನು ತ್ಯಜಿಸಿ ಗಾಂಧೀಜಿಯವರ ಸಬರಮತಿ ಆಶ್ರಮವನ್ನು ಸೇರಲು ನಿರ್ಧರಿಸಿದರು. ಬಳಿಕ ಉಪ್ಪಿನ ಸತ್ಯಾಗ್ರಹ, ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಗಾಂಧೀಜಿಯವರೊಂದಿಗೆ ಜೈಲು ಪಾಲಾದರು.
ಬಹುಪಾಲು ಜನರು ವಾಸಿಸುವ ಭಾರತದ ಹಳ್ಳಿಗಳಿಗೆ ಸೇವೆ ಸಲ್ಲಿಸುವಂತೆ ಗಾಂಧೀಜಿಯವರ ಕರೆಗೆ ಪ್ರಚಂಡ ಗಾಂಧಿವಾದಿ ಶ್ರೀರಾಮುಲು ಉತ್ತರಿಸಿದರು. 1946 ರಲ್ಲಿ ಅವರು ದೀನದಲಿತರ ಕಲ್ಯಾಣಕ್ಕಾಗಿ ಕೆಲಸ ಮಾಡಲು ನೆಲ್ಲೂರಿಗೆ ಮರಳಿದರು. ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡುವುದರ ಜೊತೆಗೆ, ಅವರು ದಲಿತ ಸಮುದಾಯದ ಸಾಮಾಜಿಕ ಮತ್ತು ಆರ್ಥಿಕ ವಿಮೋಚನೆಗಾಗಿ ಹೋರಾಡಿದರು. ಮದ್ರಾಸ್ ಪ್ರಾಂತ್ಯದ ಎಲ್ಲಾ ದೇವಾಲಯಗಳನ್ನು ದಲಿತ ಸಮುದಾಯಕ್ಕೆ ತೆರೆಯಬೇಕೆಂದು ಒತ್ತಾಯಿಸಿ ಉಪವಾಸ ನಡೆಸಿದರು.
ಏತನ್ಮಧ್ಯೆ, ಭಾಷೆಗಳ ಆಧಾರದ ಮೇಲೆ ರಾಜ್ಯಗಳ ರಚನೆಯ ವಿಚಾರ ಬಂದಾಗ ಶ್ರೀರಾಮುಲು ತೆಲುಗು ಭಾಷಿಕ ಪ್ರದೇಶಕ್ಕೆ ಪ್ರತ್ಯೇಕ ರಾಜ್ಯ ಸ್ಥಾಪನೆಯ ವಿಚಾರವನ್ನು ಪ್ರಸ್ತಾಪಿಸಿದರು. ಆದರೆ ನೆಹರು ಮತ್ತು ಸಿ ರಾಜಗೋಪಾಲಾಚಾರಿ ಈ ಕಲ್ಪನೆಯನ್ನು ಸಂಪೂರ್ಣವಾಗಿ ತಿರಸ್ಕರಿಸಿದರು. ಆದರೆ ಪಟ್ಟುಬಿಡದ ಶ್ರೀರಾಮುಲು 1952 ರ ಅಕ್ಟೋಬರ್ 19 ರಂದು ಆಂಧ್ರದ ಜನರ ಪ್ರತ್ಯೇಕ ರಾಜ್ಯದ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಉಪವಾಸ ಪ್ರಾರಂಭಿಸಿದರು.
ಅವರ ಉಪವಾಸವು ಮೊದಲ ಆರು ವಾರಗಳವರೆಗೆ ಉನ್ನತ ನಾಯಕರ ಗಮನಕ್ಕೆ ಬಂದಿರಲಿಲ್ಲ. ಕಡೆಗೆ ಆಂಧ್ರ ರಚನೆಗೆ ಪ್ರಧಾನಿ ನೆಹರು ಒಪ್ಪಿದರೂ, ಈ ಕುರಿತು ಅಧಿಕೃತ ಘೋಷಣೆಯಾಗದ ಕಾರಣ ಶ್ರೀರಾಮುಲು ಉಪವಾಸ ಮುರಿಯಲು ನಿರಾಕರಿಸಿದರು. ಆಂಧ್ರದಲ್ಲಿ ಗಲಭೆ ನಡೆಯಿತು. ಶ್ರೀರಾಮುಲು ಅವರ ಉಪವಾಸಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಯಿತು. ಅಧಿಕೃತ ಘೋಷಣೆಯ ವಿಳಂಬದಿಂದಾಗಿ ಶ್ರೀರಾಮುಲು ಅವರ ಆರೋಗ್ಯ ಹದಗೆಟ್ಟಿತು ಮತ್ತು ಅಂತಿಮವಾಗಿ 58 ದಿನಗಳ ಉಪವಾಸದ ನಂತರ ಅವರು 15 ಡಿಸೆಂಬರ್ 1952 ರಂದು ನಿಧನರಾದರು.
1 ಅಕ್ಟೋಬರ್ 1953 ರಂದು ತೆಲುಗು ಮಾತನಾಡುವ ಭಾಗವನ್ನು ಮದ್ರಾಸ್ ನಿಂದ ಪ್ರತ್ಯೇಕಿಸಿ ಆಂಧ್ರಪ್ರದೇಶ ರಾಜ್ಯ ರಚಿಸಲಾಯಿತು, ಅದರ ರಾಜಧಾನಿ ಕರ್ನೂಲ್. ಆಂಧ್ರದ ʼಶ್ರೀ ಪೊಟ್ಟಿ ಶ್ರೀರಾಮುಲು ನೆಲ್ಲೂರು ಜಿಲ್ಲೆʼ ಅವರ ಹೆಸರನ್ನೇ ಹೊತ್ತು ರಚನೆಯಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!