ಪ್ರವಾಸಿಗರನ್ನು ಆಕರ್ಷಿಸಲು ಕಾರಂಜಿ ಕೆರೆ ಅಭಿವೃದ್ಧಿ : ಸಚಿವ ಉಮೇಶ್ ಕತ್ತಿ

ಹೊಸ ದಿಗಂತ ವರದಿ, ಮೈಸೂರು:

ಮೈಸೂರಿನ ಮೃಗಾಲಯಕ್ಕೆ ಸೇರಿದ ಕಾರಂಜಿ ಕೆರೆಯನ್ನು ಪ್ರವಾಸಿಗರನ್ನು ಸೆಳೆಯುವ ದೃಷ್ಟಿಯಿಂದ ಮತ್ತಷ್ಟು ಅಭಿವೃದ್ದಿಗೊಳಿಸಲಾಗುವುದು ಎಂದು ಅರಣ್ಯ ಸಚಿವ ಉಮೇಶ್ ಕತ್ತಿ ಹೇಳಿದರು.
ಬುಧವಾರ ಬೆಳಗ್ಗೆ ಮೈಸೂರಿನ ಕಾರಂಜಿ ಕೆರೆಗೆ ಭೇಟಿ ನೀಡಿದ ಅವರು, ಕೆರೆ ಆವರಣದಲ್ಲಿರುವ ಪಕ್ಷಿ ವನ, ಬೋಟಿಂಗ್ ಸೇರಿದಂತೆ ಸುತ್ತಲಿನ ಪರಿಸರ ವೀಕ್ಷಣೆ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿ, ಮತ್ತಷ್ಟು ಅಭಿವೃದ್ದಿಗೊಳಿಸುವ ಮೂಲಕ ಪ್ರವಾಸಿಗರನ್ನು ಸೆಳೆಯುವ ಪ್ರಯತ್ನ ಮಾಡಬೇಕು ಎಂದು ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಎಲ್.ಆರ್.ಮಹದೇವಸ್ವಾಮಿ ಅವರಿಗೆ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಕರ್ನಾಟಕ ಮೃಗಾಲಯ ಪ್ರಾಕಾರದ ಅಧ್ಯಕ್ಷ ಎಲ್.ಆರ್.ಮಹದೇವ ಸ್ವಾಮಿ ಮಾತನಾಡಿ, ಕಾರಂಜಿ ಕೆರೆಯಲ್ಲಿನ ಪ್ರವಾಸಿ ಸ್ನೇಹಿ ಆಕರ್ಷಣೆಗಳನ್ನು ಕಂಡು ಅರಣ್ಯ ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಮತ್ತಷ್ಟು ಅಭಿವೃದ್ದಿಗೊಳಿಸುವ ಸಂಬoಧ ಅಗತ್ಯ ಸಲಹೆ ಸೂಚನೆಗಳನ್ನು ನೀಡಿದ್ದು, ಅನುಷ್ಠಾನಗೊಳಿಸುವ ವ್ಯವಸ್ಥೆ ಮಾಡಲಾಗುವುದು ಎಂದರು.
ಬಳಿಕ ಕುಪ್ಪಣ್ಣ ಪಾರ್ಕಿಗೆ ಭೇಟಿ ನೀಡಿದ ಸಚಿವರು, ಪಾರ್ಕಿನಲ್ಲಿರುವ ಗಾಜಿನ ಮನೆಯ ವೀಕ್ಷಣೆ ಮಾಡಿದರು. ಈ ಸಂದರ್ಭದಲ್ಲಿ ಗಾಜಿನ ಮನೆಯನ್ನು ಕೇವಲ ದಸರಾ ವೇಳೆ ಬಳಕೆ ಮಾಡದೇ ವರ್ಷಕ್ಕೆ ಮೂರ್ನಾಲ್ಕು ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಸಾರ್ವಜನಿಕ ಪ್ರವೇಶಕ್ಕೆ ಮುಕ್ತವಾಗಿಸಬೇಕು ಎಂದು ಹೇಳಿದರು. ಇದೇ ವೇಳೆ ಗಣಪತಿ ಆಶ್ರಮದಲ್ಲಿರುವ ಶುಕವನಕ್ಕೂ ಸಹ ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಮೃಗಾಲಯ ಪ್ರಾಧಿಕಾರದ ಸದಸ್ಯೆ ಜ್ಯೋತಿ ರೇಚಣ್ಣ, ಡಿಸಿಎಗಳಾದ ಕರಿಕಾಳನ್, ಕಮಲಾ ಕರಿಕಾಳನ್, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ರುದ್ರೇಶ್ ಸೇರಿದಂತೆ ಅಧಿಕಾರಿಗಳು ಇದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!