ದಿಗಂತ ವರದಿ ಮಡಿಕೇರಿ:
ತಾನು ಕೆಲಸ ನಿರ್ವಹಿಸುತ್ತಿದ್ದ ತೋಟದಿಂದಲೇ ಕಾರ್ಮಿಕನೊಬ್ಬ ಕಾಫಿ ಕಳವು ಮಾಡಿರುವ ಘಟನೆ ಅಮ್ಮತ್ತಿ ಸಮೀಪದ ಹೊಸೂರು ಗ್ರಾಮದಲ್ಲಿ ನಡೆದಿದ್ದು, ಪೊಲೀಸರ ತನಿಖೆಯ ಸಂದರ್ಭ ಪ್ರಕರಣ ಬೆಳಕಿಗೆ ಬಂದಿದೆ.
ಹೊಸೂರು ಗ್ರಾಮದ ಗೊಟ್ಟಡ ನಿವಾಸಿ ವಿ.ಎಂ.ಬಾಲಕೃಷ್ಣ ಅವರ ತೋಟದ ನಂಬಿಕಸ್ಥ ಆಳು ಅರುಣ ಎಂಬಾತನೇ ಇದೀಗ ಪೊಲೀಸರ ಅತಿಥಿಯಾಗಿರುವ ಆರೋಪಿ.
ಕಳೆದ 4-5 ವರ್ಷಗಳಿಂದ ಬಾಲಕೃಷ್ಣ ಅವರ ತೋಟ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ಅರುಣ ನಂಬಿಕೆಯ ಕಾರ್ಮಿಕನಾಗಿದ್ದನೆನ್ನಲಾಗಿದ್ದು, ಕೊಯ್ಲು ಮಾಡಿ ಒಣ ಹಾಕಲಾಗಿದ್ದ ಕಾಫಿಯನ್ನು ಸಂಜೆ ರಾಶಿ ಮಾಡುವ ಕೆಲಸವನ್ನೂ ಒಪ್ಪಿಸಲಾಗಿತ್ತೆಂದು ಹೇಳಲಾಗಿದೆ.
ಆದರೆ ಬುಧವಾರ ಬೆಳಗ್ಗೆ ಕಣದಲ್ಲಿ ಕಾಫಿ ಕಡಿಮೆಯಾಗಿರಿವುದು ಕಂಡು ಬಂದಿದ್ದು, ಈ ಹಿನ್ನೆಲೆಯಲ್ಲಿ ಬಾಲಕೃಷ್ಣ ಅವರು ಸಿದ್ದಾಪುರ ಪೊಲೀಸರಿಗೆ ದೂರು ನೀಡಿದ್ದರು.
ಅದರಂತೆ ಪಾಲಿಬೆಟ್ಟ ಉಪಠಾಣೆಯ ಪೊಲೀಸ್ ಸಿಬ್ಬಂದಿ ಚೌಹಾನ್ ಎಂಬವರು ಘಟನಾ ಸ್ಥಳಕ್ಕೆ ಬಂದು ವ್ಯಾಪಕ ತನಿಖೆ ಕೈಗೊಂಡ ಸಂದರ್ಭ ಆರೋಪಿ ಅರುಣ ತನ್ನ ಮನೆಯಲ್ಲಿ ಕಾಫಿ ಬಚ್ಚಿಟ್ಟಿರುವುದು ಗೋಚರಿಸಿದೆ
ಬೆಳಗ್ಗೆಯಿಂದಲೇ ಸಂಶಯಾಸ್ಪದವಾಗಿ ವರ್ತಿಸುತ್ತಿದ್ದ ಅರುಣ, ಮನೆ ಹಾದಿಯಲ್ಲಿ ಕಾಫಿ ಕದ್ದು ಸಾಗಿಸಿದಾಗ ಅಲ್ಲಲ್ಲಿ ಚೆಲ್ಲಿದ್ದುದು ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ಪೊಲೀಸರಿಗೆ ನೆರವಾಗಿದೆ.
ಪೊಲೀಸರು ಮತ್ತು ಗ್ರಾಮಸ್ಥರ ಸಮಕ್ಷಮದಲ್ಲಿ ಆರೋಪಿ ಅರುಣ ತನ್ನ ತಪ್ಪನ್ನು ಒಪ್ಪಿಕೊಂಡ ಹಿನ್ನೆಲೆಯಲ್ಲಿ ರಾಜಿ ಮೂಲಕ ಪ್ರಕರಣವನ್ನು ಇತ್ಯರ್ಥಪಡಿಸಲಾಗಿದೆ.
ಈ ಘಟನೆಯಿಂದ ಸುತ್ತಮುತ್ತಲ ಕಾಫಿ ಬೆಳೆಗಾರರು ಜಾಗೃತರಾಗಿದ್ದು, ಕಳೆದ ಹಲವು ವರ್ಷಗಳಿಂದ ತಮ್ಮ ಕಣದಲ್ಲೂ ಒಣ ಹಾಕಲಾಗಿದ್ದ ಕಾಫಿ ದಾಸ್ತಾನು ಕಡಿಮೆಯಾಗಿರುವ ಬಗ್ಗೆ ಹೇಳಿಕೊಂಡಿದ್ದಾರೆ.
ಪೊಲೀಸ್ ಸಿಬ್ಬಂದಿ ಚೌಹಾನ್ ಅವರ ತುರ್ತು ಸ್ಪಂದನೆ ಬಗ್ಗೆ ಗ್ರಾಮಸ್ಥರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ನಂಬಿಕಸ್ಥ ಆಳಿನಿಂದಲೇ ನಡೆಯಿತು ಕೃತ್ಯ
ಕಾರ್ಮಿಕ ಅರುಣ ನಂಬಿಕಸ್ಥ ಆಳು ಎನ್ನಲಾಗಿದ್ದು, ಮಾಲಕ ಬಾಲಕೃಷ್ಣ ಅವರು ವರ್ಷಕ್ಕೆ 5 ಚೀಲ ಗೊಬ್ಬರವನ್ನು ಅರುಣನ ಅರ್ಧ ಎಕರೆ ತೋಟಕ್ಕೆ ಹಾಕಲು ಉಚಿತವಾಗಿ ನೀಡುತ್ತಿದ್ದರು. ಹಬ್ಬದ ದಿನದಂದು ಹೊಸ ಬಟ್ಟೆ ಕೊಡಿಸುತ್ತಿದ್ದರು. ಇತ್ತೀಚೆಗೆ ಕಾಫಿ ಕೊಯ್ಲು ಮುಗಿದ ನಂತರವೂ ಕಡುಬು,ಕೋಳಿ ಮದ್ಯ ನೀಡಿ ಬಾಲಕೃಷ್ಣ ಸಂತೋಷ ಕೂಟ ಏರ್ಪಡಿಸಿದ್ದರು. ಆದರೆ ಮಂಗಳವಾರ ರಾತ್ರಿ12 ಗಂಟೆ ಸುಮಾರಿಗೆ ಬಾಲಕೃಷ್ಣ ಅವರಿಗೆ ಸೇರಿದ 4 ಚೀಲ ಕಾಫಿಯನ್ನು ಅರುಣ ಕಳವು ಮಾಡಿದ್ದ, ಬುಧವಾರ ಅದನ್ನು ಮಾರಾಟ ಮಾಡುವ ಉದ್ದೇಶವನ್ನೂ ಹೊಂದಿದ್ದಾಗಿ ಹೇಳಲಾಗಿದೆ.
ಇದೀಗ ಅರುಣ ಮಾಡಿರುವ ಕೃತ್ಯ ಬೇಲಿಯೇ ಎದ್ದು ಹೊಲ ಮೇಯ್ದಂತಾಗಿದೆ.