ಪುಟಾಣಿ ಗಾತ್ರದ ಗೋವಿನ ತಳಿ ಸಂರಕ್ಷಿಸಿದ ಮಹಾಮಾತೆ ಇವರು ಯಾರು ನೋಡಿ..

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೊಟ್ಟಾಯಂ: ಜಾನುವಾರುಗಳ ಸಂತಾನೋತ್ಪತ್ತಿ ನೀತಿ ಕೇರಳದಲ್ಲಿ ಸ್ಥಳೀಯ ಗೋತಳಿಯನ್ನೇ ಅಳಿವಿನಂಚಿಗೆ ತಳ್ಳಿತ್ತು. ಪಶುವೈದ್ಯ ನಿವೃತ್ತ ಪ್ರಾಧ್ಯಾಪಕಿಯೊಬ್ಬರು ಅದರ ಸಂರಕ್ಷಣೆಯಲ್ಲಿ ತೊಡಗಿದ್ದು, ಅವರ ಈ ಕೆಲಸವೇ ಅವರಿಗೆ ದೇಶದ ನಾಲ್ಕನೇ ಅತ್ಯುನ್ನತ ಪ್ರಶಸ್ತಿಯ ಗೌರವವನ್ನೂ ತಂದುಕೊಟ್ಟಿದೆ.

ಅದು 60ರ ದಶಕ, ಹಾಲು ಉತ್ಪಾದನೆಯನ್ನು ಹೆಚ್ಚಿಸುವ ಸಲುವಾಗಿ ಕೇರಳ ಸರಕಾರವು ಜಾನುವಾರುಗಳ ಸಂತಾನೋತ್ಪತ್ತಿ ನೀತಿಯಲ್ಲಿ ಬದಲಾವಣೆ ತಂದಿತು. ಪರಿಣಾಮ ವಿಲಕ್ಷಣ ತಳಿಗಳ ಎತ್ತುಗಳೊಂದಿಗೆ ಸ್ಥಳೀಯ ಜಾನುವಾರುಗಳ ಭಾರೀ ಅಡ್ಡ-ಸಂತಾನೋತ್ಪತ್ತಿ ನಡೆಯಿತು. ಇದು ವಿಶ್ವದ ಅತೀ ಸಣ್ಣದಾದ ಮತ್ತು ಸ್ಥಳೀಯ ಗೋತಳಿ ವೆಚೂರ್ ಹಸುಗಳಂತಹ ಸ್ಥಳೀಯ ತಳಿಗಳ ಸಂಖ್ಯೆಯಲ್ಲಿ ಇಳಿಕೆಗೆ ಕಾರಣವಾಯಿತು.

ಎಲ್ಲಿದೆ ಈ ವೆಚೂರ್ ಗೋತಳಿ?
ಈ ಅಪೂರ್ವ ಗೋತಳಿಗೆ ಕೇರಳದ ಕೊಟ್ಟಾಯಂ ಜಿಲ್ಲೆಯಲ್ಲಿರುವ ವೆಚೂರ್ ಎಂಬ ಹಳ್ಳಿಯ ಹೆಸರನ್ನು ಇಡಲಾಗಿದೆ. ಈ ತಳಿಯ ಗೋವುಗಳು ಹೆಚ್ಚಿನ ಹಾಲಿನ ಇಳುವರಿಗೆ ಹೆಸರುವಾಸಿ. ಅಷ್ಟೇ ಅಲ್ಲ, ಇದು ಔಷಧೀಯ ಗುಣಗಳನ್ನು ಹೊಂದಿದೆ. ಹಸುಗಳಿಗೆ ಕಡಿಮೆ ಮೇವು ಮತ್ತು ನಿರ್ವಹಣೆ ಸಾಕಾಗುತ್ತದೆ. ಆದರೆ ಈಗ ಈ ತಳಿ ವಿನಾಶದ ಅಂಚಿನಲ್ಲಿದೆ.

ಭಾರೀ ಹುಡುಕಾಟದಲ್ಲಿ ಸಿಕ್ಕಿದೊಂದೇ ಹಸು:
ತ್ರಿಶೂರ್‌ನ ಕೇರಳದ ಪಶುವೈದ್ಯಕೀಯ ಮತ್ತು ಪ್ರಾಣಿ ವಿಜ್ಞಾನ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕಿ ಡಾ. ಸೋಸಮ್ಮ ಐಪೆ ಅವರು ವೆಚೂರ್ ತಳಿ ಸಂರಕ್ಷಿಸುವಲ್ಲಿ ಮುಂಚೂಣಿಯಲ್ಲಿದ್ದಾರೆ. ತಳಿಯ ಕೊನೆಯ ಲಭ್ಯವಿರುವ ಮಾದರಿಯನ್ನು ಸಂರಕ್ಷಿಸಲು ಒಂದು ತಂಡ ಕಟ್ಟಿಕೊಂಡು 1989ರಲ್ಲಿ ವೆಚೂರ್ ಹಸುಗಳಿಗಾಗಿ ವ್ಯಾಪಕ ಹುಡುಕಾಟ ಪ್ರಾರಂಭಿಸಿದರು. ಕೊನೆಗೂ ಕೊಟ್ಟಾಯಂ ಮತ್ತು ದಕ್ಷಿಣ ಆಲಪ್ಪುಳ ಜಿಲ್ಲೆಗಳಲ್ಲಿ ಒಂದು ವೆಚೂರ್ ಹಸುವನ್ನು ಹುಡುಕಲು ತಂಡ ಶಕ್ತವಾಯಿತು.

ಸಂರಕ್ಷಿಸಿ ಮರಳಿ ರೈತರಿಗೆ:
ತಂಡವು ಹೆಚ್ಚು ಹಸುಗಳ ಹುಡುಕಾಟ ಪ್ರಾರಂಭಿಸಿ, ಒಂದು ವರ್ಷದಲ್ಲಿ ಸುಮಾರು 24 ವೆಚೂರ್ ಹಸುಗಳನ್ನು ಹೊಂದಲು ಯಶಸ್ವಿಯಾಯಿತು. ಈ ಗೋವುಗಳನ್ನು ಮನ್ನುತ್ತಿಯ ಕೃಷಿ ವಿಶ್ವವಿದ್ಯಾಲಯದ ಜಮೀನಿನಲ್ಲಿಟ್ಟು ಆರೈಕೆ ಮಾಡಲಾಯಿತು. ಹಸುಗಳನ್ನು ಸಂತಾನೋತ್ಪತ್ತಿ ಮಾಡುವಂತೆ ಮಾಡುವುದು, ಆ ಮೂಲಕ ಅವುಗಳ ಜನಸಂಖ್ಯೆಯನ್ನು ಹೆಚ್ಚಿಸುವುದು ತಂಡದ ಮೊದಲ ಆದ್ಯತೆಯಾಗಿತ್ತು.

ನನ್ನ ವೃತ್ತಿಜೀವನದ ಅತ್ಯುತ್ತಮ ಸಮಯಗಳಲ್ಲಿ ಇದು ಒಂದಾಗಿದೆ. ನಾವೆಲ್ಲರೂ ಒಟ್ಟಾಗಿ ವೆಚೂರ್ ತಳಿಯನ್ನು ಉಳಿಸಿ, ಅದನ್ನು ಮರಳಿ ರೈತರಿಗೆ ನೀಡುವ ಉದ್ದೇಶ ಹೊಂದಿದ್ದೆವು. ಇದು ಸುಲಭವಲ್ಲವಾಗಿರಲಿಲ್ಲ, ಹಲವಾರು ಸವಾಲುಗಳನ್ನು ಎದುರಿಸಬೇಕಾಯಿತು ಎಂದು ತಮ್ಮ ಈ ಪ್ರಯಾಣವನ್ನು ಸ್ಮರಿಸುತ್ತಾರೆ ಡಾ. ಸೋಸಮ್ಮ.

ಗೋಶಾಲೆಯಲ್ಲಿ ವಿಷಪ್ರಾಶನ:
ಹಸುಗಳ ಅಡ್ಡ-ಸಂತಾನೋತ್ಪತ್ತಿಯ ರಾಜ್ಯದ ನೀತಿಗೆ ವಿರುದ್ಧವಾಗಿ ಸರಕಾರದ ಯಾವುದೇ ಬೆಂಬಲವಿಲ್ಲದೇ ಈ ಉಪಕ್ರಮ ತೆಗೆದುಕೊಳ್ಳಲಾಗಿತ್ತು. ವಿಶ್ವವಿದ್ಯಾನಿಯಲದಲ್ಲಿಯೂ ಹೆಚ್ಚಿನ ಬೆಂಬಲವಿರಲಿಲ್ಲ. ಆದರೆ ಭಾರತೀಯ ಕೃಷಿ ಸಂಶೋಧನಾ ಮಂಡಳಿ (ಐಸಿಎಆರ್) ವೆಚೂರ್ ಹಸುಗಳನ್ನು ಸ್ಥಳೀಯ ಜಾನುವಾರು ತಳಿ ಎಂದು ಗುರುತಿಸಿತು. ಸುಮಾರು ಒಂದು ವರ್ಷದ ನಂತರ, ಜಮೀನಿನಲ್ಲಿ ವಿಷಪ್ರಾಶನದ ದುರಂತ ಘಟನೆ ಸಂಭವಿಸಿತು. ಇದರಲ್ಲಿ ಹಲವಾರು ಹಸುಗಳು ಸಾವನ್ನಪ್ಪಿದವು. ತನಿಖೆ ನಡೆದರೂ ಈವರೆಗೂ ವಿಷವುಣಿಸಿದವರು ಯಾರೆಂದು ಗೊತ್ತಾಗಲಿಲ್ಲ.

3ದಶಕದಲ್ಲಿ 5000 ದಾಟಿದ ಸಂಖ್ಯೆ:
ಅನೇಕ ವಿವಾದದ ನಂತರ 1998ರಲ್ಲಿ ರೈತರು ಮತ್ತು ಸಂಶೋಧಕರ ಭಾಗವಹಿಸುವಿಕೆಯನ್ನು ಹೆಚ್ಚಿಸಲು ವೆಚೂರ್ ಕನ್ಸರ್ವೇಶನ್ ಟ್ರಸ್ಟ್ ಸ್ಥಾಪನೆಯಾಯಿತು. ಟ್ರಸ್ಟ್ ಈಗ ರೈತರಿಗೆ ವೇಚೂರ್ ಶುದ್ಧ ತಳಿಯ ಎತ್ತುಗಳ ವೀರ್ಯವನ್ನು ನೀಡುತ್ತದೆ. ಸ್ಥಳೀಯ ಗೋತಳಿಯನ್ನು ಉಳಿಸುವ ಉದ್ದೇಶದಿಂದ ಪ್ರಾರಂಭವಾದ ಪ್ರಯಾಣವು ಅದರ ಜನಸಂಖ್ಯೆಯನ್ನು ಸ್ಥಿರಗೊಳಿಸುವಲ್ಲಿ ಯಶಸ್ವಿಯಾಗಿದೆ. ಈಗ ಕೇರಳ ಮತ್ತು ದೇಶದ ಇತರ ಭಾಗಗಳಲ್ಲಿ 5000ಕ್ಕೂ ಹೆಚ್ಚು ವೇಚೂರ್ ಹಸುಗಳಿವೆ ಎಂದು ಡಾ. ಸೋಸಮ್ಮ ಹೇಳುತ್ತಾರೆ.

ವೆಚೂರ್ ತಳಿಯನ್ನು ವಿನಾಶದ ಅಂಚಿನಿಂದ ಉಳಿಸುವಲ್ಲಿ ಮತ್ತು ಅದರ ಜನಸಂಖ್ಯೆಯನ್ನು ಹೆಚ್ಚಿಸುವಲ್ಲಿ ಅವಿರತ ಪ್ರಯತ್ನಗಳಿಗಾಗಿ ಡಾ. ಸೋಸಮ್ಮ ಅವರು ಅನೇಕ ಪುರಸ್ಕಾರಗಳನ್ನು ಪಡೆದಿದ್ದಾರೆ. ಇದೀಗ ಭಾರತ ಸರಕಾರ 2022ರ ಪದ್ಮಶ್ರೀ ಪ್ರಶಸ್ತಿ ಘೋಷಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!