ಹೊಸದಿಗಂತ ವರದಿ ಬನವಾಸಿ:
ಶಿರಸಿ- ಹೊಸನಗರ ರಾಜ್ಯ ಹೆದ್ದಾರಿಯ ಬನವಾಸಿ ಸಮೀಪದ ರಾಮತೀರ್ಥ ಕೆರೆಯ ಬಳಿ ಮಿನಿ ಲಾರಿ ಮುಖಾಮುಖಿ ಡಿಕ್ಕಿ ಹೊಡೆದು ನಾಲ್ವರು ಗಾಯಗೊಂಡ ಘಟನೆ ಗುರುವಾರ ಸಂಭವಿಸಿದೆ.
ದ್ವಿಚಕ್ರ ಸವಾರನನ್ನು ತಪ್ಪಿಸಲು ಹೋಗಿ ಎರಡು ಮಿನಿ ಲಾರಿಗಳು ಮುಖಾಮುಖಿ ಡಿಕ್ಕಿ ಹೊಡೆದುಕೊಂಡಿದ್ದು, ಡಿಕ್ಕಿಯ ರಭಸಕ್ಕೆ ಮಿನಿ ಲಾರಿಗಳು ಸಂಪೂರ್ಣವಾಗಿ ಜಖಂ ಆಗಿದೆ. ಅಪಘಾತದಲ್ಲಿ ಇಬ್ಬರಿಗೆ ಗಂಭೀರ ಗಾಯವಾಗಿದ್ದು, ಇಬ್ಬರಿಗೆ ಸಣ್ಣಪುಟ್ಟ ಗಾಯವಾಗಿದೆ.
ಗಂಭೀರ ಗಾಯಗೊಂಡ ಇಬ್ಬರನ್ನು ಬನವಾಸಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಶಿರಸಿ ಆಸ್ಪತ್ರೆಗೆ ರವಾನಿಸಲಾಗಿದೆ. ಘಟನಾ ಸ್ಥಳಕ್ಕೆ ಶಿರಸಿ ಸಿಪಿಐ ರಾಮಚಂದ್ರ ನಾಯ್ಕ್, ಬನವಾಸಿ ಪೋಲಿಸ್ ಠಾಣಾ ಪಿಎಸ್ಐ ಚಂದ್ರಕಲಾ ಪತ್ತಾರ ಸ್ಥಳ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.