ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರೀ ಮಳೆಯಿಂದಾಗಿ ಬೃಹತ್ ಬಂಡೆಯೊಂದು ಜಾರಿ ಟ್ರಕ್ ಮೇಲೆ ಬಿದ್ದಿರುವ ಘಟನೆ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದಿದೆ. ಪರಿಣಾಮ ಟ್ರಕ್‌ನಲ್ಲಿದ್ದ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮಂಗಳವಾರ ಜಮ್ಮು ಮತ್ತು ಕಾಶ್ಮೀರದ ರಾಂಬನ್ ಜಿಲ್ಲೆಯಲ್ಲಿ ಚಲಿಸುತ್ತಿದ್ದ ಟ್ರಕ್ ಮೇಲೆ ದೊಡ್ಡ ಗಾತ್ರದ ಬಂಡೆ ಬಿದ್ದು, ಟ್ರಕ್ ಆಳವಾದ ಕಂದಕಕ್ಕೆ ಉರುಳಿ ಬಿದ್ದಿದೆ.
ಈ ಅಪಘಾತವು ಬನಿಹಾಲ್ ಪ್ರದೇಶದ ಶೇರ್ ಬೀಬಿ ಬಳಿ ಸಂಭವಿಸಿದ್ದು, ನಾಲ್ವರು ಸ್ಥಳದಲ್ಲೇ ದುರ್ಮಣಕ್ಕೀಡಾದರು. ಇವರ ಜೊತೆಗ ಟ್ರಕ್‌ನಲ್ಲಿದ್ದ ಆರು ಜಾನುವಾರಗಳೂ ಕೂಡ ಸಾವನ್ನಪ್ಪಿವೆ. ಪೊಲೀಸರು ಮತ್ತು ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿ ಮೃತದೇಹಗಳನ್ನು ಹೊರತೆಗೆದಿದ್ದಾರೆ.
ಮತ್ತೊಂದೆಡೆ ಭೂಕುಸಿತದಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಸ್ಥಗಿತಗೊಂಡಿದೆ. ಕಿಶ್ತ್ವಾರಿ ಪಥೇರ್ ಬನಿಹಾಲ್‌ನಲ್ಲಿ ಭೂಕುಸಿತದಿಂದಾಗಿ ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯನ್ನು ನಿರ್ಬಂಧಿಸಲಾಗಿದೆ. ಎರಡೂ ಕಡೆ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಸಂಚಾರ ನಿಯಂತ್ರಣ ಘಟಕಗಳಿಂದ ಅನುಮತಿಯಿಲ್ಲದೆ ರಾಷ್ಟ್ರೀಯ ಹೆದ್ದಾರಿ-44 ರಲ್ಲಿ ಸಂಚಾರ ಮಾಡದಂತೆ ಸಂಚಾರ ಪೊಲೀಸರು ಪ್ರಯಾಣಿಕರಿಗೆ ಸೂಚಿಸಿದ್ದಾರೆ.