October 15, 2026
Thursday, October 15, 2026
spot_img

ಬಿರಿಯಾನಿ ತಿಂದ ಬೆನ್ನಲ್ಲೇ ಕಲ್ಲಂಗಡಿ ಸೇವನೆ: ಒಂದೇ ಕುಟುಂಬದ ನಾಲ್ವರು ಸಾ*ವು

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಾಣಿಜ್ಯ ನಗರಿ ಮುುಂಬೈನ ಪೈಧೋನಿ ಪ್ರದೇಶದಲ್ಲಿ ಮನಕಲಕುವ ಘಟನೆಯೊಂದು ನಡೆದಿದೆ. ರಾತ್ರಿ ಊಟದ ಬಳಿಕ ಕಲ್ಲಂಗಡಿ ಹಣ್ಣು ಸೇವಿಸಿದ ಒಂದೇ ಕುಟುಂಬದ ನಾಲ್ವರು ಸದಸ್ಯರು ಫುಡ್ ಪಾಯಿಸನ್ ನಿಂದ ಸಾವನ್ನಪ್ಪಿದ್ದಾರೆ.

ಮೃತರನ್ನು ಅಬ್ದುಲ್ಲಾ ದೋಕಾಡಿಯಾ (40), ಅವರ ಪತ್ನಿ ನಸ್ರೀನ್ ದೋಕಾಡಿಯಾ (35) ಮತ್ತು ಪುತ್ರಿಯರಾದ ಆಯಿಷಾ (16) ಹಾಗೂ ಜೈನಾಬ್ (13) ಎಂದು ಗುರುತಿಸಲಾಗಿದೆ. ಏಪ್ರಿಲ್ 25ರ ರಾತ್ರಿ ಸುಮಾರು 10:30ಕ್ಕೆ ಸಂಬಂಧಿಕರೊಂದಿಗೆ ಸೇರಿ ಒಟ್ಟು ಒಂಬತ್ತು ಮಂದಿ ಬಿರಿಯಾನಿ ಸೇವಿಸಿದ್ದರು. ಊಟದ ನಂತರ ಸಂಬಂಧಿಕರು ತಮ್ಮ ಮನೆಗಳಿಗೆ ಮರಳಿದ್ದರು.

ತಡರಾತ್ರಿ ಸುಮಾರು 1:00 ರಿಂದ 1:30 ರ ಸುಮಾರಿಗೆ ಅಬ್ದುಲ್ಲಾ ಅವರ ಕುಟುಂಬದ ನಾಲ್ವರು ಸದಸ್ಯರು ಕಲ್ಲಂಗಡಿ ಹಣ್ಣನ್ನು ತಿಂದಿದ್ದಾರೆ ಎನ್ನಲಾಗಿದೆ.

ಏಪ್ರಿಲ್ 26 ರ ಮುಂಜಾನೆ 5:30 ರ ಸುಮಾರಿಗೆ ಕುಟುಂಬದ ನಾಲ್ವರಿಗೂ ತೀವ್ರವಾಗಿ ವಾಂತಿ ಮತ್ತು ಹೊಟ್ಟೆನೋವು ಕಾಣಿಸಿಕೊಂಡಿದೆ. ತಕ್ಷಣವೇ ಕುಟುಂಬದ ವೈದ್ಯರಿಂದ ಪ್ರಾಥಮಿಕ ಚಿಕಿತ್ಸೆ ಕೊಡಿಸಲಾಯಿತಾದರೂ, ಪರಿಸ್ಥಿತಿ ಬಿಗಡಾಯಿಸಿದ ಕಾರಣ ಅವರನ್ನು ಮುಂಬೈನ ಜೆಜೆ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ನಾಲ್ವರೂ ಕೊನೆಯುಸಿರೆಳೆದಿದ್ದಾರೆ.

ಸದ್ಯಕ್ಕೆ ಮುಂಬೈ ಪೊಲೀಸರು ಈ ಕುರಿತು ಆಕಸ್ಮಿಕ ಸಾವು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿ ಬಂದ ನಂತರವಷ್ಟೇ ಸಾವಿಗೆ ನಿಖರವಾದ ಕಾರಣ ಬಿರಿಯಾನಿ ಸೇವನೆಯೋ ಅಥವಾ ಕಲ್ಲಂಗಡಿ ಹಣ್ಣಿನಲ್ಲಿದ್ದ ವಿಷಾಂಶವೋ ಎಂಬುದು ತಿಳಿಯಲಿದೆ.

Must Read