October 10, 2026
Saturday, October 10, 2026
spot_img

ಎಕ್ಸ್‌ಪ್ರೆಸ್‌ವೇನಲ್ಲಿ ಕಾಲನಾದ ಅತಿವೇಗ: ಭೀಕರ ಅಪಘಾತಕ್ಕೆ ಒಂದೇ ಕುಟುಂಬದ ನಾಲ್ವರು ಮೃತ್ಯು

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೆಹಲಿ-ಡೆಹ್ರಾಡೂನ್ ಎಕ್ಸ್‌ಪ್ರೆಸ್‌ವೇನಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿ, ಮೂವರು ತೀವ್ರವಾಗಿ ಗಾಯಗೊಂಡಿರುವ ಹದಗೆಟ್ಟ ಘಟನೆ ನಡೆದಿದೆ. ಹರಿಯಾಣದ ಸೋನಿಪತ್ ಮೂಲದ ಕುಟುಂಬವೊಂದು ಕಾರಿನಲ್ಲಿ ಹರಿದ್ವಾರಕ್ಕೆ ತೆರಳುತ್ತಿದ್ದಾಗ ಈ ದುರಂತ ಸಂಭವಿಸಿದೆ.

ದುರಂತಕ್ಕೆ ಕಾರಣವಾದ ರಿವರ್ಸ್ ಡ್ರೈವಿಂಗ್!

ಪೊಲೀಸರ ಪ್ರಕಾರ, ರಾಂಪುರ ಮನಿಹರಾನ್ ವ್ಯಾಪ್ತಿಯ ಹಲ್ಗೋಯಾ ಗ್ರಾಮದ ಬಳಿ ಕಾರು ಚಾಲಕ ಹೆದ್ದಾರಿಯಲ್ಲೇ ವಾಹನವನ್ನು ರಿವರ್ಸ್ (ಹಿಂದಕ್ಕೆ) ಚಲಿಸಲು ಯತ್ನಿಸಿದ್ದಾನೆ. ಈ ವೇಳೆ ಅದೇ ಮಾರ್ಗದಲ್ಲಿ ಅತಿವೇಗವಾಗಿ ಬಂದ ಎಸ್‌ಯುವಿ (SUV) ಕಾರು ಹಿಂಬದಿಯಿಂದ ಬಲವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕಾರು ಡಿವೈಡರ್‌ಗಳಿಗೆ ಅಪ್ಪಳಿಸಿ ಸಂಪೂರ್ಣ ನಜ್ಜುಗುಜ್ಜಾಗಿದ್ದರೆ, ಎಸ್‌ಯುವಿ ರಸ್ತೆಯಲ್ಲೇ ಪಲ್ಟಿಯಾಗಿದೆ.

ಸ್ಥಳದಲ್ಲೇ ಪ್ರಾಣ ಹಾರಿತು

ಮೃತರನ್ನು ಹರಿಯಾಣದ ಬಹಾದುರ್‌ಗಢದ ಚರಣ್ ಸಿಂಗ್, ಅವರ ಪತ್ನಿ ಸುದೇಶ್, ಸೊಸೆ ಪ್ರೀತಿ ಮತ್ತು ಮೊಮ್ಮಗ ಶಿವಾಂಶ್ ಎಂದು ಗುರುತಿಸಲಾಗಿದೆ. ತೀವ್ರವಾಗಿ ಗಾಯಗೊಂಡಿರುವ ಪ್ರವೀಣ್ ಹಾಗೂ ಸಾಹದೇವ್ ಸೇರಿದಂತೆ ಮೂವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಅವರ ಸ್ಥಿತಿ ಚಿಂತಾಜನಕವಾಗಿದೆ.

ಸ್ಥಳೀಯರು ಹಾಗೂ 108 ಅಂಬುಲೆನ್ಸ್ ಸಿಬ್ಬಂದಿ ತಕ್ಷಣವೇ ರಕ್ಷಣಾ ಕಾರ್ಯ ನಡೆಸಿದ್ದಾರೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಎರಡೂ ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಹೆದ್ದಾರಿಯಲ್ಲಿ ರಿವರ್ಸ್ ಚಾಲನೆ ಹಾಗೂ ಅತಿವೇಗವೇ ಈ ಘೋರ ಅಪಘಾತಕ್ಕೆ ಮುಖ್ಯ ಕಾರಣ ಎನ್ನಲಾಗಿದೆ.

Must Read