ಮೇಘನಾ ಶೆಟ್ಟಿ, ಶಿವಮೊಗ್ಗ
ಮನುಷ್ಯರಿಗೆ ಅನಾರೋಗ್ಯ ಕಾಡಿದ್ರೆ ಖುದ್ದು ವೈದ್ಯರನ್ನು ಹುಡುಕಿಕೊಂಡು ಆಸ್ಪತ್ರೆಗೆ ಬರುತ್ತಾರೆ. ಎದ್ದೇಳೋಕೇ ಸಾಧ್ಯವಾಗ್ತಿಲ್ಲ ಎನ್ನುವ ಪರಿಸ್ಥಿತಿ ಇದ್ದರೂ ಸ್ನೇಹಿತರೋ, ಮನೆಯವರೋ ಅವರನ್ನು ಎತ್ತಿಕೊಂಡು ಬೇಕಾದ್ರೂ ಆಸ್ಪತ್ರೆ ತಲುಪಿಸಿಬಿಡುತ್ತಾರೆ. ಆದರೆ ಆನೆಗಳಿಗೆ ಅನಾರೋಗ್ಯವಾದ್ರೆ?? ಆನೆಯೂ ಆಸ್ಪತ್ರೆಗೆ ಬರೋದಿಲ್ಲ, ಆನೆಯನ್ನು ಹೊತ್ತು ತರೋದಕ್ಕೂ ಆಗೋದಿಲ್ಲ. ಈ ಸಮಸ್ಯೆಗೆ ಪರಿಹಾರವಾಗಿ ಜಾರ್ಖಂಡ್‌ನಲ್ಲಿ ವೈಲ್ಡ್‌ಲೈಫ್ ಎಸ್‌ಒಸ್ ಅವರಿಂದ ʼಹಾಥಿ ಸೇವಾʼ ಎನ್ನುವ ಮೊಬೈಲ್ ಕ್ಲಿನಿಕ್ ಆರಂಭವಾಗಿದೆ.
ಆನೆಯನ್ನು ಎತ್ತಿಕೊಂಡು ಆಸ್ಪತ್ರೆಗೆ ಬರೋದು ಅಸಾಧ್ಯ. ಈಗಾಗಲೇ ನೋವಿನಿಂದ ನರಳುತ್ತಿರುವ ಆನೆ, ಮನುಷ್ಯನ ಕಮಾಂಡ್ ಅರ್ಥಮಾಡಿಕೊಳ್ಳೋದು ಕೂಡ ಕಷ್ಟಸಾಧ್ಯವೇ. ಇದೇ ಕಾರಣಕ್ಕೆ ಆನೆ ಆಸ್ಪತ್ರೆಗೆ ಬರಲು ಸಾಧ್ಯವಾಗಿಲ್ಲ ಅಂದ್ರೆ ಏನಾಯ್ತು? ಆಸ್ಪತ್ರೆಯೇ ಆನೆಯ ಬಳಿ ಬರೋಕೆ ಸಾಧ್ಯ ಎಂದು ಸಾಧಿಸಿ ತೋರಿಸಿದ್ದು ಹಾಥಿ ಸೇವಾ ಮೊಬೈಲ್ ಕ್ಲಿನಿಕ್.

ಟ್ರೀಟ್‌ಮೆಂಟ್ ನೀಡೋದು ಸುಲಭದ ಮಾತಲ್ಲ
ಕೆಲವೊಮ್ಮೆ ಆನೆಗಳಿಗೆ ಟ್ರೀಟ್‌ಮೆಂಟ್ ಕೊಡೋಕೆಂದು ಬಂದರೂ ಸಾಕಷ್ಟು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಆನೆಯ ಪಾದವಷ್ಟನ್ನೇ ಎತ್ತಿ ಏನಾಗಿದೆ ಎಂದು ನೋಡೋದೇ ಮೊದಲ ಸವಾಲು! ಕೆಲವೊಮ್ಮೆ ಆನೆಗಳು ಹಳ್ಳಿಯ ಕಡೆಯ ಭಾಗದಲ್ಲೋ, ಕಾಡಿನ ಅಂಚಿನಲ್ಲೋ, ಯಾವುದೋ ಫೀಲ್ಡ್‌ನಲ್ಲೋ ಗಾಯಗೊಂಡು ನರಳುತ್ತವೆ. ಅಲ್ಲಿಗೆ ಹೋಗುವುದು ಸವಾಲಿನ ಕೆಲಸವಾದ್ರೂ ಅಲ್ಲಿಂದ ಜೀವಂತ ವಾಪಾಸ್ ಬರುತ್ತೀವೋ ಇಲ್ಲವೋ ಎಂದುಕೊಂಡು ಹೋಗುವುದು ಕಷ್ಟಕರವಾಗಿರುತ್ತದೆ.

ಅಮ್ಮಂದಿರ ಜೊತೆಗಿರುವ ಮಕ್ಕಳ ಚಿಕಿತ್ಸೆ ಕಷ್ಟವೋ ಕಷ್ಟ!
ತಾಯಾನೆ ಜೊತೆ ಇರುವ ಮರಿಯಾನೆಗೆ ಅನಾರೋಗ್ಯ ಕಾಡಿದ್ದರೆ ಅಥವಾ ಕಾಲಿಗೆ ಗಾಯವಾಗಿ ಇನ್ಫೆಕ್ಷನ್ ಆಗಿದ್ದರೆ, ಅದನ್ನು ಆಸ್ಪತ್ರೆಗೆ ತೆಗೆದುಕೊಂಡು ಹೋಗುವಷ್ಟರಲ್ಲಿ ಅನಾಹುತ ಸಂಭವಿಸಬಹುದು. ಮೊದಲೇ ನೋವಿನಲ್ಲಿರುವ ಆನೆಗೆ ತನ್ನವರು ತನ್ನ ಜಾಗವನ್ನು ಬಿಟ್ಟು ಬೇರೆಡೆಗೆ ಕರೆದುಕೊಂಡು ಹೋಗ್ತಿದ್ದಾರೆ ಎಂದು ಗೊತ್ತಾದರೆ ಯಾವ ರೀತಿ ವರ್ತಿಸಬಹುದು ಹೇಳೋಕಾಗೋದಿಲ್ಲ. ಇನ್ನು ಅದರ ಜೊತೆಯೇ ಇರುವ ತಾಯಿಗೆ ಮಗುವನ್ನು ದೂರ ಮಾಡ್ತಿದ್ದಾರೆ ಎನಿಸಿದರೆ ಅನಾಹುತ ಖಚಿತ.
ಜಾರ್ಖಂಡ್‌ನ ಆನೆಮರಿಗೆ ಹತ್ತು ದಿನ ಚಿಕಿತ್ಸೆ
ಜಾರ್ಖಂಡ್‌ನಲ್ಲಿ ಗಾಯಗೊಂಡ ಆನೆ ಮರಿಯೊಂದು ಒಂದು ಹೆಜ್ಜೆಯನ್ನೂ ಮುಂದಕ್ಕೆ ಇಡೋಕಾಗದೇ ಕಷ್ಟಪಡುತ್ತಿತ್ತು. ಮೂರು ವರ್ಷದ ಪುಟಾಣಿ ಆನೆಗೆ ಸಿಕ್ಕಾಪಟ್ಟೆ ಹಸಿವು ಆದರೆ ಅಂಗಾಲಿನಲ್ಲಿ ಆದ ಇನ್ಫೆಕ್ಷನ್‌ನಿಂದ ಎದ್ದೇಳೋಕೂ ಕಷ್ಟವಾಗಿ ಮಲಗಿದಲ್ಲೇ ಮಲಗಿ ಕಣ್ಣೀರಿಡುತ್ತಿತ್ತು. ಈ ಆನೆಗೆ ಮೆಡಿಕಲ್ ಟೀಂ ಸತತ ಹತ್ತು ದಿನಗಳು ಚಿಕಿತ್ಸೆ ನೀಡಿದೆ. ಕಾಲಿನಲ್ಲಿ ಆರಂಭವಾಗಿದ್ದ ಇನ್ಫೆಕ್ಷನ್ ತೀವ್ರ ಸ್ವರೂಪ ಪಡೆದು ತನ್ನದೇ ಭಾರವನ್ನು ಹೊರಲಾರದೇ ಮರಿ ಕಷ್ಟಪಡುತ್ತಿತ್ತು. ಈ ಮರಿಗೆ ಹಾಥಿ ಸೇವಾ ಮರುಜೀವ ನೀಡಿದೆ.

ಆನೆ ಟ್ರಾನ್ಸ್‌ಪೋರ್ಟ್ ಒಳ್ಳೆ ಐಡಿಯಾ ಅಲ್ಲ
ಗಾಯಗೊಂಡ ಆನೆಯನ್ನು ಆಸ್ಪತ್ರೆಗೆ ಕರೆತರೋದು ಉತ್ತಮವಾದ ಐಡಿಯಾ ಅಲ್ಲ. ಅರ್ಜೆಂಟ್ ಆದ ಮೆಡಿಕಲ್ ಕೇರ್ ಬೇಕಾಗಿದ್ದಾಗ ಟ್ರಾವೆಲ್ ಮಾಡಿಸುವುದು ರಿಸ್ಕಿ ಎನ್ನಲಾಗುತ್ತದೆ. ವೈದ್ಯರೇ ಆನೆಯ ಬಳಿ ಬಂದರೆ ಅದು ಬೆಸ್ಟ್ ಆಪ್ಷನ್. ಆನೆಗಳಿಗೆ ಎಷ್ಟೇ ನೋವಾಗಿದ್ದರೂ ಅದು ನೋವಿನಂತೆ ಕಾಣೋದಿಲ್ಲ. ಆನೆಯ ರಿಯಾಕ್ಷನ್ ಅರ್ಥವಾಗೋದಿಲ್ಲ. ಮೆಡಿಸಿನ್ ನೀಡಲು ಬಂದವರನ್ನು ಆನೆ ಸ್ವಾಗತಿಸೋದಿಲ್ಲ. ಕಿರಿಕಿರಿ ಮಾಡಿಕೊಳ್ಳುತ್ತದೆ, ಡಿಫೆನ್ಸ್ ಮೋಡ್‌ಗೆ ಹೋಗುತ್ತದೆ. ಇದೆಲ್ಲವೂ ಅದಕ್ಕಾಗುತ್ತಿರುವ ಭಯ, ತಳಮಳದ ರಿಯಾಕ್ಷನ್ಸ್ ಎನ್ನುತ್ತಾರೆ ವೈದ್ಯರು.
ವಾಹನದಲ್ಲಿ ಏನೆಲ್ಲಾ ಇರುತ್ತದೆ?
ಆನೆಗಳಿಗೆ ಎಮರ್ಜೆನ್ಸಿ ಸಂದರ್ಭದಲ್ಲಿ ಫಸ್ಟ್ ಏಯ್ಡ್ ಮಾಡಿ ಜೀವಕ್ಕೆ ಹಾನಿಯಾಗದಂತೆ ನೋಡಿಕೊಳ್ಳುವುದು ಹಾಥಿ ಸೇವಾದ ಪ್ರಮುಖ ಉದ್ದೇಶವಾಗಿದೆ. ಈ ವಾಹನದಲ್ಲಿ ಆನೆಗಳಿಗೆ ಆಗುವ ಇಂಜುರಿಗಳಿಗೆ ಬೇಕಾದ ಎಕ್ವಿಪ್ಮೆಂಟ್ಸ್, ಮೆಡಿಸಿನ್‌ಗಳು ಇರುತ್ತವೆ. ಇದರ ಜೊತೆಗೆ ಗಾಯದ ಔಷಧ, ಅರವಳಿಕೆ ಚುಚ್ಚು ಮದ್ದು, ಫ್ಲೂಯಿಡ್ ಥೆರಪಿ, ಮೊನಿಟರಿಂಗ್, ಎಕ್ಸ್ ರೇ ಮಶೀನ್, ಬ್ಲಡ್ ಟೆಸ್ಟ್, ಅಲ್ಟ್ರಾಸೌಂಡ್, ಲೇಸರ್ ಥೆರಪಿ ಕೂಡ ಇದೆ.

ಮಾನಸಿಕ ಆರೋಗ್ಯ ಅರಿಯುವ ವೈದ್ಯರು
ಆನೆಗೆ ಚಿಕಿತ್ಸೆ ನೀಡೋಕೂ ಮುನ್ನ ಅದು ಹೇಗೆ ಬಿಹೇವ್ ಮಾಡುತ್ತಿದೆ? ಯಾಕೆ ಹೀಗೆ ಆಡುತ್ತಿದೆ ಎನ್ನುವುದನ್ನು ಅರ್ಥಮಾಡಿಕೊಳ್ಳುವ ಕೌಶಲ ವೈದ್ಯರಿಗೆ ಇರಬೇಕು. ಅದರ ನಂತರ ತಮ್ಮ ಟ್ರೀಟ್‌ಮೆಂಟ್ ಪ್ಲಾನ್ ಮಾಡಿಕೊಳ್ಳಬೇಕು. ಆನೆಯನ್ನು ಹಿಡಿಯಲು ಅಥವಾ ಓಡಿಸಲು ಮನುಷ್ಯರು ಪ್ರಯತ್ನ ಮಾಡಿ ಅದರಲ್ಲಿ ಗಾಯಗಳಾಗಿದ್ದರೆ ಆನೆ ಮನುಷ್ಯರನ್ನು ನೋಡಿ ಸಿಟ್ಟಾಗುತ್ತದೆ. ಇದನ್ನೆಲ್ಲಾ ಅರ್ಥಮಾಡಿಕೊಳ್ಳಬೇಕು, ಗಾಯದ ಬ್ಯಾಕ್‌ಗ್ರೌಂಡ್ ತಿಳಿದುಕೊಂಡು ಆಗಮಿಸಬೇಕಿದೆ.
ಸುತ್ತಮುತ್ತಲಿನ ಜನರಿಗೆ ಪಾಠ
ಆನೆಗಳ ಬಗ್ಗೆ ಅವುಗಳಿಗೆ ಆಗುವ ಕಾಮನ್ ಆರೋಗ್ಯ ಸಮಸ್ಯೆಗಳು ಹಾಗೂ ಮೆಡಿಸಿನ್‌ಗಳ ಬಗ್ಗೆಯೂ ಪಾಠ ಮಾಡಲಾಗುತ್ತದೆ. ಸುತ್ತಮುತ್ತಲಿನ ಜನ ಈ ಬೇಸಿಕ್ ವಿಚಾರಗಳನ್ನು ತಿಳಿದುಕೊಳ್ಳುತ್ತಾರೆ. ಟ್ರೀಟ್‌ಮೆಂಟ್ ನಂತರ ಹಾಥಿ ಸೇವಾ ವಾಹನ ಮತ್ತೊಂದು ಕಡೆ ಹೋಗುತ್ತದೆ. ಅದಕ್ಕೂ ಮುನ್ನ ಸ್ಥಳೀಯರಿಗೆ ಕೆಲವೊಂದು ವಿಷಯಗಳನ್ನು ಹೇಳಿಕೊಟ್ಟು ಹೋಗುತ್ತಾರೆ. ಆನೆಗಳಿಗೆ ಗ್ಯಾಸ್ಟ್ರಿಕ್ ಆದಾಗ ಹೇಗೆ ಬಿಹೇವ್ ಮಾಡುತ್ತವೆ, ಕಾಲಿಗೆ ಗಾಯವಾದಾಗ ಹೇಗೆ ಕೂರುತ್ತವೆ ಎನ್ನುವ ವಿಷಯಗಳನ್ನು ಹೇಳಿಕೊಡುತ್ತಾರೆ, ಮನುಷ್ಯರಂತೆ ಪ್ರಾಣಿಗಳ ಜೀವನವನ್ನೂ ಉತ್ತಮ ಮಾಡುವ ಗುರಿಯನ್ನು ಹಾಥಿ ಸೇವಾ ಹೊಂದಿದೆ.



