ಉಕ್ರೇನ್’ನಲ್ಲಿ ಕೊಡಗಿನ ನಾಲ್ವರು ವಿದ್ಯಾರ್ಥಿಗಳು: ಆತಂಕದಲ್ಲಿ ಪೋಷಕರು

ಹೊಸದಿಗಂತ ವರದಿ, ಮಡಿಕೇರಿ:

ಉಕ್ರೇನ್ ಮೇಲೆ ರಷ್ಯಾ ಸಮರ ಸಾರಿರುವ ಹಿನ್ನೆಲೆಯಲ್ಲಿ ಕೊಡಗಿನ ಕೆಲವು ಪೋಷಕರಲ್ಲೂ ಆತಂಕ ಮನೆ ಮಾಡಿದೆ.
ಪ್ರಸಕ್ತ ದೊರೆತ ಮಾಹಿತಿಯನ್ವಯ ಕುಶಾಲನಗರದ ಮೂವರು ಸೇರಿದಂತೆ ಕೊಡಗು ಜಿಲ್ಲೆಯ ಒಟ್ಟು ನಾಲ್ವರು ವಿದ್ಯಾರ್ಥಿಗಳು ಉಕ್ರೇನ್’ನಲ್ಲಿ ವ್ಯಾಸಂಗ ಮಾಡುತ್ತಿರುವುದಾಗಿ ಹೇಳಲಾಗಿದೆ.
ಕುಶಾಲನಗರ ಸಮೀಪದ ಕೂಡ್ಲೂರು ನಿವಾಸಿ, ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಕೆ.ಕೆ.ಮಂಜುನಾಥ್ ಕುಮಾರ್ ಅವರ ಪುತ್ರ ಚಂದನ್ ಗೌಡ, ಗುಮ್ಮನಕೊಲ್ಲಿ ಗ್ರಾಮದ ಲಿಖಿತ್, ಕೂಡಿಗೆಯ ಅಕ್ಷತಾ ಮತ್ತು ವೀರಾಜಪೇಟೆಯ ಮಹಮ್ಮದ್ ಯೂಸುಫ್ ಅವರುಗಳು ಯುದ್ಧದ ಕಾರ್ಮೋಡದ ನಡುವೆ ಕ್ಷೇಮವಾಗಿರುವುದಾಗಿ ತಮ್ಮ ಪೋಷಕರಿಗೆ ಮಾಹಿತಿ ನೀಡಿದ್ದಾರೆ.
ಕೆಲವರು ಮೆಟ್ರೋ ರೈಲು ಸಂಚಾರದ ಸುರಂಗದಲ್ಲಿ ಹಾಗೂ ಕೆಲವರು ತಾವಿರುವ ಕಟ್ಟಡಗಳ ನೆಲ ಮಾಳಿಗೆಗಳಲ್ಲೇ ರಕ್ಷಣೆ ಪಡೆದಿರುವುದಾಗಿ ಹೇಳಲಾಗಿದ್ದು, ಆದಷ್ಟು ಬೇಗ ತಾಯ್ನಾಡಿಗೆ ಮರಳಲು ಕಾದು ಕುಳಿತಿರುವುದಾಗಿ ತಿಳಿದು ಬಂದಿದೆ.
ಈ‌ ನಡುವೆ ಕೊಡಗು ಜಿಲ್ಲಾಡಳಿತ ಕೂಡಾ ಉಕ್ರೇನ್’ನಲ್ಲಿರುವ ಜಿಲ್ಲೆಯ ನಿವಾಸಿಗಳ ಮಾಹಿತಿ ಕಲೆ ಹಾಕಲು ಪ್ರಯತ್ನಿಸುತ್ತಿದ್ದು, ಇದಕ್ಕಾಗಿ ನೋಡಲ್ ಅಧಿಕಾರಿಯೊಬ್ಬರನ್ನು ನಿಯೋಜಿಸಿದೆ.
ಅಂತಹವರ ಮಾಹಿತಿಯನ್ನು ಸಂಬಂಧಿಸಿದವರು ಜಿಲ್ಲಾ ವಿಪತ್ತು ನಿಯಂತ್ರಣ ಕೊಠಡಿ ದೂರವಾಣಿ ಸಂ.08272-221077, 1077, 08272-221099 ಅಥವಾ ಜಿಲ್ಲಾ ವಿಪತ್ತು ಪರಿಣಿತ ಅನನ್ಯ ವಾಸುದೇವ ಅವರ ಮೊಬೈಲ್ 8892494703ಗೆ ಕರೆ ಮಾಡಿ ಮಾಹಿತಿ ನೀಡಬಹುದಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!