ಫ್ರಾಂಚೈಸಿ ನೀಡುವುದಾಗಿ ವಂಚನೆ: ಇಡ್ಲಿಗುರು ಮಾಲೀಕನ ವಿರುದ್ಧ ಪ್ರಕರಣ ದಾಖಲು

ಹೊಸದಿಗಂತ ವರದಿ: ಬೆಂಗಳೂರು:

ಹೋಟೆಲ್ ಫ್ರಾಂಚೈಸಿ ನೀಡುವುದಾಗಿ ವಂಚಿಸಿದ ಆರೋಪದಡಿ ಹೋಟೆಲ್ ಇಡ್ಲಿಗುರು ಮಾಲೀಕನ ವಿರುದ್ಧ ಪ್ರಕರಣ ದಾಖಲಾಗಿದೆ.

ಇಡ್ಲಿಗುರು ಹೋಟೆಲ್ ಮಾಲೀಕ ಕಾರ್ತಿಕ್ ಶೆಟ್ಟಿ ಅವರ ಪತ್ನಿ ಮಂಜುಳಾ, ತಂದೆ ಬಾಬು ಶೆಟ್ಟಿ ಹಾಗೂ ಹೋಟೆಲ್‌ ಸಿಬ್ಬಂದಿ ದಿವಾಕರ್ ವಿರುದ್ದ ಚೇತನ್ ಎಂಬುವವರು ನೀಡಿದ ದೂರಿನನ್ವಯ ನಗರದ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಎಫ್‌ಐಆ‌ರ್ ದಾಖಲಾಗಿದೆ.

2022ರ ಅಕ್ಟೋಬರ್‌ನಲ್ಲಿ ದೂರುದಾರ ಚೇತನ್ ಮಾಗಡಿ ಮುಖ್ಯರಸ್ತೆಯ ಕೊಟ್ಟಿಗೆಪಾಳ್ಯದಲ್ಲಿರುವ ಇಡ್ಲಿಗುರು ಕಚೇರಿಗೆ ಭೇಟಿ ನೀಡಿ, ಸಂಸ್ಥೆಯ ಬಗ್ಗೆ ಕಾರ್ತಿಕ್‌ನಿಂದ ಮಾಹಿತಿ ಪಡೆದುಕೊಂಡರು. ಈ ವೇಳೆ ಆರೋಪಿಗಳು ತಿಂಗಳಿಗೆ 50 ಸಾವಿರ ರೂ. ಸಂಪಾದಿಸಬಹುದು ಎಂದು ತಿಳಿಸಿ, ಆರಂಭದಲ್ಲಿ ನಮ್ಮ ಹೋಟೆಲ್ ಫ್ರಾಂಚೈಸಿ ನೀಡುವುದಾಗಿ ಚೇತನ್‌ಗೆ ನಂಬಿಸಿದ್ದರು. ಅದಕ್ಕಾಗಿ ಠೇವಣಿ ರೂಪದಲ್ಲಿ 3 ಲಕ್ಷ ರೂ. ಪಡೆದಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಆರೋಪಿಗಳ ಸಲಹೆ ಮೇರೆಗೆ ಚೇತನ್, ತಮ್ಮ ಮನೆಯ ನೆಲಮಹಡಿಯಲ್ಲಿದ್ದ 9 ಸಾವಿರ ರೂ ಬಾಡಿಗೆ ಬರುತ್ತಿದ್ದ ಮಳಿಗೆಯೊಂದನ್ನು ತೆರವು ಮಾಡಿದ್ದರು. ಈ ಜಾಗದಲ್ಲಿ ಇಡ್ಲಿಗುರು ನಡೆಸಲು ಕಾರ್ತಿಕ್ ಕೂಡ ಒಪ್ಪಿಕೊಂಡಿದ್ದರಿಂದ ಅಂಗಡಿಯನ್ನು ಹೋಟೆಲ್ ನಡೆಸಲು ಬೇಕಾದ ವಿನ್ಯಾಸಕ್ಕೆ ಬದಲಾಯಿಸಲಾಗಿತ್ತು. ಅದಕ್ಕೆ 2 ಲಕ್ಷ ರೂ ಖರ್ಚು ಮಾಡಲಾಗಿತ್ತು. ಆದರೆ, ಆರೋಪಿಗಳು ಹೋಟೆಲ್‌ನ ಬದಲಾಗಿ ಮೊಬೈಲ್ ಕ್ಯಾಂಟಿನ್ ತಂದು ನಿಲ್ಲಿಸಿ ಸ್ವಲ್ಪ ದಿನಗಳ ನಂತರ ಅಂದು ಕೊಂಡಂತೆ ವ್ಯಾಪಾರ ಆಗುತ್ತಿಲ್ಲ. ಬೇರೆಡೆ ವ್ಯಾಪಾರ ಪ್ರಾರಂಭಿಸೋಣ ಎಂದಿದ್ದ ಆರೋಪಿಗಳು, ನಂತರ ಶೇ.10 ಕಮಿಷನ್ ನೀಡುವುದಾಗಿ ನಂಬಿಸಿದ್ದರು. ಆದರೆ, ಯಾವುದೇ ಕಮಿಷನ್ ನೀಡದೆ, ನಿಗದಿತ ಜಾಗದಲ್ಲಿ ಹೋಟೆಲ್ ನಡೆಸದೆ, ಅಂಗಡಿಯನ್ನು ಮರು ವಿನ್ಯಾಸ ಮಾಡಿದ ಹಣ ಸೇರಿ 5 ಲಕ್ಷ ರೂ ಆಗಿರುವ ಬಗ್ಗೆ ಆರೋಪಿಗಳನ್ನು ವಿಚಾರಿಸಿದಾಗ ನಾಲ್ವರು ಆರೋಪಿಗಳು ಜೀವ ಬೆದರಿಕೆ ಹಾಕಿದ್ದಾರೆ ಎಂದು ಚೇತನ್ ದೂರಿದ್ದಾರೆ. ಮತ್ತೊಂದೆಡೆ ಆರೋಪಿಗಳು ಇದೇ ಹತ್ತಾರು ಮಂದಿಗೆ ವಂಚಿಸಿದ್ದಾರೆ ಎಂಬುದು ಗೊತ್ತಾಗಿದೆ. ಸದ್ಯ ಆರೋಪಿಗಳು ಪರಾರಿಯಾಗಿದ್ದು, ಅವರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!