ತೂಕದಲ್ಲಿ ವಂಚನೆ: ಬಿಸ್ಕೆಟ್ ಕಂಪನಿಗೆ ಗ್ರಾಹಕರ ಆಯೋಗದಿಂದ ದಂಡ

ಹೊಸದಿಗಂತ ವರದಿ, ಮಡಿಕೇರಿ:

ಪ್ಯಾಕೇಟ್’ನಲ್ಲಿ ನಮೂದಿಸಿದ ತೂಕಕ್ಕಿಂತ ಕಡಿಮೆ ತೂಕದ ಬಿಸ್ಕೆಟ್ ನೀಡಿದ ಬ್ರಿಟಾನಿಯ ಕಂಪನಿಗೆ ಕೊಡಗು ಜಿಲ್ಲಾ ಗ್ರಾಹಕರ ಆಯೋಗ 30 ಸಾವಿರ ರೂ.ಗಳ ದಂಡ ವಿಧಿಸಿದೆ.

ಗೋಣಿಕೊಪ್ಪ ಪಟ್ಟಣದಲ್ಲಿ ಎಂ.ಇ ಆಲಿ ಎಂಬವರು ಮಾರಿಗೋಲ್ಡ್ ಬಿಸ್ಕೆಟನ್ನು ಖರೀದಿಸಿದ್ದರು. ಬಿಸ್ಕೆಟ್‌ಗಳು ಕಡಿಮೆ ಇರುವುದರಿಂದ ತೂಕ ಮಾಡಿಸಿ ನೋಡಿದಾಗ 100 ಗ್ರಾಂ ಇರುವ ಬದಲು 82 ಗ್ರಾಂ ಇದ್ದುದನ್ನು ಗಮನಿಸಿದ ಅವರು ಕೊಡಗಿನ ಜಿಲ್ಲಾ ಗ್ರಾಹಕರ ಆಯೋಗದಲ್ಲಿ ದೂರು ಸಲ್ಲಿಸಿದ್ದರು.

ನ್ಯಾಯಾಲಯವು ಎರಡೂ ಕಡೆಯ ವಾದಗಳನ್ನು ಆಲಿಸಿದಾಗ ಬ್ರಿಟಾನಿಯ ಇಂಡಸ್ಟ್ರೀಸ್‌ರವರು ಅನುಚಿತ ವ್ಯಾಪಾರ ಪದ್ಧತಿಯನ್ನು ಅನುಸರಿಸಿರುವುದು ಸಾಬೀತು ಆಗಿರುವುದಾಗಿ ಮನಗಂಡ ಆಯೋಗವು, ಬ್ರಿಟಾನಿಯ ಇಂಡಸ್ಟ್ರೀಸ್’ನವರು ದೂರುದಾರರಿಗೆ 10,000ರೂ. ಗಳನ್ನು ಪರಿಹಾರ ಮೊತ್ತವಾಗಿ ಮತ್ತು ರೂ.20,000ವನ್ನು ಮಾನಸಿಕ ವೇದನೆಗಾಗಿ ಮತ್ತು ಖರ್ಚು ವೆಚ್ಚಗಳಿಗಾಗಿ ಪಾವತಿಸುವಂತೆ ಆದೇಶ ನೀಡಿದೆ.

ವಿದ್ಯುತ್ ಸಂಪರ್ಕ ಸ್ಥಗಿತಗೊಳಿಸದಂತೆ ನಿರ್ದೇಶನ: ಮತ್ತೊಂದು ಪ್ರಕರಣದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಳಿಸದಂತೆ‌ ಗ್ರಾಹಕರ ಆಯೋಗ ಆದೇಶಿಸಿದೆ.

ವೀರಾಜಪೇಟೆ ನಿವಾಸಿ ಕೆ.ಎಸ್. ಗಣೇಶ್ ಎಂಬವರು ಅಲ್ಲಿನ ನಿಸರ್ಗ ಬಡಾವಣೆಯಲ್ಲಿ ವಾಸದ ಮನೆ ನಿರ್ಮಿಸಿದ್ದು, ಇದಕ್ಕೆ ಚೆಸ್ಕಾಂರವರು ವಿದ್ಯುತ್ ಸಂಪರ್ಕ ಅಳವಡಿಸಿದ್ದರು.
ಆದರೆ ಏಕಾಏಕಿ ವಿದ್ಯುತ್ ಬಿಲ್ ಮೊತ್ತ 25,988ರೂ.ಗಳನ್ನು ಅಧಿಕವಾಗಿ ವಿಧಿಸಿದ್ದರು. ಇದಕ್ಕೆ ವಾಸದ ಮನೆಯನ್ನು ಬಾಡಿಗೆಗೆ ನೀಡಿರುವುದು ಕಾರಣ ಎಂದು ತಿಳಿಸಲಾಗಿತ್ತು.

ಇದರ ವಿರುದ್ಧವಾಗಿ ಗಣೇಶ್ ಅವರು ಮಡಿಕೇರಿಯ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿ ತಾನು 2021ನೇ ವರ್ಷದಲ್ಲಿ ವಾಸದ ಕಟ್ಟಡವನ್ನು ಯಾವುದೇ ವಾಣಿಜ್ಯ ಉದ್ದೇಶಕ್ಕೆ ಬಳಕೆ ಮಾಡಿರುವುದಿಲ್ಲ ಎಂದು ತಿಳಿಸಿದ್ದರು.

ಈ ಅಂಶಗಳನ್ನು ಆಲಿಸಿದ ಗ್ರಾಹಕರು ಆಯೋಗ, ವಿದ್ಯುತ್ ಸಂಪರ್ಕವನ್ನು ಸ್ಥಗಿತಗೊಳಿಸದಂತೆ ಮತ್ತು ದೂರುದಾರರಿಗೆ 5ಸಾವಿರ ರೂ.ಗಳನ್ನು ಖರ್ಚು ವೆಚ್ಚಗಾಗಿ ಪಾವತಿಸುವಂತೆ ಚೆಸ್ಕಾಂಗೆ ಆದೇಶ ನೀಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!