ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇಂದ್ರ ಮತ್ತು ವಿವಿಧ ರಾಜ್ಯ ಸರಕಾರಗಳ ಸರಕಾರಿ ಸಂಸ್ಥೆಗಳಲ್ಲಿ ಉದ್ಯೋಗ ದೊರಕಿಸಿಕೊಡುವುದಾಗಿ ಭರವಸೆಯೊಡ್ಡಿ ಅನೇಕ ಮಂದಿ ಉದ್ಯೋಗಾರ್ಥಿಗಳಿಂದ ಲಕ್ಷಾಂತರ ರೂಪಾಯಿ ಹಣ ಪಡೆದು ವಂಚಿಸಿದ್ದ ಕಾಸರಗೋಡಿನ ಶೇಣಿ ಬಲ್ತಕಲ್ಲು ನಿವಾಸಿ, ಬಾಡೂರು ಎಎಲ್ಪಿ ಶಾಲೆಯ ಶಿಕ್ಷಕಿ ಸಚಿತಾ ರೈ (27)ಯನ್ನು ಬಂಧಿಸಲಾಗಿದೆ.
ಕಾಸರಗೋಡು ವಿದ್ಯಾನಗರದಲ್ಲಿ ಡಿವೈಎಸ್ಪಿ ಸಿ.ಕೆ.ಸುನೀಲ್ಕುಮಾರ್ ನೇತೃತ್ವದ ವಿಶೇಷ ತನಿಖಾ ತಂಡದ ನೇತೃತ್ವದಲ್ಲಿ ಮಹಿಳಾ ಪೊಲೀಸರು ಮತ್ತು ವಿದ್ಯಾನಗರ ಪೊಲೀಸರು ಆಕೆಯನ್ನು ಗುರುವಾರ ಸಂಜೆ ಬಂಧಿಸಿದ್ದಾರೆ.
ಕಾಸರಗೋಡಿನ ನ್ಯಾಯಾಲಯಕ್ಕೆ ಶರಣಾಗಲು ಆಗಮಿಸುತ್ತಿದ್ದಾಗ ಆಕೆಯನ್ನು ಸೆರೆ ಹಿಡಿಯಲಾಯಿತು. ಸಚಿತಾ ರೈಯನ್ನು ತನಿಖಾ ತಂಡವು ಸಮಗ್ರ ವಿಚಾರಣೆಗೊಳಪಡಿಸಿದೆ. ಸಚಿತಾ ರೈ ವಿರುದ್ಧ ಈಗಾಗಲೇ 13ಕ್ಕೂ ಹೆಚ್ಚು ಪ್ರಕರಣಗಳು ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿವೆ.
ಡಿವೈಎಫ್ಐ ಕಾಸರಗೋಡು ಜಿಲ್ಲಾ ಸಮಿತಿಯ ಮಾಜಿ ಸದಸ್ಯೆಯಾದ ಸಚಿತಾ ರೈ ಕೇರಳ ತುಳು ಅಕಾಡೆಮಿಯಲ್ಲಿ ಸದಸ್ಯೆಯಾಗಿದ್ದಳು. ಈ ಮಧ್ಯೆ ಮನೆಯವರಿಗೆ ತಿಳಿಯದಂತೆ ಸುಮಾರು 5 ಲಕ್ಷ ರೂ. ಹಣವನ್ನು ಸಚಿತಾ ರೈಗೆ ನೀಡಿ ಬಳಿಕ ವಂಚನೆಗೊಳಗಾದ ಪ್ರಕರಣಕ್ಕೆ ಸಂಬಂಧಿಸಿ ಆದೂರು ಪೊಲೀಸ್ ಠಾಣೆಯಲ್ಲಿ ಕೇಸೊಂದು ದಾಖಲಾಗಿದೆ.
ಮೊದಲ ಕೇಸು ದಾಖಲಾದ ಬಳಿಕ ಸಚಿತಾ ರೈ ವಾರಗಟ್ಟಲೆ ತಲೆಮರೆಸಿಕೊಂಡಿದ್ದಳು. ಆಕೆಯ ವಿರುದ್ಧ ಕುಂಬಳೆ, ಬದಿಯಡ್ಕ, ಮಂಜೇಶ್ವರ, ಕಾಸರಗೋಡು, ಆದೂರು, ಮೇಲ್ಪರಂಬ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಪೊಲೀಸ್ ಠಾಣೆಗಳಲ್ಲಿ ಕೇಸು ದಾಖಲಾಗಿವೆ.
ಸಿಪಿಸಿಆರ್ಐ, ಕೇಂದ್ರೀಯ ವಿದ್ಯಾಲಯ, ಎಸ್ಬಿಐ, ಕರ್ನಾಟಕ ಅಬಕಾರಿ ಮತ್ತು ಅರಣ್ಯ ಇಲಾಖೆಯಲ್ಲಿ ಕೆಲಸ ಕೊಡಿಸುವುದಾಗಿ ಹಲವರಿಂದ ಹಣ ವಸೂಲು ಮಾಡಲಾಗಿದೆ ಎಂದು ದೂರುದಾರರು ತಿಳಿಸಿದ್ದಾರೆ.
ಕೇರಳ ಗ್ರಾಮೀಣ ಬ್ಯಾಂಕ್ನ ಪೆರ್ಲ ಶಾಖೆಯಲ್ಲಿರುವ ಸಚಿತಾ ರೈಯ ಖಾತೆಗೆ ಮತ್ತು ಕೆನರಾ ಬ್ಯಾಂಕ್ನ ಪೆರ್ಲ ಶಾಖೆಯಲ್ಲಿನ ಖಾತೆಗೆ ಹಣ ಕಳುಹಿಸಲು ಹೇಳಿರುವುದಾಗಿ ದೂರುದಾರರು ಮಾಹಿತಿ ನೀಡಿದ್ದಾರೆ.
ಬ್ಯಾಂಕ್ಗಳ ಮೂಲಕ ೫ ಕೋಟಿ ರೂಪಾಯಿಗೂ ಹೆಚ್ಚು ಹಣಕಾಸು ವ್ಯವಹಾರ ನಡೆದಿರುವುದನ್ನು ಪೊಲೀಸರು ಪ್ರಾಥಮಿಕವಾಗಿ ಪತ್ತೆಹಚ್ಚಿದ್ದಾರೆ ಎಂದು ವರದಿಯಾಗಿದೆ. ಉಡುಪಿಯಲ್ಲಿರುವ ಉದ್ಯೋಗ ನೇಮಕಾತಿ ಸಂಸ್ಥೆಯ ಹೆಸರಿನಲ್ಲಿ ಸಚಿತಾ ರೈ ಅನೇಕ ಮಂದಿಯಿಂದ ಹಣ ದೋಚಿರುವುದಾಗಿ ಪೊಲೀಸರ ತನಿಖೆಯಿಂದ ಬೆಳಕಿಗೆ ಬಂದಿದೆ.