ಹೊಸದಿಗಂತ ಡಿಜಿಟಲ್ ಡೆಸ್ಕ್:
ವಂಚನೆ ಸಂಬಂಧ ಮುಟ್ಟುಗೋಲು ಹಾಕಿದ್ದ ಬ್ಯಾಂಕ್ ಖಾತೆಗಳಿಂದ ಪೊಲೀಸರು ಹಾಗೂ ನ್ಯಾಯಾಲಯದ ಹೆಸರಿನಲ್ಲಿ ನಕಲಿ ಆದೇಶಗಳನ್ನು ಸೃಷ್ಟಿಸಿ 1.32 ಕೋಟಿ ರೂ.ಹಣ ದೋಚಿದ್ದ ಮೂವರು ವಂಚಕರನ್ನು ಪೊಲೀಸರು ಬಂಧನಕ್ಕೊಳಪಡಿಸಲಿದ್ದಾರೆ.
ಆರೋಪಿಗಳನ್ನು ದೆಹಲಿಯ ಅಭಿಮನ್ಯು ಕುಮಾರ್ ಪಾಂಡೆ, ನೀರಜ್ ಸಿಂಗ್ ಮತ್ತು ರಾಜಸ್ಥಾನದ ನಿವಾಸಿ ಸಾಗರ್ ಲಕುರಾ ಎಂದು ಗುರುತಿಸಲಾಗಿದೆ. ಕೆಲ ದಿನಗಳ ಹಿಂದೆ ನಕಲಿ ದಾಖಲೆ ಸಲ್ಲಿಸಿ ರೂ.30 ಲಕ್ಷ ಹಣ ವಂಚನೆ ಬಗ್ಗೆ ಹಲಸೂರಿನ ಐಸಿಐಸಿಐ ಬ್ಯಾಂಕ್ ಶಾಖಾ ವ್ಯವಸ್ಥಾಪಕರಿಂದ ದೂರು ಸಲ್ಲಿಕೆಯಾಗಿತ್ತು.
ಈ ಬಗ್ಗೆ ತನಿಖೆಗಿಳಿದ ಸೈಬರ್ ಕ್ರೈಂ ಠಾಣೆಯ ಇನ್ಸ್‌ಪೆಕ್ಟರ್‌ಹಜರೇಶ್ ಕಿಲ್ಲೇದಾರ್ ನೇತೃತ್ವದ ತಂಡವು, ಬ್ಯಾಂಕ್ ಖಾತೆ ಹಣ ವರ್ಗಾವಣೆ ವಿವರ ಆಧರಿಸಿ ಆರೋಪಿಗಳನ್ನು ಬಂಧಿಸಿದೆ.
ರಾಜಸ್ಥಾನದ ತನ್ನೂರಿನಲ್ಲಿ ಪೋಟೋ ಸ್ಟುಡಿಯೋ ಇಟ್ಟಿದ್ದ ಸಾಗರ್, ವಿಪರೀತ ಬೆಟ್ಟಿಂಗ್ ವ್ಯಸನಿಯಾಗಿದ್ದ. ಬೆಟ್ಟಿಂಗ್ ಆ್ಯಪ್‌ನಲ್ಲಿ ಸಾಗರ್ ಖಾತೆ ಹೊಂದಿದ್ದ. ಕೆಲ ತಿಂಗಳ ಹಿಂದೆ ವಂಚನೆ ಆರೋಪದ ಮೇರೆಗೆ ಬೆಟ್ಟಿಂಗ್ ಆ್ಯಪ್ ಖಾತೆ ಮುಟ್ಟುಗೋಲು ಹಾಕಿಕೊಳ್ಳಲಾಗಿತ್ತು. ಆಗ ನ್ಯಾಯಾಲಯದ ಮೊರೆ ಹೋಗಿ ಜಪ್ತಿ ಖಾತೆ ಮುಕ್ತ ಗೊಳಿಸಿದ್ದ.
ಮುಟ್ಟು ಗೋಲು ಖಾತೆಗಳಿಂದ ಹಣ ಪಡೆಯುವ ಪ್ರಕ್ರಿಯೆ ತಿಳಿದ ಸಾಗರ್, ಪೊಲೀಸರ ಹೆಸರಲ್ಲಿ ಖಾತೆಗಳ ಬಗ್ಗೆ ಮಾಹಿತಿ ಪಡೆದು ಬಿಡುಗಡೆಗೆ ನ್ಯಾಯಾಲಯದ ಹೆಸರಿನಲ್ಲಿ ನಕಲಿ ಆದೇಶ ಸೃಷ್ಟಿಸಿ ಹಣ ದೋಚುತ್ತಿದ್ದ ಎನ್ನಲಾಗಿದೆ.