ರಾಜ್ಯದೊಳಗೆ ಮಾತ್ರ ಉಚಿತ ಪ್ರಯಾಣ – ಬಸ್ ಫುಲ್ ಕಲೆಕ್ಷನ್ ನಿಲ್

ಕಿರಣ ಮಾಸಣಗಿ

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಶಕ್ತಿ ಯೋಜನೆಯಡಿ ರಾಜ್ಯಾದ್ಯಂತ ಮಹಿಳೆಯರಿಗೆ ಉಚಿತ ಪ್ರಯಾಣ ಹಲವರಿಗೆ ವಿಭಿನ್ನ ಅನುಭವಕ್ಕೆ ಸಾಕ್ಷಿಯಾಗಿದೆ. ಫ್ರೀ ಎಂದು ಅಂತಾರಾಜ್ಯ ಬಸ್ ಹತ್ತಿದ ಮಹಿಳೆಯರಿಗೆ ಮುಜುಗರ ಉಂಟು ಮಾಡಿದರೆ, ಸಾಮಾನ್ಯ ಬಸ್‌ನಲ್ಲಿ ಮೊಬೈಲ್‌ನಲ್ಲಿ ಆಧಾರ್ ಕಾರ್ಡ್ ಫೋಟೋ ತೋರಿಸಿದ ವ್ಯಕ್ತಿಗೆ ಕಂಡಕ್ಟರ್ ಗ್ರಹಚಾರ ಬಿಡಿಸಿದ್ದಾರೆ.

ಸರ್ಕ್ಯೂಲ‌ರ್ ಎಲ್ಲೈತಿ ತೋರಿಸಿ
ಉಚಿತ ಪ್ರಯಾಣ ಘೋಷಣೆಯಾದ ಬೆನ್ನಲ್ಲೇ ರಾಜ್ಯ ಸರ್ಕಾರಿ ಬಸ್‌ಗಳಲ್ಲಿ ಪುರುಷರು ಅಲ್ಪಸಂಖ್ಯಾತರಾದರೇ, ಮಹಿಳಾ ಪಾರಮ್ಯ ಹೆಚ್ಚಿದೆ. ಸಾಧಾರಣವಾಗಿ ಕನಿಷ್ಟ 40 ಜನರು ಬಸ್‌ನಲ್ಲಿದ್ದರೆ ಸುಮಾರು 30-32 ಜನ ಮಹಿಳೆಯರೇ ಇದ್ದು ಕಂಡಕ್ಟರ್ ಬ್ಯಾಗ್ ಖಾಲಿ, ಬಸ್ ಫುಲ್ ಎಂಬಂತಾಗಿದೆ. ಮತ್ತೊಂದೆಡೆ ಮಹಿಳೆಯರ ಉಚಿತ ಪ್ರಯಾಣಕ್ಕೆ ಅಗತ್ಯ ದಾಖಲೆಗಳನ್ನು ಕೈಯಲ್ಲಿ ಇಟ್ಟುಕೊಂಡು ಹೋಗಿ ಎಂದು ಬೊಬ್ಬೆ ಹೊಡೆದರೂ ಸಹ ಕೆಲವರು ಮೊಬೈಲ್ ಪೋಟೋ ಇದೆ. ಅದನ್ನೇ ನೋಡಿ ಫ್ರೀ ಟಿಕೆಟ್ ಕೊಡಿ ಎಂದು ಅಲ್ಲಲ್ಲಿ ಕಂಡಕ್ಟರ್ ಜೊತೆ ವಾಗ್ವಾದ ನಡೆಸಿದ ಹಲವು ಪ್ರಸಂಗಗಳು ಎದುರಾಗಿವೆ. ಕೆಲವರು ಟಿಕೆಟ್ ತೆಗೆಸಿದರೆ ಮತ್ತೆ ಕೆಲವರು ಇಂಥ ದಾಖಲೆ ತರಲೇಬೇಕೆಂಬ ಸರ್ಕ್ಯೂಲರ್ ಎಲ್ಲೈತಿ ತೋರಿಸಿ ಎಂದು ಕಂಡಕ್ಟರ್‌ಗಳನ್ನೇ ಧಬಾಯಿಸುತ್ತಿರುವ ಘಟನೆಗಳೂ ಕಂಡು ಬಂದಿವೆ.

ಹೆಣ್ಮಕ್ಕಳಿಗೆ ಫ್ರೀ ಇಲ್ಲ
ಅಂತರಾಜ್ಯ ಬಸ್ ಕಂಡಕ್ಟರ್‌ಗಳು ಇದೀಗ ಬಸ್ ಬಾಗಿಲಲ್ಲೇ ನಿಂತು ನೋಡ್ರಿ ಹೆಣ್ಮಕ್ಕಳಿಗೆ ಈ ಬಸ್‌ನಲ್ಲಿ ಫ್ರೀ ಇಲ್ಲ, ಇದು ಅಂತಾರಾಜ್ಯ ಬಸ್ ಅಂದರೆ ಗೋವಾಕ್ಕೆ ಹೋಗುತ್ತೆ, ಫ್ರೀ ಹೋಗಬೇಕೆನ್ನುವವರು ಬೇರೆ ಬಸ್‌ಗೆ ಹತ್ತಿ ಎಂದು ಗಳಿಗೆಗೊಮ್ಮೆ ತಮ್ಮ ಬಸ್ ವಿಶೇಷತೆ ಹೇಳಿಕೊಳ್ಳುತ್ತಿರುವುದು ಕಂಡು ಬಂತು.

ಅಲ್ಲದೇ ನಿರಂತರವಾಗಿ ವೇಗದೂತ ಮತ್ತು ಅಂತಾರಾಜ್ಯ ಬಸ್‌ಗಳು ಸಾಗಿ ಸ್ಥಳೀಯ ಬಸ್ ಕೊರತೆ ಕಾರಣದಿಂದ ಕೆಲ ಮಹಿಳೆಯರು, ಎಲ್ಲ ಬಸ್ಸಿನೋರು ಹಿಂಗ್ ಒಂದೊಂದ್ ಕಾರಣ ಹೇಳಿದರೆ ಹೆಂಗ್ರಿ, ಮತ್ ನಾವ್ ಯಾವ ಬಸ್ಸಿಗೆ ಹೋಗಬೇಕ್ ಅದನ್ನಾರ ಹೇಳೋ ಎಂದು ಅಂತಾರಾಜ್ಯ ಬಸ್ ಕಂಡಕ್ಟರ್‌ಗೆ ಪ್ರಶ್ನಿಸುತ್ತಿದ್ದಂತೆಯೇ ಪಕ್ಕಕ್ಕೆ ಬಂದು ನಿಂತ ಬಸ್ ತೋರಿಸಿ, ಆ ಬಸ್ಸಿಗೆ ಹೋಗ್ ತಾಯಿ ಎಂದು ಕಂಡಕ್ಟರ್ ಹೇಳುವಷ್ಟರಲ್ಲೇ ಸುಸ್ತಾಗಿದ್ದ.

ಪಾಸ್‌ ತೆಗೆಸಿ
ಇನ್ನು ಪ್ರತಿ ವರ್ಷ ಸುಮಾರು 17ಲಕ್ಷ ವಿದ್ಯಾರ್ಥಿನಿಯರು ಬಸ್‌ಪಾಸ್ ತೆಗೆಸಿ ಶಾಲೆ-ಕಾಲೇಜಿಗೆ ಸಂಚರಿಸುತ್ತಿದ್ದು, ಅವರಿಂದ ತಲಾ ಕನಿಷ್ಟ ರೂ.1000 ಸಾರಿಗೆ ಇಲಾಖೆಗೆ ಆದಾಯ ಬರುತ್ತಿದ್ದು, ಇದೀಗ ಮಹಿಳೆಯರಿಗೆ ಉಚಿತ ಪ್ರಯಾಣ ಘೋಷಣೆಯಾಗಿದ್ದೇ ತಡ ಬಹುತೇಕ ಶೇ.98ರಷ್ಟು ವಿದ್ಯಾರ್ಥಿನಿಯರು ಬಸ್ ಪಾಸ್‌ನ ಗೊಡವೆಗೇ ಹೋಗಿಲ್ಲ. ಇದರಿಂದಾಗಿ ಈ ಬಾರಿ ವಿದ್ಯಾರ್ಥಿ ಪಾಸ್ ಗಂಡು ಮಕ್ಕಳಿಗಷ್ಟೇ ಎಂಬುದು ಗಮನಿಸಬೇಕಾದ ಸಂಗತಿ.

ಒಟ್ಟಿನಲ್ಲಿ ಮಹಿಳೆಯರಿಗೆ ಉಚಿತ ಬಸ್ ಸಂಚಾರ ಕಂಡಕ್ಟರ್‌ಗಳಲ್ಲಿ ತಳಮಳ ಸೃಷ್ಟಿಸಿದರೆ, ಕಲೆಕ್ಷನ್ ಕೇಂದ್ರಿತವಾಗಿದ್ದ ವೇಗದೂತ, ನಾನ್ ಸ್ಟಾಪ್ ಬಸ್‌ಗಳು ಪುರುಷರಿಗಷ್ಟೇ ಸೀಮಿತವಾದರೆ, ಉಳಿದೆಲ್ಲಾ ಬಸ್‌ಗಳಲ್ಲಿ ಮಹಿಳೆಯರೇ ಪಾರಮ್ಯ ಮೆರೆಯುತ್ತಿದ್ದುದು ಸಹಜವಾಗಿತ್ತು.

ಸರ್ಕಾರದ ಘೋಷಣೆಗೆ ನಮ್ಮ ಅಭ್ಯಂತರವಿಲ್ಲ ಆದರೆ ಮಹಿಳೆಯರ ಪ್ರಶ್ನೆಗೆ ಉತ್ತರಿಸೋದು ಕಷ್ಟವಾಗಿದೆ. ಟಿಕೆಟ್ ಫ್ರೀ ಆದರೂ ಅವರ ಲಗೆಜ್ ಎತ್ತಲು ಮೂರು ಜನ ಬೇಕು. ಲಗೇಜ್ ಚಾರ್ಜ್ ಕೇಳಿದರೆ ಜಗಳ, ಇದಕ್ಕೆ ಪರಿಹಾರವೇ ಸವಾಲಾಗಿದೆ ಎಂದು ಕಂಡಕ್ಟರ್ ಲಕ್ಷ್ಮಣ ತಮ್ಮ ಅಳಲು ತೊಂಡಿಕೊಂಡರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!