ಉಚಿತ ಯೋಜನೆಗಳ ಏಟು: ಪೆಟ್ರೋಲ್‌, ಡೀಸೆಲ್‌ ಜೊತೆ ಬಸ್‌ ಟಿಕೆಟ್‌ ದರ ಏರಿಸಿದ ಪಂಜಾಬ್‌ ಸರಕಾರ!

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಉಚಿತ ಯೋಜನೆಗಳ ಮೊರೆಹೋದ ಪಂಜಾಬ್‌ ಸರ್ಕಾರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಇದೀಗ ಪೆಟ್ರೋಲ್‌ ಮತ್ತು ಡಿಸೇಲ್‌ ಮೇಲೆ ವ್ಯಾಟ್‌ ಹೆಚ್ಚಿಸಿ ವಿದ್ಯುತ್‌ ಸಬ್ಸಿಡಿಯನ್ನು ರದ್ದುಗೊಳಿಸಿದೆ.

ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಮೌಲ್ಯವರ್ಧಿತ ತೆರಿಗೆ (VAT) ಹೆಚ್ಚಳಕ್ಕೆ ಪಂಜಾಬ್ ಕ್ಯಾಬಿನೆಟ್ ಗುರುವಾರ ಅನುಮೋದನೆ ನೀಡಿದೆ. ಇದರಿಂದಾಗಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 61 ಪೈಸೆ ಮತ್ತು ಡೀಸೆಲ್ ಮೇಲೆ 92 ಪೈಸೆ ಏರಿಕೆಯಾಗಲಿದೆ.

7 ಕಿಲೋವ್ಯಾಟ್ ಲೋಡ್ ವರೆಗಿನ ವಿದ್ಯುತ್‌ ಬಳಕೆಗೆ ನೀಡಲಾಗುತ್ತಿದ್ದ ಸಬ್ಸಿಡಿಯನ್ನು ರದ್ದುಗೊಳಿಸಲಾಗಿದೆ. ಇದರ ಜೊತೆ ಬಸ್ ಟಿಕೆಟ್‌ ದರ ಪ್ರತಿ ಕಿ.ಮೀ.ಗೆ 23 ಪೈಸೆ ಏರಿಕೆ ಮಾಡಿದೆ.

ಮುಖ್ಯಮಂತ್ರಿ ಭಗವಂತ್ ಮಾನ್ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಸಂಪುಟದ ಚರ್ಚೆಯ ನಂತರ, ರಾಜ್ಯ ಹಣಕಾಸು ಸಚಿವ ಹರ್ಪಾಲ್ ಸಿಂಗ್ ಚೀಮಾ ಅವರು ವ್ಯಾಟ್ ಏರಿಸುವ ಮೂಲಕ ರಾಜ್ಯ ಹೆಚ್ಚುವರಿ ಆದಾಯವನ್ನು ಗಳಿಸುವ ಗುರಿಯನ್ನು ಹೊಂದಿದೆ ಎಂದು ಹೇಳಿದರು.

ವಿದ್ಯುತ್‌ ಸಬ್ಸಿಡಿಯನ್ನು ರದ್ದುಗೊಳಿಸಿದ ನಿರ್ಧಾರಗಳನ್ನು ಸಮರ್ಥಿಸಿಕೊಂಡ ಚೀಮಾ, ಇದರಿಂದ 1,500-1700 ಕೋಟಿ ರೂ. ಉಳಿಸಬಹುದು ಎಂದು ತಿಳಿಸಿದರು.

ಆಮ್ ಆದ್ಮಿ ಪಕ್ಷದ ನೇತೃತ್ವದ ಪಂಜಾಬ್ ಸರ್ಕಾರವು ಗೃಹಬಳಕೆದಾರರಿಗೆ ತಿಂಗಳಿಗೆ 300 ಯೂನಿಟ್ ಉಚಿತ ವಿದ್ಯುತ್ ನೀಡುತ್ತಿದ್ದು ಈ ಯೋಜನೆ ಮುಂದುವರಿಯಲಿದೆ. ಕಾಂಗ್ರೆಸ್‌ ಸರ್ಕಾರ ಜಾರಿಗೆ ತಂದಿದ್ದ ಸಬ್ಸಿಡಿ ಮಾತ್ರ ಈಗ ರದ್ದುಗೊಂಡಿದೆ.

ಹಿಮಾಚಲದಂತೆ ಪಂಜಾಬ್‌ ಉಚಿತ ಯೋಜನೆಗಳಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಸೆ.4 ರವರೆಗೆ ಸರ್ಕಾರಿ ನೌಕರರಿಗೆ ಸಂಬಳ ಪಾವತಿಯಾಗಿರಲಿಲ್ಲ. ಮಾರ್ಚ್‌ನಲ್ಲಿ ಮಂಡನೆಯಾದ ಬಜೆಟ್‌ ಭಾಷಣದಲ್ಲಿ ಹರ್ಪಾಲ್ ಚೀಮಾ ಅವರು 2024-25 ರ ಆರ್ಥಿಕ ವರ್ಷದ ಅಂತ್ಯದ ವೇಳೆಗೆ ಪಂಜಾಬ್‌ನ ಸಾಲವು 3.74 ಲಕ್ಷ ಕೋಟಿ ರೂ.ಗೆ ಏರಿಕೆಯಾಗಬಹುದು ಎಂದು ತಿಳಿಸಿದ್ದರು.

- Advertisement - Skool Shine Skool Shine

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!