ಹೊಸದಿಗಂತ ಡಿಜಿಟಲ್ ಡೆಸ್ಕ್:
ತಿರುಪತಿ ಲಡ್ಡು ಪ್ರಸಾದಕ್ಕೆ ಪ್ರಾಣಿಯ ಕೊಬ್ಬಿನ ಮಿಶ್ರಣ ತುಪ್ಪ ಹಾಕಿದ್ದಾರೆ. ಈ ಬೆಳವಣಿಗೆಯಿಂದ ಖೇದವಾಗಿದೆ ಎಂದು ಉಡುಪಿಯ ಪೇಜಾವರ ಮಠದ ವಿಶ್ವ ಪ್ರಸನ್ನ ಸ್ವಾಮೀಜಿ ಹೇಳಿದ್ದಾರೆ.
ತಿರುಪತಿ ಲಡ್ಡು ವಿವಾದದ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರಸಾದದಲ್ಲಿ ಮೀನಿನ ಎಣ್ಣೆ, ಹಂದಿಯ ಕೊಬ್ಬು, ಹಸುವಿನ ಕೊಬ್ಬು ಬಳಸಿದ್ದಾರೆ. ಇದು ಹಿಂದು ಸಮಾಜಕ್ಕೆ ಬಗೆದಿರುವ ದೊಡ್ಡ ಅಪಚಾರ. ಇದು ದೇವರಿಗೆ ಬಗೆದಿರುವ ಅಪಚಾರ. ಸರ್ಕಾರವೇ ಈ ಕೃತ್ಯ ನಡೆಸಿರುವುದು ಖಂಡನಾರ್ಹ ಎಂದು ಕಿಡಿಕಾರಿದರು.
ತಿರುಪತಿಯ ಶ್ರೀನಿವಾಸ ದೇವರು, ಗೋವಿನ ರಕ್ಷಣೆಗೆ ಅವತರಿಸಿದವ. ಕ್ಷೇತ್ರದಲ್ಲಿ ಹಸು ಹುತ್ತಕ್ಕೆ ಹಾಲು ಎರೆಯುತ್ತಿತ್ತಂತೆ. ಮಾಲೀಕ ಹಸುವಿನ ಮೂಲಕ ಹುತ್ತವನ್ನು ಹೊಡೆಯಲು ಬಂದನಂತೆ. ಆಗ ಹುತ್ತದಿಂದ ಮೇಲೆ ಬಂದ ಶ್ರೀನಿವಾಸ ಮಾಲೀಕನ ಏಟಿಗೆ ಮೈಯೊಡ್ಡಿದನಂತೆ. ಹಸುವನ್ನು ರಕ್ಷಿಸಿದ ಶ್ರೀನಿವಾಸ ಅನ್ನೋದು ಇತಿಹಾಸ. ಅಂತಹ ಶ್ರೀನಿವಾಸ ದೇವರಿಗೆ ಹಸುವಿನ ಕೊಬ್ಬಿನ ಪ್ರಸಾದ ನೀಡಿದ್ದೀರಿ. ಇದೊಂದು ಬಹುದೊಡ್ಡ ಅಪರಾಧವಾಗಿದೆ. ಹಿಂದುಗಳ ಧಾರ್ಮಿಕ ಶ್ರದ್ಧೆಯ ಮೇಲಿನ ಹಲ್ಲೆ ಇದಾಗಿದೆ. ಮನೆಗಳಲ್ಲಿ ಕೂಡ ಇಂತಹ ತುಪ್ಪ ಬಳಸುವುದಿಲ್ಲ. ಉಪಯೋಗಕ್ಕೆ ಅನರ್ಹವಾದ ತುಪ್ಪವನ್ನು ದೇವಾಲಯಕ್ಕೆ ಬಳಸಿದ್ದೀರಿ. ಇಂತಹ ತುಪ್ಪ ತಯಾರಿಸುವ ಅಡ್ಡಗಳನ್ನು ಕಂಡುಹಿಡಿದು ತನಿಖೆ ನಡೆಸುವುದು ಸರ್ಕಾರದ ಕರ್ತವ್ಯ ಎಂದರು.
ಧಾರ್ಮಿಕ ಶ್ರದ್ಧಾ ಕೇಂದ್ರಗಳು, ಸರ್ಕಾರದ ಹಿಡಿತದಲ್ಲಿ ಇರಬಾರದು. ಶ್ರದ್ಧಾ ಕೇಂದ್ರಗಳು ಹಿಂದು ಸಮಾಜದ ಕೈಯಲ್ಲಿರಬೇಕು. ಸರ್ವೋಚ್ಚ ನ್ಯಾಯಾಲಯದ ತೀರ್ಪು ಹೀಗೆ ಹೇಳಿದೆ. ತಡ ಮಾಡದೆ ಸರ್ಕಾರದ ಸ್ವಾಧೀನದಿಂದ ದೇಗುಲ ಮುಕ್ತಗೊಳಿಸಿ. ಹಿಂದುಗಳ ಸಂಸ್ಥೆಗೆ ತಿರುಪತಿ ದೇವಾಲಯದ ಆಡಳಿತ ನೀಡಿ. ಇನ್ನು ಮುಂದೆ ಇಂತಹ ಘಟನೆ ಮರುಕಳಿಸಬಾರದು ಎಂದು ವಾಗ್ದಾಳಿ ನಡೆಸಿದರು.