ಹಳೆ ಸೀರೆಯಿಂದ ಕಾಡುಪ್ರಾಣಿ ಕಾಟಕ್ಕೆ ಮುಕ್ತಿ!

– ಸುಧೀರ ನಾಯರ್

ಬನವಾಸಿ: ಮಲೆನಾಡು, ಅರೆಮಲೆನಾಡಿನ ಕೃಷಿಕರಿಗೆ ಕಾಡುಪ್ರಾಣಿ ಕಾಟವೇ ಜಾಸ್ತಿ. ಅದರಲ್ಲಿಯೂ ಕಾಡು ಹಂದಿಗಳ ಕಾಟ ಇದ್ದರೆ ರೈತರು ಬೆಳೆ ಬೆಳೆಯುವುದೇ ಕಷ್ಟ. ಈ ಹಂದಿ ಕಾಟಕ್ಕೆ ಬನವಾಸಿ ಸಮೀಪದ ಯಡೂರಬೈಲ್ ಗ್ರಾಮದ ರೈತ ಹನಮಂತಪ್ಪ ಮಡ್ಲೂರು ಹೊಸ ಪ್ರಯೋಗ ನಡೆಸಿ ಯಶಸ್ವಿಯಾಗಿದ್ದಾರೆ.

ಉಪಯೋಗ ಮಾಡಿದ ಹಳೆ ಸೀರೆಯನ್ನು ಕೃಷಿ ಕ್ಷೇತ್ರಕ್ಕೆ ತಡೆ ಗೋಡೆಯಾಗಿ ಅವರು ನಿರ್ಮಿಸಿದ್ದಾರೆ. ಇದರಿಂದಾಗಿ ಹಂದಿಗಳು ಕೃಷಿ ಭೂಮಿಯೆಡೆಗೆ ಬರುತ್ತಿಲ್ಲ. ಬಣ್ಣ ಬಣ್ಣದ ಸೀರೆಗಳನ್ನು ಕಂಡು ಹಂದಿಗಳು ಹೆದರುತ್ತಿವೆ ಎನ್ನುತ್ತಾರೆ ರೈತ ಹನುಮಂತಪ್ಪ ಮಡ್ಲೂರ.

ಹಂದಿಗಳು ಬೆಳೆದ ಬೆಳೆಯನ್ನು ತಿನ್ನುವುದಕ್ಕಿಂತ ನಾಶ ಮಾಡುವುದೇ ಜಾಸ್ತಿ. ಭತ್ತದ ಗದ್ದೆಗಳು ಕಂಡರೆ ಸಾಕು ಓಡಾಡಿ ಕಟಾವು ಮಾಡಲು ಸಾಧ್ಯವಾಗದ ಸ್ಥಿತಿ ನಿರ್ಮಿಸುತ್ತವೆ. ವಿದ್ಯುತ್ ತಂತಿ ಬೇಲಿಯನ್ನು ಸಹ ಹಾಕಿ ನೋಡಿದರು ಯಾವುದೇ ಪ್ರಯೋಜನವಾಗಲಿಲ್ಲ. ಆದರೆ, ಸೀರೆಯ ಬೇಲಿ ಎಲ್ಲಕ್ಕಿಂತ ಉತ್ತಮ ಎಂಬುದು ಮಡ್ಲೂರು ಅವರ ಅಭಿಪ್ರಾಯ.

ರೈತ ಹನುಮಂತಪ್ಪ ಮಡ್ಲೂರು ಕೃಷಿಯ ಹೊಸ ಸಾಧ್ಯತೆಯ ಶೋಧದಲ್ಲಿ ಎತ್ತಿದ ಕೈ. ಹಾವೇರಿ ಜಿಲ್ಲೆಯ ಮಡ್ಲೂರಿನವರಾದ ಅವರು ಕೂಲಿ ಕೆಲಸಕ್ಕಾಗಿ ಬನವಾಸಿಗೆ ಆಗಮಿಸಿದವರು. ಇಲ್ಲಿಯ ಕೃಷಿ, ಕೃಷಿ ಸಾಧ್ಯತೆಯ ಹೊಸ ಉತ್ಸಾಹದೊಂದಿಗೆ ಯಡಿಯೂರಬೈಲಿನಲ್ಲಿ ಮೂರು ಎಕರೆ ಒಣ ಭೂಮಿ ಖರೀದಿಸಿ ಕೃಷಿ ಆರಂಭಿಸಿ ಸಾಧನೆಯ ಒಂದೊಂದೇ ಮೆಟ್ಟಿಲೇರಿದರು.

ಮೂರು ಎಕರೆ ಭೂಮಿಯಲ್ಲೇ 50ಕ್ಕೂ ಅಧಿಕ ಬೆಳೆ, ವ್ಯವಸ್ಥಿತ ನೀರು ನಿರ್ವಹಣೆ ಮೂಲಕ ರಾಜ್ಯಕ್ಕೆ ಮಾದರಿಯಾಗಿದ್ದಾರೆ. ಅವರ ಮನೆಯ ಹಳೆಯ ಸೀರೆಗಳು ಖಾಲಿ ಆದಾಗ ಮುಂಡಗೋಡಿನಿಂದಲೂ ಹಳೆ ಸೀರೆ ತಂದು ಬೇಲಿಗೆ ಬಳಸಿದ್ದಾರೆ. ಸೀರೆ ಬೇಲಿ ಮೂಲಕ ಹಂದಿ ನಿಯಂತ್ರಿಸುವ ಯತ್ನವನ್ನು ಹಲವು ರೈತರು ತಮ್ಮ ಕೃಷಿ ಭೂಮಿಗೂ ಅಳವಡಿಸಿಕೊಂಡಿದ್ದಾರೆ. ಈ ಮೂಲಕ ಹಂದಿ ಕಾಟದಿಂದ ಮುಕ್ತಿ ಹೊಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!