Sunday, December 3, 2023

Latest Posts

ದಾಖಲೆಯ 14 ನೇ ಬಾರಿಗೆ ಫ್ರೆಂಚ್ ಓಪನ್ ಗೆದ್ದ ನಡಾಲ್! ಟೆನ್ನಿಸ್‌ ದಿಗ್ಗಜನಿಗೆ ಒಲಿದ 22ನೇ ಗ್ರ್ಯಾನ್ ಸ್ಲಾಂ ಕಿರೀಟ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ 
ಟೆನ್ನಿಸ್‌ ಜಗತ್ತಿನ ದಂತಕತೆ ಸ್ಪೇನ್‍ನ ರಫೆಲ್ ನಡಾಲ್ ಫ್ರೆಂಚ್ ಓಪನ್ ಗ್ರ್ಯಾನ್‍ ಸ್ಲಾಂ ಟೆನಿಸ್ ಟೂರ್ನಿಯ ಕಿರೀಟ ಮುಡಿಗೇರಿಸಿಕೊಂಡಿದ್ದು, ಈ ಮೂಲಕ ದಾಖಲೆಯ 22ನೇ ಗ್ರ್ಯಾನ್ ಸ್ಲಾಂ ಗೆದ್ದ ಸಾಧನೆ ಮೆರೆದಿದ್ದಾರೆ.
ರೋಲ್ಯಾಂಡ್ ಗ್ಯಾರೋಸ್‍ನ ಫಿಲಿಪ್ ಚಾಟ್ರಿಯರ್ ಕೋರ್ಟ್‍ನಲ್ಲಿ ಭಾನುವಾರ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಫೈನಲ್‍ನಲ್ಲಿ ‘ ಕಿಂಗ್‌ ಆಫ್ ಕ್ಲೇ ಕೋರ್ಟ್’‌ ಖ್ಯಾತಿಯ ರಫಾ, ನಾರ್ವೆಯ ಕಾಸ್ಪರ್ ರೂಡ್ ವಿರುದ್ಧ 6-3, 6-3, 6-0 ರ ನೇರ ಸೆಟ್‍ಗಳಿಂದ ದಿಗ್ವಿಜಯ ಸಾಧಿಸುವ ಮೂಲಕ ತಮ್ಮ 14ನೇ ಫ್ರೆಂಚ್ ಓಪನ್ ಟೂರ್ನಿ ಗೆಲುವನ್ನು ಸಂಭ್ರಮಿಸಿದರು.

ಕೆಲತಿಂಗಳ ಹಿಂದೆ ಆಸ್ಟ್ರೇಲಿಯನ್ ಓಪನ್ ಗೆದ್ದು 21ನೇ ಟ್ರೋಫಿಗೆ ಮತ್ತಿಕ್ಕಿದ್ದ ನಡಾಲ್, ಫ್ರೆಂಚ್‌ ಓಪನ್‌ ನಲ್ಲಿ ವೀಕ್ಷಣೆಗೆ ನೆರೆದಿದ್ದ ಅಪಾರ ಅಭಿಮಾನಿಗಳ ನಿರೀಕ್ಷೆಯಂತೆ ಪ್ರೆಂಚ್‌ ಒಪನ್‌ ಟ್ರೋಫಿಯನ್ನು ಗೆದ್ದುಕೊಂಡರು. ನಡಾಲ್‌ ಅಪಾರ ಅನುಭವದ ಮುಂದೆ 23 ವರ್ಷದ ರೂಡ್ ಆಟ ನಡೆಯಲಿಲ್ಲ. ಗ್ರ್ಯಾನ್‍ಸ್ಲಾಂ ಪ್ರಶಸ್ತಿ ಗೆದ್ದ ನಾರ್ವೆಯ ಚೊಚ್ಚಲ ಆಟಗಾರ ಎನಿಸಿಕೊಳ್ಳುವ ರೂಡ್‌ ಮಹದಾಸೆ ಕೊಂಚದರಲ್ಲೇ ತಪ್ಪಿಹೋಯಿತು. ಈ ಮೂಲಕ ಫ್ರೆಂಚ್ ಓಪನ್‍ನಲ್ಲಿ ಪ್ರಶಸ್ತಿ ಗೆದ್ದ ಅತ್ಯಂತ ಹಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ನಡಾಲ್‍ ಪಾತ್ರರಾದರು. ಸ್ಪೇನ್‍ನವರೇ ಆದ ಗಿಮೆನೊ ಹೆಸರಲ್ಲಿದ್ದ 50 ವರ್ಷಗಳಷ್ಟು ಹಳೆಯ ದಾಖಲೆಯನ್ನು ಅವರು ಮುರಿದರು. ಗಿಮೆನೊ 1972 ರಲ್ಲಿ ತಮ್ಮ 34ನೇ ವಯಸ್ಸಿನಲ್ಲಿ ಫ್ರೆಂಚ್‌ ಓಪನ್‌ ಗೆದ್ದುಕೊಂಡಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!