ಇನ್ಮುಂದೆ ಸರ್ಕಾರಿ ಆಸ್ಪತ್ರೆಯ ವೈದ್ಯರಿಗೆ ಬೆಳಗ್ಗೆ 9 ರಿಂದ ಸಂಜೆ 4 ಗಂಟೆವರೆಗೆ ಕಡ್ಡಾಯ ಡ್ಯೂಟಿ: ಸಚಿವ ಪಾಟೀಲ್ ಸೂಚನೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸರ್ಕಾರಿ ಆಸ್ಪತ್ರೆಗಳಲ್ಲಿ ಕರ್ತವ್ಯ ನಿರ್ವಹಿಸುವ ವೈದ್ಯರು ಇನ್ನು ಮುಂದೆ ಬೆಳಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆವರೆಗೆ ಕಡ್ಡಾಯವಾಗಿ ಕಾರ್ಯ ನಿರ್ವಹಿಸಲಿದ್ದು, ಯಾವುದೇ ಕಾರಣಕ್ಕೂ ಬೇರೆ ಸ್ಥಳಗಳಲ್ಲಿ ಪ್ರಾಕ್ಟೀಸ್ ಮಾಡುವಂತಿಲ್ಲ ಎಂದು ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ ಮತ್ತು ಜೀವನೋಪಾಯ ಸಚಿವ ಡಾ. ಶರಣ್ ಪ್ರಕಾಶ್ ಪಾಟೀಲ್ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ವಿಧಾನಪರಿಷತ್‍ನಲ್ಲಿ ಸೋಮವಾರ ಕಾಂಗ್ರೆಸ್ ಸದಸ್ಯೆ ಬಲ್ಕಿಶ್ ಬಾನು ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಸರ್ಕಾರಿ ಆಸ್ಪತ್ರೆಗಳಲ್ಲಿ ಕಾರ್ಯ ನಿರ್ವಹಿಸುವ ವೈದ್ಯರು ತಮ್ಮ ಕರ್ತವ್ಯದ ಸಂದರ್ಭದಲ್ಲೇ ಬೇರೆ ಕಡೆ ಕರ್ತವ್ಯ ನಿರ್ವಹಿಸುತ್ತಾರೆ ಎಂಬ ಆರೋಪ ಕೇಳಿಬಂದಿತ್ತು. ಹೀಗಾಗಿ ಇನ್ಮುಂದೆ ಬೆಳಿಗ್ಗೆ 9 ಗಂಟೆಗೆ ಕರ್ತವ್ಯಕ್ಕೆ ಹಾಜರಾದರೆ ಸಂಜೆ 4 ಗಂಟೆವರೆಗೂ ಸರ್ಕಾರಿ ಆಸ್ಪತ್ರೆಗಳಲ್ಲೇ ಕರ್ತವ್ಯ ನಿರ್ವಹಿಸಬೇಕೆಂದು ಸೂಚಿಸಲಾಗಿದೆ ಎಂದರು.

ಈ ಮೊದಲು 2 ಗಂಟೆಗಳ ನಂತರ 1 ಗಂಟೆ ಕಾರ್ಯ ನಿರ್ವಹಿಸಲು ಅವಕಾಶ ನೀಡಲಾಗಿತ್ತು. ಆದರೆ ವೈದ್ಯರು 1 ಗಂಟೆ ಮುಂಚಿತವಾಗಿ ಹೋಗುವುದು ಇಲ್ಲವೇ 1 ಗಂಟೆ ತಡವಾಗಿ ಬರುತ್ತಿದ್ದಾರೆಂಬ ಆರೋಪ ಕೇಳಿಬರುತ್ತಿದೆ. ಈ ವ್ಯವಸ್ಥೆಯನ್ನು ದುರ್ಬಳಕೆ ಮಾಡುತ್ತಿದ್ದು, ಇದನ್ನು ತಡೆಗಟ್ಟಲು ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಹೇಳಿದರು.

ಈಗಾಗಲೇ ಎಲ್ಲಾ ಸರ್ಕಾರಿ ಆಸ್ಪತ್ರೆಗಳ ಮುಖ್ಯಸ್ಥರಿಗೆ ಅಧಿಸೂಚನೆ ಮೂಲಕ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಲು ಸೂಚಿಸಲಾಗಿದೆ. ಒಂದು ವೇಳೆ ಯಾರಾದರೂ ಉಲ್ಲಂಘನೆ ಮಾಡಿರುವುದು ಕಂಡುಬಂದರೆ ಶಿಸ್ತುಕ್ರಮ ಜರುಗಿಸುವುದಾಗಿ ಸಚಿವರು ಎಚ್ಚರಿಸಿದರು.

ಜೊತೆಗೆ ಇನ್ಮುಂದೆ ವೈದ್ಯರು ಕಡ್ಡಾಯವಾಗಿ ಕರ್ತವ್ಯಕ್ಕೆ ಹಾಜರಾದ ವೇಳೆ ನಾಲ್ಕು ಬಾರಿ ಬಯೋಮೆಟ್ರಿಕ್‍ಗೆ ತಮ್ಮ ಹಸ್ತಮುದ್ರೆ ಹಾಕಬೇಕು. ಬೆಳಗ್ಗೆ 9 ಗಂಟೆ, ಮಧ್ಯಾಹ್ನ 2, 3 ಮತ್ತು 4 ಗಂಟೆಗೆ ಕಡ್ಡಾಯವಾಗಿ ಹಾಕಲೇಬೇಕು. ಇದರ ಆಧಾರಿತವಾಗಿಯೇ ಸಂಬಳವನ್ನು ನೀಡಲಾಗುವುದು. ಈ ಕುರಿತು ಮುಖ್ಯಸ್ಥರ ಜೊತೆಯೂ ಚರ್ಚೆ ಮಾಡಲಾಗಿದೆ. ರೋಗಿಗಳಿಗೆ ಸಕಾಲಕ್ಕೆ ಸರಿಯಾಗಿ ಚಿಕಿತ್ಸೆ ನೀಡುವುದು ಸರ್ಕಾರದ ಮೊದಲ ಆದ್ಯತೆ ಎಂದು ಡಾ. ಪಾಟೀಲ್‌ ಹೇಳಿದರು.

ರೋಗಿಗಳಿಗೆ ಒಪಿಡಿ ವ್ಯವಸ್ಥೆ
ಪ್ರತಿಯೊಂದು ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಒಪಿಡಿ ವ್ಯವಸ್ಥೆಯನ್ನು ಕಡ್ಡಾಯ ಮಾಡಲಾಗಿದೆ. ಅಗತ್ಯವಿರುವ ರೋಗಿಗಳಿಗೆ ಒಪಿಡಿ ನೀಡಬೇಕೆಂದು ಸೂಚನೆ ಕೊಡಲಾಗಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ದಿನದಿಂದ ದಿನಕ್ಕೆ ಉತ್ತಮವಾದ ವೈದ್ಯಕೀಯ ಸೌಲಭ್ಯ ಸಿಗುತ್ತಿದೆ. ಎಲ್ಲಿಯೂ ಕೊರತೆಯಾಗದಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

 

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!