ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಹಾರಾಷ್ಟ್ರದಲ್ಲಿ 10ನೇ ತರಗತಿಯಲ್ಲಿ ಗಣಿತ ಮತ್ತು ವಿಜ್ಞಾನ ವಿಷಯಗಳಲ್ಲಿ ಉತ್ತೀರ್ಣ ಹೊಂದಲು ಕನಿಷ್ಠ ಅಂಕವನ್ನು 20ಕ್ಕೆ ಇಳಿಸಲಾಗಿದೆ ಎಂದು ರಾಜ್ಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ ನಿರ್ಧರಿಸಿದೆ.
10ನೇ ತರಗತಿಯಲ್ಲಿ ಗಣಿತ ಮತ್ತು ವಿಜ್ಞಾನ ವಿಷಯಗಳಲ್ಲಿ ಉತ್ತೀರ್ಣ ಹೊಂದಲು ಕನಿಷ್ಠ ಅಂಕವನ್ನು (ಪಾಸಿಂಗ್ ಮಾರ್ಕ್ಸ್) 35 ರಿಂದ 20ಕ್ಕೆ ಇಳಿಸಿದೆ. ಈ ಕುರಿತು ರಾಜ್ಯದ ಹೊಸ ಪಠ್ಯಕ್ರಮದಲ್ಲಿ ಪ್ರಕಟಿಸಲಾಗುವುದು ಎಂದು ತಿಳಿಸಿದೆ.
ಈ ನಿರ್ಧಾರಕ್ಕೆ ಸಂಬಂಧಿಸಿದಂತೆ ಮಂಡಳಿಯ ಅಧ್ಯಕ್ಷ ಶರದ್ ಗೋಸಾವಿ ಮಾತನಾಡಿ, ವಿದ್ಯಾರ್ಥಿಗಳು ಕಡಿಮೆ ಅಂಕವನ್ನು ಹೊಂದಿದ್ದರೂ ಕೂಡ ಉತ್ತೀರ್ಣರಾಗುತ್ತಾರೆ. ಜೊತೆಗೆ ಕಡಿಮೆ ಅಂಕಗಳನ್ನು ಗಳಿಸಿದರೂ ಕೂಡ ಪ್ರಮಾಣಪತ್ರದಲ್ಲಿ `ಉತ್ತೀರ್ಣ’ ಎಂದೇ ಉಲ್ಲೇಖವಾಗಿರುತ್ತದೆ. ಆದರೆ ಗಣಿತ ಹಾಗೂ ವಿಜ್ಞಾನ ವಿಷಯದಲ್ಲಿ ಕಡಿಮೆ ಅಂಕವನ್ನು ಗಳಿಸಿದರೇ ಉನ್ನತ ಶಿಕ್ಷಣವನ್ನು ಮುಂದುವರೆಸಲು ಸಾಧ್ಯವಾಗುವುದಿಲ್ಲ. ಗಣಿತ ಹಾಗೂ ವಿಜ್ಞಾನ ವಿಷಯಗಳ ಯಾವುದೇ ಕೋರ್ಸ್‌ಗಳನ್ನು ತೆಗೆದುಕೊಳ್ಳಲು ಕಷ್ಟವಾಗುತ್ತದೆ.ಒಂದು ವೇಳೆ ಕನಿಷ್ಠ ಅಂಕಗಳನ್ನು ಗಳಿಸುವಲ್ಲಿ ವಿಫಲವಾದರೆ ವಿಜ್ಞಾನ ಹಾಗೂ ಗಣಿತ ವಿಷಯಗಳನ್ನು ತೆಗೆದುಕೊಳ್ಳದೇ ಕಲಾ ವಿಭಾಗದ ವಿಷಯಗಳನ್ನು ತೆಗೆದುಕೊಳ್ಳುವಲ್ಲಿ ಪ್ರೇರಣೆ ನೀಡಿದಂತಾಗುತ್ತದೆ. ಹೊಸ ಪಠ್ಯಕ್ರಮವನ್ನು ರಾಜ್ಯಾದ್ಯಂತ ಜಾರಿಗೆ ತಂದ ಬಳಿಕ ಉತ್ತೀರ್ಣ ಅಂಕಗಳ ಬದಲಾವಣೆಯನ್ನು ಪರಿಚಯಿಸಲಾಗುವುದು ಎಂದರು.