ಇನ್ಮುಂದೆ ಲಕ್ಷದ್ವೀಪ ಮತ್ತಷ್ಟು ಹತ್ತಿರ: ಬೆಂಗಳೂರಿನಿಂದ ಶುರುವಾಗಲಿದೆ ವಿಮಾನ ಸೇವೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಲಕ್ಷದ್ವೀಪಕ್ಕೆ ಪ್ರವಾಸ ಹೋಗಬಯಸುವ ಸಿಲಿಕಾನ್ ಜನರಿಗೆ ಗುಡ್ ನ್ಯೂಸ್. ಇನ್ಮುಂದೆ ಬೆಂಗಳೂರಿನಿಂದ ಲಕ್ಷದ್ವೀಪಕ್ಕೆ ನೇರ ಫ್ಲೈಟ್ (Bengaluru to Lakshadweep direct flight) ಆರಂಭಿಸಲಾಗುತ್ತಿದೆ.

ಹೌದು, ಇಂಡಿಗೋ ಸಂಸ್ಥೆ ಲಕ್ಷದ್ವೀಪದ ಅಗತ್ತಿ ವಿಮಾನ ನಿಲ್ದಾಣಕ್ಕೆ (Agatti airport) ಬೆಂಗಳೂರಿನಿಂದ ನೇರ ಫ್ಲೈಟ್ ಸೇವೆಯನ್ನು ಮಾರ್ಚ್ 31ರಿಂದ ನಡೆಸುತ್ತಿದೆ. ಈ ವಿಮಾನದಲ್ಲಿ 78 ಸೀಟುಗಳು ಇರುತ್ತವೆ. ಬೆಂಗಳೂರಿನಿಂದ ಈ ಫ್ಲೈಟ್​ನಲ್ಲಿ ಹೊರಟರೆ ಕೊಚ್ಚಿಯಲ್ಲಿ ಇಳಿದು ವಿಮಾನ ಬದಲಿಸುವ ಅಗತ್ಯ ಇರುವುದಿಲ್ಲ. ನೇರವಾಗಿ ಅಗತ್ತಿ ವಿಮಾನ ನಿಲ್ದಾಣ ತಲುಪಬಹುದು.

ಈ ಮುಂಚೆ ಲಕ್ಷದ್ವೀಪಕ್ಕೆ ವಿಮಾನದ ಮೂಲಕ ಹೋಗಬೇಕೆಂದರೆ ಕನಿಷ್ಠ ಎರಡು ವಿಮಾನಗಳನ್ನಾದರೂ ಹತ್ತಬೇಕಿತ್ತು. ಕೊಚ್ಚಿ ವಿಮಾನ ನಿಲ್ದಾಣಕ್ಕೆ ಹೋಗಿ ಅಲ್ಲಿಂದ ಬೇರೆ ಫ್ಲೈಟ್​ನಲ್ಲಿ ಲಕ್ಷದ್ವೀಪಕ್ಕೆ ಹೋಗಬೇಕಿತ್ತು. ಲಕ್ಷದ್ವೀಪದಲ್ಲಿ ಸದ್ಯ ವಿಮಾನ ನಿಲ್ದಾಣ ಇರುವುದು ಅಗತ್ತಿ ದ್ವೀಪದಲ್ಲಿ ಮಾತ್ರವೇ. ಮಿನಿಕಾಯ್ ದ್ವೀಪದಲ್ಲಿ ಇನ್ನೊಂದು ವಿಮಾನ ನಿಲ್ದಾಣ ನಿರ್ಮಿಸುವ ಯೋಜನೆಯನ್ನು ಸರ್ಕಾರ ಹಾಕಿದೆ. ಈ ಮಿನಿಕೋಯ್ ಏರ್ಪೋರ್ಟ್ ಅನ್ನು ಮಿಲಿಟರಿ ವಾಯು ನೆಲೆಯಾಗಿ ಮಾಡಿಕೊಳ್ಳುವ ಸಾಧ್ಯತೆ ಇದೆ.

ಇದೀಗ ಲಕ್ಷದ್ವೀಪದತ್ತ ಭಾರತೀಯರ ಆಸಕ್ತಿ ಕೆರಳಿಸಿದೆ. ಜನವರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಲಕ್ಷದ್ವೀಪಕ್ಕೆ ಭೇಟಿ ಕೊಟ್ಟಾಗಿನಿಂದ ಅದು ಟ್ರೆಂಡಿಂಗ್​ನಲ್ಲಿ ಇದೆ. ಮಾಲ್ಡೀವ್ಸ್ ಪ್ರವಾಸಕ್ಕೆ ಹೋಗಬಯಸುವರಲ್ಲಿ ಬಹಳಷ್ಟು ಜನರು ತಮ್ಮ ಪ್ಲಾನ್ ಬದಲಿಸಿ ಲಕ್ಷದ್ವೀಪದತ್ತ ಮನಸು ಮಾಡುತ್ತಿದ್ದಾರೆ ಎನ್ನುವಂತಹ ಸುದ್ದಿ ಇದೆ. ಹೀಗಾಗಿ, ಲಕ್ಷದ್ವೀಪಕ್ಕೆ ವಿಮಾನ ಸೇವೆಗೆ ಬೇಡಿಕೆ ಹೆಚ್ಚುತ್ತಿದೆ.

ಸದ್ಯ ಬೆಂಗಳೂರಿನಿಂದ ಅಲಾಯನ್ಸ್ ಏರ್ ಮತ್ತು ಇಂಡಿಗೋ ಏರ್ಲೈನ್ಸ್ ಸಂಸ್ಥೆಗಳು ಮಾತ್ರವೇ ಲಕ್ಷದ್ವೀಪಕ್ಕೆ ವಿಮಾನ ಹಾರಾಟ ಸೇವೆ ನಡೆಸುತ್ತಿರುವುದು. ಬೆಂಗಳೂರಿನಿಂದ ಟಿಕೆಟ್ ಬೆಲೆ ಒಬ್ಬರಿಗೆ 11,000 ರೂನಿಂದ 15,000 ರೂ ಆಗುತ್ತದೆ. ಆದರೆ ಲಕ್ಷದ್ವೀಪಕ್ಕೆ ನಾನ್​ಸ್ಟಾಪ್ ಇಂಡಿಗೋ ಫ್ಲೈಟ್​ನ ಟಿಕೆಟ್ ಬೆಲೆ ಕೇವಲ 6,999 ರೂ ಇದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!