ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತೀಯ ಜೀವ ವಿಮಾ ನಿಗಮದ (ಎಲ್ಐಸಿ) ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಒ) ಚಂದಾದಾರಿಕೆ ಆರಂಭವಾಗಿದೆ. ಈ ಪ್ರಕ್ರಿಯೆ ಮೇ 9ರಂದು ಮುಕ್ತಾಯಗೊಳ್ಳಲಿದೆ.
ಬಹುನಿರೀಕ್ಷಿತ ಭಾರತದ ಅತಿದೊಡ್ಡ ಐಪಿಒ ಅಂತಿಮವಾಗಿ ಆರಂಭವಾಗಲಿದ್ದು, ಹೂಡಿಕೆದಾರರು ಕಾತುರದಿಂದ ಕಾಯುತ್ತಿದ್ದಾರೆ.
ಈ ನಡುವೆ ಯಾರು ಎಲ್ಐಸಿ ಷೇರನ್ನು ಖರೀದಿ ಮಾಡಬಹುದು, ಯಾರು ಖರೀದಿ ಮಾಡುವಂತಿಲ್ಲ ಎಂಬ ಬಗ್ಗೆ ಹಲವಾರು ಮಂದಿಗೆ ಅನುಮಾನವಿದೆ.ಈ ಎಲ್ಐಸಿ ಐಪಿಒ ಮೂಲಕ ಕೇಂದ್ರ ಸರ್ಕಾರವು ನಿಗಮದಲ್ಲಿನ ತನ್ನ 3.5 ಪ್ರತಿಶತ ಪಾಲನ್ನು ಮಾರಾಟ ಮಾಡಲಿದೆ. ಪ್ರತಿ ಷೇರಿಗೆ ರೂ 902 – 949 ರ ಬೆಲೆ ಇದ್ದು ಒಟ್ಟು ಸುಮಾರು 21,000 ಕೋಟಿ ರೂಪಾಯಿಗಳನ್ನು ಸಂಗ್ರಹ ಮಾಡುವ ಗುರಿಯನ್ನು ಸರ್ಕಾರ ಹೊಂದಿದೆ.
ಯಾರು ಷೇರು ಖರೀದಿಸಬಹುದು
ಕೇಂದ್ರ ಸರ್ಕಾರವು ಎಲ್ಐಸಿಯಲ್ಲಿ 22,13,74,920 ಷೇರುಗಳನ್ನು ಮಾರಾಟ ಮಾಡುತ್ತಿದೆ. ಅಂದರೆ ಒಟ್ಟು ಸುಮಾರು 21,000 ಕೋಟಿ ರೂ. ಮೌಲ್ಯದ ಷೇರುಗಳನ್ನು ಎಲ್ಐಸಿ ಐಪಿಒ ಮೂಲಕ ಮಾರಾಟ ಮಾಡುತ್ತಿದೆ. ಈ ಆಫರ್ ಮೊದಲು ಚಿಲ್ಲರೆ ಖರೀದಿದಾರರಿಗೆ ತೆರೆದಿರುತ್ತದೆ. ಆಫರ್ನಲ್ಲಿರುವ 22.13 ಕೋಟಿ ಎಲ್ಐಸಿ ಷೇರುಗಳಲ್ಲಿ 9.88 ಕೋಟಿ ಷೇರುಗಳನ್ನು ಅರ್ಹ ಸಾಂಸ್ಥಿಕ ಖರೀದಿದಾರರಿಗೆ (ಬ್ಯಾಂಕ್, ವಿಮಾ ಕಂಪನಿ, ಇತ್ಯಾದಿ) ಮತ್ತು 2.96 ಕೋಟಿ ಷೇರುಗಳನ್ನು ಸಾಂಸ್ಥಿಕವಲ್ಲದ ಖರೀದಿದಾರರಿಗೆ ಕಾಯ್ದಿರಿಸಲಾಗಿದೆ. ಇದಲ್ಲದೆ, 15,81,249 ಷೇರುಗಳು ಮತ್ತು 2,21,37,492 ಷೇರುಗಳನ್ನು ಉದ್ಯೋಗಿಗಳು ಮತ್ತು ಪಾಲಿಸಿದಾರರಿಗೆ ಕಾಯ್ದಿರಿಸಲಾಗಿದೆ.
ಯಾರು ಖರೀದಿಸುವಂತಿಲ್ಲ?
ಎನ್ಆರ್ಐ ಪಾಲಿಸಿದಾರರು ಹಾಗೂ ಭಾರತದಲ್ಲಿ ವಾಸಿಸದ ಪಾಲಿಸಿದಾರರು ಪಾಲಿಸಿದಾರರಿಗೆ ಕಾಯ್ದಿರಿಸಿದ ಭಾಗದ ಅಡಿಯಲ್ಲಿ ಎಲ್ಐಸಿ ಐಪಿಒ ಅನ್ನು ಖರೀದಿ ಮಾಡಲು ಅರ್ಹರಾಗಿರುವುದಿಲ್ಲ. ಪಾಲಿಸಿದಾರರ ಮೀಸಲಾತಿ ವರ್ಗದ ಪ್ರಕಾರ, ಇದು ಜಂಟಿ ಹೋಲ್ಡರ್ ಪಾಲಿಸಿಯಾಗಿದ್ದರೆ, ಈಕ್ವಿಟಿ ಷೇರುಗಳಿಗೆ ಇಬ್ಬರಲ್ಲಿ ಒಬ್ಬರು ಮಾತ್ರ ಅರ್ಜಿ ಸಲ್ಲಿಸಬಹುದು.