Wednesday, August 17, 2022

Latest Posts

ಎನ್ಇಪಿಯಿಂದ ದೇಶದ ಪರಿಪೂರ್ಣ ಸಬಲೀಕರಣ ಸಾಧ್ಯ: ಸಚಿವ ಅಶ್ವತ್ಥನಾರಾಯಣ

 ಹೊಸ ದಿಗಂತ ವರದಿ, ಕಲಬುರಗಿ:

34 ವರ್ಷಗಳ ದೀರ್ಘ ಅಂತರದ ನಂತರ ಜಾರಿಗೆ ಬರುತ್ತಿರುವ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯು (ಎನ್ಇಪಿ) ರಾಜ್ಯ ಮತ್ತು ದೇಶದ ಪರಿಪೂರ್ಣ ಸಬಲೀಕರಣದ ಕನಸನ್ನು ನನಸಾಗಿಸಲಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದ್ದಾರೆ.

ಇಲ್ಲಿನ ಶ್ರೀ ಸಿದ್ಧಲಿಂಗೇಶ್ವರ ಬುಕ್ ಡಿಪೋ ಮತ್ತು ಪ್ರಕಾಶನ ಸಂಸ್ಥೆಯ 45ನೇ ವಾರ್ಷಿಕೋತ್ಸವ ಮತ್ತು 115 ಪುಸ್ತಕಗಳ ಲೋಕಾರ್ಪಣೆ ಸಮಾರಂಭದಲ್ಲಿ ಅವರು ಶನಿವಾರ ಮಾತನಾಡಿದರು.

ದೇಶವನ್ನು ಸದೃಢವಾಗಿ ಕಟ್ಟುವುದೇನಿದ್ದರೂ ಗುಣಮಟ್ಟದ ಶಿಕ್ಷಣದಿಂದ ಮಾತ್ರ ಸಾಧ್ಯ. ಇದಕ್ಕೆ ಯಾವುದೇ ಬೇರೆ ಉಪಕ್ರಮಗಳು ಸಾಟಿಯಾಗಲಾರವು. ಇದನ್ನು ಮನಗಂಡೇ ಎನ್ಇಪಿಯನ್ನು ಜಾರಿಗೆ ತರಲಾಗಿದೆ. ಇಂತಹ ಸಂದರ್ಭದಲ್ಲಿ ಇಲ್ಲಿನ ಪುಸ್ತಕ ಪ್ರಕಾಶನ ಸಂಸ್ಥೆಯು ಇದಕ್ಕೆ ಅನುಗುಣವಾಗಿ ಪಠ್ಯ ಮತ್ತು ಪರಾಮರ್ಶನಾ ಗ್ರಂಥಗಳನ್ನು ಪ್ರಕಟಿಸುತ್ತಿರುವುದು ಸ್ವಾಗತಾರ್ಹವಾಗಿದೆ ಎಂದು ಅವರು ಪ್ರಶಂಸಿಸಿದರು.

ಇಂದು ಕಲಿಕೆಯು ಆಧುನಿಕ ತಂತ್ರಜ್ಞಾನವನ್ನು ಆಧರಿಸಿದೆ. ಶಿಕ್ಷಣ ಕ್ಷೇತ್ರದಲ್ಲಿ ಇದನ್ನು ಅಳವಡಿಸಿಕೊಂಡಿದ್ದು, ಯುವಜನರಿಗೆ ಅಗತ್ಯ ಶಿಕ್ಷಣ ಮತ್ತು ಕೌಶಲ್ಯಗಳನ್ನು ಕಲಿಸಲಾಗುತ್ತಿದೆ. ಕನ್ನಡದಂತಹ ಭಾಷೆಗಳಲ್ಲೂ ಇವತ್ತು ಉನ್ನತ ಶಿಕ್ಷಣವನ್ನು ನಿರಾತಂಕವಾಗಿ ಕೊಡಬಹುದಾಗಿದೆ. ಈ ಮೂಲಕ ಕರ್ನಾಟಕವು ಉಜ್ವಲ ಅವಕಾಶಗಳ ರಾಜ್ಯವಾಗಿದೆ ಎಂದು ಸಚಿವರು ನುಡಿದರು.

ಎನ್ಇಪಿ ನೀತಿಯು ಶಿಕ್ಷಣದಲ್ಲಿ ಸ್ವಾತಂತ್ರ್ಯ ಮತ್ತು ಸ್ವಾಯತ್ತತೆಗಳನ್ನು ಮುನ್ನೆಲೆಗೆ ತರುತ್ತಿದೆ. ಇದರಿಂದ ಯುವಜನರು ಉದ್ಯೋಗಕ್ಕೆ ಬೇಕಾದ ಅರ್ಹತೆಗಳನ್ನು ಗಳಿಸಿಕೊಳ್ಳುತ್ತಿದ್ದು, ಸಮಾನತೆಯನ್ನು ಆಧರಿಸಿದ ಸಮಾಜವು ಸೃಷ್ಟಿಯಾಗಲಿದೆ ಎಂದು ಅವರು ಪ್ರತಿಪಾದಿಸಿದರು.

ಗ್ರಾಮಾಂತರ ಭಾಗದ ಮಕ್ಕಳಿಗೆ ಕನ್ನಡದಲ್ಲೇ ಪಠ್ಯ ಸಂಪನ್ಮೂಲಗಳು ಸಿಕ್ಕಿದರೆ ಅವರು ಕೂಡ ಪ್ರಗತಿ ಸಾಧಿಸುತ್ತಾರೆ. ಆದ್ದರಿಂದ, ಕನ್ನಡದಲ್ಲೇ ಹೆಚ್ಚಿನ ಪುಸ್ತಕಗಳನ್ನು ಹೊರತರುತ್ತಿರುವುದು ಗಮನಾರ್ಹವಾಗಿದೆ. ಎನ್ಇಪಿ ಕೂಡ ದೇಶಭಾಷೆಗಳ ಸಂವರ್ಧನೆಗೆ ಒತ್ತು ಕೊಡುತ್ತಿದೆ ಎಂದು ಅಶ್ವತ್ಥನಾರಾಯಣ ನುಡಿದರು.

ಕಾರ್ಯಕ್ರಮದಲ್ಲಿ ಶ್ರೀ ಸಿದ್ಧರಾಮ ಮಹಾಸ್ವಾಮಿಗಳು, ಗುಲಬರ್ಗ ವಿವಿ ಕುಲಪತಿ ಪ್ರೊ.ದಯಾನಂದ ಅಗಸರ, ಪ್ರೊ.ಎಚ್.ಟಿ.ಪೋತೆ, ಪತ್ರಕರ್ತ ಹರಿಪ್ರಕಾಶ ಕೋಣೆಮನೆ, ಎಂಎಲ್ಸಿ ಶಶಿಲ್ ನಮೋಶಿ, ದತ್ತಾತ್ರೇಯ ರೇವೂರ, ಲೇಖಕರಾದ ಡಾ.ಸ್ವಾಮಿರಾವ್ ಕುಲಕರ್ಣಿ, ಡಾ.ಶ್ರೀಶೈಲ ನಾಗರಾಳ. ಡಾ.ಗವಿಸಿದ್ಧಪ್ಪ ಪಾಟೀಲ ಮುಂತಾದವರು ಇದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!