ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂದಿನಿಂದ ರಾಜ್ಯದಲ್ಲಿ ಸಾಕಷ್ಟು ವಸ್ತುಗಳ ಬೆಲೆ ಏರಿಕೆಯಾಗಲಿದೆ. ಹಾಲು, ಮೊಸರು, ವಿದ್ಯುತ್, ಟೋಲ್, ಮುದ್ರಾಂಕ ಶುಲ್ಕ ಸೇರಿ ಅನೇಕ ವಸ್ತುಗಳು ಅಥವಾ ಸೇವೆಗಳ ದರ ಏರಿಕೆ ಜಾರಿಗೆ ಬಂದಿದೆ. ಮತ್ತೊಂದೆಡೆ, ಕಸ ಸಂಗ್ರಹ ಸೆಸ್ ಕೂಡ ಜಾರಿಯಾಗುತ್ತಿದೆ. ಇಂದಿನಿಂದ ಯಾವೆಲ್ಲ ವಸ್ತು, ಸೇವೆಗಳ ದರ ಎಷ್ಟು ಹೆಚ್ಚಳವಾಗಿದೆ ಎಂಬ ಮಾಹಿತಿ ಇಲ್ಲಿದೆ.
ಇಂದಿನಿಂದ ನಂದಿನಿ ಹಾಲಿನ ಎಲ್ಲಾ ಮಾದರಿಯ ಪ್ಯಾಕೆಟ್ ದರ ಪ್ರತಿ ಲೀಟರ್ಗೆ 4 ರೂಪಾಯಿ ಏರಿಕೆಯಾಗಿದೆ. ಜೊತೆಗೆ ಮೊಸರಿನ ದರವೂ ಪ್ರತಿ ಲೀಟರ್ಗೆ 4 ರೂಪಾಯಿ ಏರಿಕೆಯಾಗಿದೆ. ಇಂದಿನಿಂದ ಪ್ರತಿಯೂನಿಟ್ಗೆ 36 ಪೈಸೆ ವಿದ್ಯುತ್ ದರ ಏರಿಕೆಯಾಗಿದೆ. ಇದರ ಜೊತೆಗೆ ಮಾಸಿಕ ಶುಲ್ಕವೂ 20 ರೂಪಾಯಿ ಹೆಚ್ಚಳವಾಗುತ್ತಿದೆ. ಇದರಿಂದ 120 ರೂಪಾಯಿ ಇದ್ದ ನಿಗದಿತ ಶುಲ್ಕ, 140 ರೂಪಾಯಿಗೆ ಏರಿಕೆಯಾಗಲಿದೆ. ಗೃಹಜ್ಯೋತಿ ಬಳಕೆದಾರರು 200 ಯೂನಿಟ್ ದಾಟಿದರೆ, ಬೆಲೆ ಏರಿಕೆ ಬಿಸಿ ತಟ್ಟಲಿದೆ.
ಹಾಲು, ವಿದ್ಯುತ್ ಜೊತೆ ರಾಜಧಾನಿ ಬೆಂಗಳೂರಿನ ಜನರಿಗೆ ಕಸದ ಸಂಗ್ರಹದ ಸೆಸ್ ಹೆಚ್ಚಳ ಮಾಡಿರುವುದು ಶಾಕ್ ಕೊಡಲಿದೆ. ವಸತಿ ಕಟ್ಟಡಗಳಿಗೆ 600 ಚದರಡಿವರೆಗೆ 10 ರೂಪಾಯಿ ಸೆಸ್ ಇರಲಿದ್ದು, 601 ರಿಂದ ಸಾವಿರ ಚದರಡಿವರೆಗೆ 50 ರೂಪಾಯಿ ಇರಲಿದೆ. ಇನ್ನು 1001 ರಿಂದ 2 ಸಾವಿರ ಚದರಡಿವರೆಗೂ 100 ರೂಪಾಯಿ, 2001 ರಿಂದ 3000 ಚದರಡಿವರೆಗೂ 150 ರೂಪಾಯಿ, 3001-4000 ಚದರಡಿ 200 ರೂಪಾಯಿ ಇರಲಿದೆ. ಇನ್ನು 4000 ಚದರಡಿ ಮೇಲ್ಪಟ್ಟು ಇದ್ರೆ, 400 ರೂಪಾಯಿ ಕಸದ ಸೆಸ್ ಕೊಡಬೇಕಾಗುತ್ತದೆ.
ವಸತಿ ಕಟ್ಟಡದ ದರ ಒಂದು ರೀತಿಯಾಗಿದ್ರೆ,ವಾಣಿಜ್ಯ ಕಟ್ಟಡಗಳ ಕಸದ ಸಂಗ್ರಹ ಸೆಸ್ ಕೆಜಿ ರೂಪದಲ್ಲಿ ಇರಲಿದೆ. ಯಾವುದೇ ಒಂದು ವಾಣಿಜ್ಯ ಕಟ್ಟಡದಲ್ಲಿ ನಿತ್ಯ 5 ಕೆಜಿ ಕಸ ಸಂಗ್ರಹ ಮಾಡಿದರೆ ಅದಕ್ಕೆ 500 ರೂಪಾಯಿ ಕೊಡಬೇಕಾಗುತ್ತದೆ. ಇನ್ನು 10 ಕೆಜಿ ಕಸಕ್ಕೆ 1,400ರೂಪಾಯಿ ಇರಲಿದೆ. 25 ಕೆಜಿ ಕಸಕ್ಕೆ 3 ಸಾವಿರ 500 ರೂಪಾಯಿ ಆದ್ರೆ, ನಿತ್ಯ 50 ಕೆಜಿ ಕಸ ಇದ್ರೆ 7,000ರೂಪಾಯಿ ಇರಲಿದೆ. ಇನ್ನು 100 ಕೆಜಿ ಕಸಕ್ಕೆ ಭರ್ತಿ 14 ಸಾವಿರ ರೂಪಾಯಿ ಇರಲಿದೆ.
ಮನೆ 3 ಫ್ಲೋರ್ ಇದ್ದು ಲಿಫ್ಟ್ ಬಳಸುತ್ತಿದ್ದರೆ, ಅದರ ಪರಿಶೀಲನೆ ಮತ್ತು ರಿನಿವಲ್ಗೆ ಈವರೆಗೆ 800 ರೂಪಾಯಿಯಿಂದ 1 ಸಾವಿರ ರೂಪಾಯಿ ಇತ್ತು. ಅದು ಈಗ 5 ಸಾವಿರ ರೂಪಾಯಿಯಿಂದ 8 ಸಾವಿರ ರೂಪಾಯಿಗೆ ಏರಿಕೆಯಾಗಲಿದೆ. ಫ್ಲೋರ್ಗಳು ಏರಿಕೆಯಾದಂತೆ ದರವೂ ಹೆಚ್ಚಾಗಲಿದೆ.