Monday, October 3, 2022

Latest Posts

ನಾಳೆಯಿಂದ ವಿಧಾನ ಮಂಡಲದ ಮಳೆಗಾಲದ ಅಧಿವೇಶನ ಶುರು

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಸೆ.12ರಿಂದ 10 ದಿನಗಳ ಮಳೆಗಾಲದ ಅಧಿವೇಶನ ಆರಂಭವಾಗಲಿದ್ದು, ಪ್ರತಿಪಕ್ಷ ಹಾಗೂ ಆಡಳಿತ ಪಕ್ಷದ ನಡುವೆ ಸದನ ಕಲಹ ನಡೆಯಲಿದೆ. ಮೂರು ಪ್ರಮುಖ ಪಕ್ಷಗಳಿಗೆ ಈಗಾಗಲೇ 2023ರ ಚುನಾವಣೆ ಕಾವು ಮುಟ್ಟಿದ್ದು, ನಾಳೆಯಿಂದ ಸೆ.23ರ ತನಕ ನಡೆಯಲಿರುವ ಮಳೆಗಾಲದ ವಿಧಾನಮಂಡಲ ಅಧಿವೇಶನ ಪರಸ್ಪರ ಆರೋಪ-ಪ್ರತ್ಯಾರೋಪ, ಏಟು-ಎದುರೇಟು ನೀಡಲು ವೇದಿಕೆಯಾಗಿ ಪರಿಣಮಿಸಲಿದೆ.

10 ದಿನಗಳ ಮಳೆಗಾಲದ ಅಧಿವೇಶನ

ಇತ್ತ ಪ್ರತಿಪಕ್ಷಗಳು ಮುಟ್ಟಿಸಲಿರುವ ಬಿಸಿ ತಣ್ಣಗಾಗಿಸಲು ಆಡಳಿತ ಪಕ್ಷವೂ ಸನ್ನದ್ಧವಾಗಿದೆ. ಸರ್ಕಾರದ ಅಭಿವೃದ್ಧಿ ಕೆಲಸ, ಸಾಧನೆ, ನೆರೆ ಪರಿಹಾರ ಸಂಬಂಧ ಸಮರ್ಥವಾಗಿ ಉತ್ತರಿಸಲು ತಯಾರಿ ನಡೆಸಿದೆ. ಪ್ರತಿಪಕ್ಷಗಳ ತಂತ್ರಗಾರಿಕೆಗೆ ಪ್ರತಿ ತಂತ್ರಗಾರಿಕೆಯನ್ನೂ ಬಿಜೆಪಿ ಹೆಣೆದುಕೊಂಡಿದೆ. ಮುಖ್ಯವಾಗಿ ಕಾಂಗ್ರೆಸ್ ಆಡಳಿತಾವಧಿಯ ಅಕ್ರಮಗಳು, ವೈಫಲ್ಯಗಳ ಪಟ್ಟಿಯನ್ನು ಸಿದ್ಧಪಡಿಸಿಕೊಂಡು ಪ್ರತಿಪಕ್ಷದ ಏಟಿಗೆ ಎದುರೇಟು ನೀಡಲು ಬೊಮ್ಮಾಯಿ ಸರ್ಕಾರವೂ ಸಿದ್ಧವಾಗಿದೆ.

ಬಿಜೆಪಿ ಪ್ರಮುಖವಾಗಿ ಪ್ರತಿಪಕ್ಷದ ಭ್ರಷ್ಟಾಚಾರದ ಅಸ್ತ್ರಕ್ಕೆ ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆ ಬಾವಿ ಅವ್ಯವಹಾರ, ಶುದ್ಧ ಕುಡಿಯುವ ನೀರಿನ ಘಟಕಗಳ ಸ್ಥಾಪನೆಯಲ್ಲಿ ಅಕ್ರಮ, ಪೊಲೀಸ್ ಪೇದೆ ಹಾಗೂ ಶಿಕ್ಷಕರ ನೇಮಕದಲ್ಲಿ ಗೋಲ್‌ಮಾಲ್, ವಿದ್ಯುತ್ ಖರೀದಿ ಒಪ್ಪಂದ, ಸೋಲಾರ್ ಘಟಕಗಳ ಹಂಚಿಕೆ ಹಗರಣ, ಅರ್ಕಾವತಿ ರೀಡು ಪ್ರಕರಣಕ್ಕೆ ಸಂಬಂಧಿಸಿದ ನ್ಯಾ.ಕೆಂಪಣ್ಣ ಆಯೋಗದ ವರದಿ,ಬೆಂಗಳೂರಿನಲ್ಲಿ ಮಳೆ ಅವಾಂತರದ ಕಾರಣಗಳು, ಒತ್ತುವರಿ ತೆರವಿನ ದಾಖಲೆಗಳನ್ನು ಮಂಡಿಸಿ ಪ್ರತ್ಯಸ್ತ್ರ ಹೂಡಲು ಸಜ್ಜಾಗಿದೆ. ಆ ಮೂಲಕ 10 ದಿನಗಳ ಮಳೆಗಾಲದ ಅಧಿವೇಶನ ಆಡಳಿತ ಪಕ್ಷ ಹಾಗೂ ಪ್ರತಿಪಕ್ಷಗಳ ನಡುವಿನ ಮಾತಿನ ಮಲ್ಲಯುದ್ಧಕ್ಕೆ ಸಾಕ್ಷಿಯಾಗಲಿದೆ.

ಮತಾಂತರ ನಿಷೇಧ ವಿಧೇಯಕ ಸೇರಿ ಪ್ರಮುಖ ವಿಧೇಯಕ ಮಂಡನೆ
ಅಧಿವೇಶನದಲ್ಲಿ ಸುಗ್ರೀವಾಜ್ಞೆ ರೂಪದಲ್ಲಿ ಜಾರಿಗೆ ಬಂದಿರುವ ಮತಾಂತರ ನಿಷೇಧ ಕಾನೂನು ಮಂಡನೆಯಾಗಲಿದೆ. ವಿಧಾನಪರಿಷತ್ ನಲ್ಲಿ ಮಂಡನೆಯಾಗದೇ ಹಾಗೇ ಉಳಿದುಕೊಂಡಿದ್ದ ಬಲವಂತದ ಮತಾಂತರ ನಿರ್ಬಂಧಿಸುವ ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ವಿಧೇಯಕವನ್ನು ಇದೇ ಮೇನಲ್ಲಿ ಆಧ್ಯಾದೇಶ ಮೂಲಕ ಜಾರಿಗೆ ತರಲಾಗಿತ್ತು. ಇದೀಗ ಈ ಅಧಿವೇಶನದಲ್ಲಿ ವಿಧೇಯಕವನ್ನು ಉಭಯ ಸದನದಲ್ಲಿ ಮಂಡಿಸಿ ಕಾಯ್ದೆ ಜಾರಿಗೆ ತರಲು ಸರ್ಕಾರ ನಿರ್ಧರಿಸಿದೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!